ಸಿಎಂ ಬದಲಿಗೆ ವರಿಷ್ಠರು ಸದ್ಯ ಒಪ್ಪಿಲ್ಲ : ಯತೀಂದ್ರ

Published : Dec 09, 2025, 05:43 AM IST
Yathindra Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ‘ನನಗೆ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂಬ ವಿಶ್ವಾಸವಿದೆ. ಏಕೆಂದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಬದಲಾವಣೆ ಬಯಕೆಗೆ ಹೈಕಮಾಂಡ್‌ ಸದ್ಯಕ್ಕೆ ಒಪ್ಪಿಲ್ಲ’ ಎಂದು ಹೇಳಿದ್ದು ಮಾತಿನ ಚಕಮಕಿಗೆ ಕಾರಣವಾಗಿದೆ.

 ಸುವರ್ಣಸೌಧ/ಬೆಳಗಾವಿ :  ನಾಯಕತ್ವ ಬದಲಾವಣೆ ಕುರಿತ ಬಣ ಬಡಿದಾಟಕ್ಕೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಿಂದ ದೊರಕಿದ್ದ ತಾತ್ಕಾಲಿಕ ವಿರಾಮ ಅಧಿವೇಶನದ ಮೊದಲ ದಿನವೇ ಅಂತ್ಯ ಕಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ‘ನನಗೆ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂಬ ವಿಶ್ವಾಸವಿದೆ. ಏಕೆಂದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಬದಲಾವಣೆ ಬಯಕೆಗೆ ಹೈಕಮಾಂಡ್‌ ಸದ್ಯಕ್ಕೆ ಒಪ್ಪಿಲ್ಲ’ ಎಂದು ಹೇಳಿದ್ದು, ಉಭಯ ಬಣಗಳ ನಡುವೆ ಮತ್ತೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅವರು, ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ತಮಗೂ ಅವಕಾಶ ಕೊಡಿ ಎಂದು ಕೋರಿದ್ದರು. ಆದರೆ, ಹೈಕಮಾಂಡ್‌ ಸದ್ಯಕ್ಕೆ ಒಪ್ಪಿಲ್ಲ, ಈಗ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಇಲ್ಲ ಎಂದು ಹೇಳಿದೆ. ಹೀಗಾಗಿ ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನನಗೆ ವಿಶ್ವಾಸವಿದೆ’ ಎಂದು ಹೇಳಿದರು.

ಈ ಹೇಳಿಕೆ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕಮಾರ್‌ ಬಣದಲ್ಲಿ ಚಟುವಟಿಕೆ ಆರಂಭಗೊಂಡಿದ್ದು, ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌, ‘ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಜ.8 ಮತ್ತು 9ಕ್ಕೆ ಕಾಯಿರಿ’ ಎಂದು ಹೇಳಿದ್ದಾರೆ. ಪೂರಕವಾಗಿ ಡಿ.ಕೆ ಶಿವಕುಮಾರ್‌ ಆಪ್ತ ಶಾಸಕರಾದ ರವಿ ಗಣಿಗ, ಬಸವರಾಜ ಶಿವಗಂಗಾ, ಎಚ್.ಡಿ. ರಂಗನಾಥ್‌ ಸೇರಿ ಸಾಲು-ಸಾಲು ಶಾಸಕರು ಡಿ.ಕೆ. ಶಿವಕುಮಾರ್ ಪರ ದನಿ ಎತ್ತಿದ್ದಾರೆ. ಜತೆಗೆ ಡಿಕೆಶಿ ಬಣದ ಶಾಸಕರು ಸುವರ್ಣಸೌಧದಲ್ಲಿ ಒಂದೆಡೆ ಸೇರಿ ಚರ್ಚಿಸಿದ್ದಾರೆ. ಮೊಗಸಾಲೆಯಲ್ಲೂ ಸಿಎಂ ಬದಲಾವಣೆಯ ಕುರಿತು ಆಡಳಿತ- ಪ್ರತಿಪಕ್ಷಗಳ ನಡುವೆ ಚರ್ಚೆ ನಡೆದಿದೆ.

ಯತೀಂದ್ರ ಹೇಳಿದ್ದೇನು?:

ಬೆಳಗಾವಿ ವಿಮಾನ ನಿಲ್ದಾಣ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಯತೀಂದ್ರ, ‘ಡಿ.ಕೆ.ಶಿವಕುಮಾರ್‌ ಅವರು ತಮಗೂ ಅವಕಾಶ ಕೊಡಿ, ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಕೇಳಿದ್ದು ನಿಜ. ಆದರೆ, ಹೈಕಮಾಂಡ್‌ ನಾಯಕರು ನಾಯಕತ್ವ ಬದಲಾವಣೆ ಪರಿಸ್ಥಿತಿ ಸದ್ಯ ಇಲ್ಲ ಎಂದು ಹೇಳಿದ್ದಾರೆ’ ಎಂದರು.

ಹಾಗಾದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಾರಾ? ಎಂಬ ಪ್ರಶ್ನೆಗೆ, ‘ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸುವ ವಿಶ್ವಾಸವಿದೆ. ಮುಖ್ಯಮಂತ್ರಿ ಬದಲಾವಣೆಗೆ ಕಾರಣಗಳೇ ಇಲ್ಲ’ ಎಂದರು.

ಒಗ್ಗಟ್ಟು ಪ್ರದರ್ಶಿಸಲಷ್ಟೇ ಬ್ರೇಕ್‌ಫಾಸ್ಟ್:

ಸಿಎಂ-ಡಿಸಿಎಂ ನಡುವಿನ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ನಡೆದಿದ್ದು ಯಾಕೆ? ಎಂಬ ಪ್ರಶ್ನೆಗೆ, ‘ನಾಯಕತ್ವ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ತೆರೆ ಎಳೆದು ಒಗ್ಗಟ್ಟು ಪ್ರದರ್ಶಿಸಲು ಹೈಕಮಾಂಡ್ ಹೇಳಿದ್ದರು. ಅದಕ್ಕಾಗಿಯೇ ಇಬ್ಬರೂ ನಾಯಕರು ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರು ಸಿಎಂ ಬದಲಾಗುವುದಾಗಿ ಹೇಳುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ, ‘ನಮ್ಮ ಸರ್ಕಾರ ರಚನೆಯಾದ ದಿನದಿಂದಲೂ ಹೇಳುತ್ತಲೇ ಬರುತ್ತಿದ್ದಾರೆ. ಯಾವುದಾದರೂ ಆಗಿದೆಯಾ? ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಅವರು ಕನಸು ಕಾಣಬೇಕು ಅಷ್ಟೆ. ಬಿಜೆಪಿಯವರಿಗೆ ನಿಜವಾಗಲೂ ಜನರ ಬಗ್ಗೆ ಕಾಳಜಿ ಇದ್ದರೆ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ’ ಎಂದರು.

ಸಿಎಲ್‌ಪಿಯಲ್ಲಿ 5 ವರ್ಷಕ್ಕೆ ಆಯ್ಕೆಯಾಗಿದೆ:

ಸುವರ್ಣಸೌಧದಲ್ಲೂ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಯತೀಂದ್ರ ಅವರು, ಶಾಸಕಾಂಗ ಪಕ್ಷದ ನಾಯಕರನ್ನು ಇಷ್ಟು ವರ್ಷಗಳಿಗೆ ಎಂದು ಆಯ್ಕೆ ಮಾಡುವುದಿಲ್ಲ. ಐದು ವರ್ಷದ ಆಡಳಿತಕ್ಕೆ ಚುನಾವಣೆ ನಡೆದಿರುತ್ತದೆ, ಶಾಸಕರು ಐದು ವರ್ಷಕ್ಕೆ ಆಯ್ಕೆಯಾಗಿರುತ್ತಾರೆ. ಶಾಸಕಾಂಗ ಪಕ್ಷದ ನಾಯಕರನ್ನೂ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತಾರೆ. ಹಾಗಾಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಂದುವರೆಯುತ್ತಾರೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ ಪುನರುಚ್ಚರಿಸಿದರು.

ಯತೀಂದ್ರ ಹೇಳಿದ್ದೇನು?

- ಡಿಕೆಶಿ ಅವರು ಸಿಎಂ ಹುದ್ದೆಯ ಅವಕಾಶ ಕೊಡಿ ಎಂದು ಕೋರಿದ್ದರು

- ಹೈಕಮಾಂಡ್‌ ಅಣತಿಯಂತೆ ಸಿದ್ದು-ಡಿಕೆಶಿ ನಡುವೆ ಬ್ರೇಕ್‌ಫಾಸ್ಟ್ ಸಭೆ

- ವರಿಷ್ಠರ ತೀರ್ಮಾನಕ್ಕೆ ತಾವು ಬದ್ಧ ಎಂದು ಇಬ್ಬರೂ ನಾಯಕರ ಹೇಳಿಕೆ

- ನಾಯಕತ್ವ ಬದಲಾವಣೆ ಸ್ಥಿತಿ ಈಗ ಇಲ್ಲ ಎಂದು ಹೈಕಮಾಂಡ್‌ ಸಂದೇಶ

- ಹೀಗಾಗಿ ಪೂರ್ಣಾವಧಿಗೆ ಸಿದ್ದು ಸಿಎಂ ಎಂದು ನನಗೆ ಸಂಪೂರ್ಣ ವಿಶ್ವಾಸ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌