ಲೋಕಸಭೆಯಲ್ಲಿ ಮಸೂದೆ ಸೋಲಿಸಿ ಕಾಂಗ್ರೆಸ್ಸಿಂದ ಭ್ರೂಣಹತ್ಯೆಯಂಥ ಪಾಪ ಕೃತ್ಯ : ಮೋದಿ

Published : Apr 19, 2026, 12:44 PM IST
pm Narendra modi

ಸಾರಾಂಶ

ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಲೋಕಸಭೆ ಸ್ಥಾನಗಳನ್ನು ಹೆಚ್ಚಿಸಿ, ತ್ವರಿತವಾಗಿ ಶೇ.33 ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆ ಅಂಗೀಕಾರಕ್ಕೆ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದ ಹೊರತಾಗಿಯೂ ವಿಪಕ್ಷಗಳು ಅದನ್ನು ತಡೆಯುವ ಮೂಲಕ ಮಹಿಳೆಯರ ಕನಸುಗಳನ್ನು ಕರುಣೆ ಇಲ್ಲದೆಯೇ ಪುಡಿಗಟ್ಟಿದವು

ನವದೆಹಲಿ : ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಲೋಕಸಭೆ ಸ್ಥಾನಗಳನ್ನು ಹೆಚ್ಚಿಸಿ, ತ್ವರಿತವಾಗಿ ಶೇ.33 ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆ ಅಂಗೀಕಾರಕ್ಕೆ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದ ಹೊರತಾಗಿಯೂ ವಿಪಕ್ಷಗಳು ಅದನ್ನು ತಡೆಯುವ ಮೂಲಕ ಮಹಿಳೆಯರ ಕನಸುಗಳನ್ನು ಕರುಣೆ ಇಲ್ಲದೆಯೇ ಪುಡಿಗಟ್ಟಿದವು. ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳ ವರ್ತನೆ ಭ್ರೂಣಹತ್ಯೆಯಂತಹ ಪಾಪ ಕೃತ್ಯಕ್ಕೆ ಸಮ. ಇದಕ್ಕಾಗಿ ದೇಶದ ಮಹಿಳೆಯರು ಕಠಿಣವಾಗಿ ಶಿಕ್ಷಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರಿಸಿದ್ದಾರೆ.

ಶನಿವಾರ ರಾತ್ರಿ 8.30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಮಹಿಳಾ ಮೀಸಲಿಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಆಗದ್ದಕ್ಕೆ ದೇಶದ ಮಹಿಳೆಯರ ಕ್ಷಮೆ ಯಾಚಿಸಿದರು.

ಇದೇ ವೇಳೆ, ವಿಧೇಯಕ ಅಂಗೀಕಾರಕ್ಕೆ ಬೇಕಾದ ಶೇ.66ರಷ್ಟು ಮತಗಳು ನಮಗೆ ಸಿಕ್ಕಿಲ್ಲದೇ ಇರಬಹುದು. ಆದರೆ ಶೇ.100ರಷ್ಟು ನಾರಿಶಕ್ತಿಯ ಬೆಂಬಲವನ್ನು ಗಳಿಸಿದ್ದೇವೆ. ಸರ್ಕಾರ ಮತಗಳನ್ನು ಕಳೆದುಕೊಂಡಿರಬಹುದು. ಆದರೆ ಮಹಿಳಾ ಸಬಲೀಕರಣದ ಪ್ರಯತ್ನಗಳನ್ನು ಅಲ್ಲ. ಮಹಿಳಾ ಮೀಸಲು ಹಾಗೂ ಸ್ತ್ರೀಯರ ಸಬಲೀಕರಣಕ್ಕೆ ಇರುವ ಎಲ್ಲ ತೊಡಕುಗಳನ್ನು ಸರ್ಕಾರ ತೆಗೆದು ಹಾಕಲಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣದ ಪ್ರಾಮಾಣಿಕ ಯತ್ನದಂತಹ ಭ್ರೂಣದ ಹತ್ಯೆಯನ್ನು ಕಾಂಗ್ರೆಸ್‌ ಹಾಗೂ ಅದರ ಮಿತ್ರರು ಲೋಕಸಭೆಯಲ್ಲಿ ದೇಶದ ಎದುರು ಮಾಡಿದ್ದಾರೆ. ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಹಾಗೂ ಸಮಾಜವಾದಿ ಪಕ್ಷಗಳು ಈ ಭ್ರೂಣಹತ್ಯೆಯ ಅಪರಾಧಿಗಳು. ಅವರು ದೇಶದ ಸಂವಿಧಾನದ ವಿರುದ್ಧದ ಕ್ರಿಮಿನಲ್‌ಗಳು, ಮಹಿಳಾ ಶಕ್ತಿ ವಿರುದ್ಧದ ಕ್ರಿಮಿನಲ್‌ಗಳು. ಮಹಿಳಾ ಮೀಸಲು ವಿಷಯವನ್ನೇ ಕಾಂಗ್ರೆಸ್‌ ದ್ವೇಷಿಸುತ್ತದೆ ಎಂದು 30 ನಿಮಿಷಗಳ ಭಾಷಣದಲ್ಲಿ ಹರಿಹಾಯ್ದರು.

ಕಾಂಗ್ರೆಸ್‌ ಪಕ್ಷ ವಿಭಜನೆಯ ವಾದವನ್ನು ದೇಶದಲ್ಲಿ ಪಸರಿಸಿತು. ಕ್ಷೇತ್ರ ಮರುವಿಂಗಡಣೆಯಿಂದ ಕೆಲವು ರಾಜ್ಯಗಳಿಗೆ ಅಪಾಯವಾಗಲಿದೆ ಎಂದು ಸುದ್ದಿ ಹರಡಿತು. ಯಾವ ರಾಜ್ಯದ ಪಾಲೂ ತಗ್ಗುವುದಿಲ್ಲ, ಸ್ಥಾನಗಳು ಸಮಪ್ರಮಾಣದಲ್ಲಿ ಹೆಚ್ಚಾಗಲಿವೆ ಎಂದು ಸರ್ಕಾರ ಆರಂಭದಿಂದಲೂ ಹೇಳಿಕೊಂಡೇ ಬಂದಿತು. ಆದರೆ ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಹಾಗೂ ಎಸ್‌ಪಿ ಇದನ್ನು ಒಪ್ಪಿಕೊಳ್ಳಲೇ ಸಿದ್ಧವಿರಲಿಲ್ಲ ಎಂದು ಕಿಡಿಕಾರಿದರು.

ನಮ್ಮದು ಮಹಾಯಜ್ಞ:

‘ಮಹಿಳೆಯರ ಸಬಲೀಕರಣದ ಗುರಿ ಹೊಂದಿರುವ ನಾರಿ ಶಕ್ತಿ ಉಪಕ್ರಮವು ಒಂದು ಮಹಾಯಜ್ಞ. ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ಕುಗ್ಗುವುದಿಲ್ಲ. ನಮ್ಮ ಆಂತಃಶಕ್ತಿ ಶಕ್ತಿ ಅಜೇಯವಾಗಿದೆ. ಇನ್ನಷ್ಟು ಅವಕಾಶಗಳು ನಮ್ಮ ಮುಂದೆ ಬರಲಿವೆ’ ಎಂದರು.

ಮೋದಿ ಹೇಳಿದ್ದೇನು?:

ಇದೇ ವೇಳೆ ಶುಕ್ರವಾರ ಲೋಕಸಭೆಯಲ್ಲಿ ವಿಧೇಯಕಕ್ಕೆ ಸೋಲಾದ ಬಳಿಕ ವಿಪಕ್ಷಗಳ ಸಂಭ್ರಮಾಚರಣೆ ಬಗ್ಗೆ ಕಿಡಿಕಾರಿದ ಪ್ರಧಾನಿ ಮೋದಿ, ‘ಕಾಂಗ್ರೆಸ್, ಟಿಎಂಸಿ, ಡಿಎಂಕೆ ಪಕ್ಷಗಳು ತಮ್ಮ ಸ್ವಾರ್ಥದ ರಾಜಕೀಯವನ್ನು ಹೇಗೆ ಸಂಭ್ರಮಿಸಿದವು ಎಂಬುದನ್ನು ಇಡೀ ದೇಶದ ಮಹಿಳೆಯರು ವೀಕ್ಷಿಸಿದ್ದಾರೆ. ಅವರ ಬಣ್ಣ ಇದೀಗ ಬಯಲಾಗಿದೆ. ಮಹಿಳಾ ಮೀಸಲು ವಿರೋಧಿಸುವ ಮೂಲಕ ವಿಪಕ್ಷಗಳು ಅಪರಾಧ ಎಸಗಿವೆ. ಇದಕ್ಕೆ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸಲಿದ್ದಾರೆ. ವಿಧೇಯಕಕ್ಕೆ ಸೋಲುಣಿಸುವ ಮೂಲಕ ವಿಪಕ್ಷಗಳು ನಮ್ಮ ಸಂವಿಧಾನವನ್ನು ಅವಮಾನಿಸಿದ್ದಾರೆ’ ಎಂದು ಗುಡುಗಿದರು.

ಕುಟುಂಬವಾದಕ್ಕೆ ಕುಟುಕು:

‘ಯಾರಿಂದಲೂ ಏನನ್ನೂ ಕಸಿದುಕೊಳ್ಳದೆಯೇ, ಮಹಿಳೆಯರಿಗೆ ಸಬಲೀಕರಣದ ರೆಕ್ಕೆಗಳನ್ನು ಕಲ್ಪಿಸುವುದು ವಿಧೇಯಕದ ಉದ್ದೇಶವಾಗಿತ್ತು. ಈ ಹಿಂದೆ ತಾನು ಮಾಡಿದ ತಪ್ಪನ್ನು ಕಾಂಗ್ರೆಸ್‌ ತಿದ್ದಿಕೊಳ್ಳುತ್ತದೆ ಎಂದು ನಾನು ಎಣಿಸಿದ್ದೆ. ಆದರೆ ಅವರು ತಮಗೆ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಕುಟುಂಬಗಳೇ ಮುನ್ನಡೆಸುವ ರಾಜಕೀಯ ಪಕ್ಷಗಳು, ಬೇರೆ ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರುವುದನ್ನು ಬಯಸುವುದಿಲ್ಲ. ಏಕೆಂದರೆ ಅಂಥ ಬೆಳವಣಿಗೆ ಸ್ವಾರ್ಥದ ರಾಜಕೀಯಕ್ಕೆ ಕೊನೆ ಹಾಡಬಹುದು ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ’ ಎಂದು ಹೆಸರು ಹೇಳದೆಯೇ ನಾಲ್ಕೂ ಪ್ರಮುಖ ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ಇದೇ ವೇಳೆ ಕಾಂಗ್ರೆಸ್‌ ವಿಭಜಕ ರಾಜಕೀಯ ನೀತಿ ಅನುಸರಿಸುತ್ತಿದೆ ಎಂದು ದೂರಿದ ಮೋದಿ, ‘ವಿಧೇಯಕವು ಉತ್ತರ- ದಕ್ಷಿಣವನ್ನು ವಿಭಜಿಸುತ್ತದೆ ಎಂಬ ಸುಳ್ಳು ಆರೋಪವನ್ನು ವಿಪಕ್ಷ ಮಾಡಿತು. ಮಹಿಳೆ ಯಾವುದನ್ನು ಬೇಕಾದರೂ ಮರೆಯಬಲ್ಲಳು; ಆದರೆ ತನಗೆ ಆದ ಅವಮಾನವನ್ನು ಎಂದಿಗೂ ಸಹಿಸಲಾರಳು. ಇದೀಗ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಮಾಡಿದ ಅವಮಾನವು ಎಂದೆಂದಿಗೂ ಮಹಿಳೆಯ ಹೃದಯದಲ್ಲಿ ಹಾಗೆಯೇ ಉಳಿದುಕೊಂಡಿರುತ್ತದೆ’ ಎಂದು ಚಾಟಿ ಬೀಸಿದರು.

ನಾರಿ ಶಕ್ತಿ ಉಪಕ್ರಮ ಮಹಾಯಜ್ಞ:

‘21ನೇ ಶತಮಾನದಲ್ಲಿ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ನಾರಿ ಶಕ್ತಿ ಉಪಕ್ರಮವು ಮಹಾಯಜ್ಞ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯನ್ನು ಹರಡುತ್ತಿವೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ದಾರಿತಪ್ಪಿಸುವ ನಿರೂಪಣೆಗಳನ್ನು ಬಳಸುತ್ತಿವೆ. ಇಂದು ನನ್ನ ದೇಶದ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು... ನೀವೆಲ್ಲರೂ ದುಃಖಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಾನು ಕೂಡ ನಿಮ್ಮ ದುಃಖದಲ್ಲಿ ಭಾಗಿಯಾಗಿದ್ದೇನೆ. ಆದರೆ ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ನಮ್ಮ ಪ್ರಯತ್ನ ಕುಗ್ಗುವುದಿಲ್ಲ, ನಮ್ಮ ಆಂತರಿಕ ಶಕ್ತಿ ಅಜೇಯವಾಗಿದೆ. ಹೆಚ್ಚಿನ ಅವಕಾಶಗಳು ನಮ್ಮ ಮುಂದೆ ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

++++++

ಕಾಂಗ್ರೆಸ್‌ ಸುಧಾರಣಾ ವಿರೋಧಿ:

‘ನಾರಿ ಶಕ್ತಿ ವಂದನಾ ಅಧಿನಿಯಮವು, ಈ ಕಾಲದ ಅಗತ್ಯವಾಗಿತ್ತು. ಜೊತೆಗೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ನಡುವೆ ಸಮತೋಲಿತ ಸಬಲೀಕರಣದ ಪ್ರಾಮಾಣಿಕ ಪ್ರಯತ್ನವಾಗಿತ್ತು. ಆದರೆ ದೇಶವನ್ನು ಕಟ್ಟುವ ಮತ್ತು ದೇಶದ ಅಭ್ಯುದಯದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್‌ ಎಂದೆಂದಿಗೂ ವಿರೋಧಿಸಿಕೊಂಡೇ ಬಂದಿದೆ. ನಮ್ಮೊಂದಿಗೆ ಇತರ ಹಲವಾರು ದೇಶಗಳು ಸ್ವಾತಂತ್ರ್ಯವನ್ನು ಗಳಿಸಿದವು. ಹೆಚ್ಚಿನ ದೇಶಗಳು ನಮಗಿಂತ ಬಹಳ ಮುಂದೆ ಹೋಗಿವೆ. ಇದರ ಹಿಂದಿನ ಕಾರಣವೆಂದರೆ ಕಾಂಗ್ರೆಸ್ ಎಲ್ಲಾ ಸುಧಾರಣೆಗಳನ್ನು ನಿಲ್ಲಿಸಿತು’ ಎಂದು ಮೋದಿ ಟೀಕಿಸಿದರು.

‘ಲಟ್ಕಾನಾ, ಭಟ್ಕಾನಾ, ಅಟ್ಕಾನಾ’ (ತಡೆಗಳು, ಅಡ್ಡಿ, ತೊಂದರೆ) ಎಂಬುದು ಕಾಂಗ್ರೆಸ್ಸಿನ ತತ್ವ ಮತ್ತು ಕಾರ್ಯವಿಧಾನ. ಅದು ನೆರೆಯ ರಾಷ್ಟ್ರಗಳೊಂದಿಗಿನ ಗಡಿ ಸಮಸ್ಯೆಗಳನ್ನು ಸ್ಥಗಿತಗೊಳಿಸಿತು. ಪಾಕಿಸ್ತಾನದೊಂದಿಗಿನ ಜಲ ವಿವಾದಗಳನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ ಒಬಿಸಿ ಮೀಸಲಾತಿ ನಿರ್ಧಾರವನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ ‘ಏಕ ಶ್ರೇಣಿ ಏಕ ಪಿಂಚಣಿ’ಯನ್ನು ಸ್ಥಗಿತಗೊಳಿಸಿತು. ಕಾಂಗ್ರೆಸ್ಸಿನ ಈ ವರ್ತನೆ ಯಾವಾಗಲೂ ದೇಶಕ್ಕೆ ಹಾನಿ ಮಾಡಿದೆ. ಕಾಂಗ್ರೆಸ್ಸಿನ ಎಲ್ಲಾ ವಿರೋಧ, ನಿರ್ಣಯವಿಲ್ಲದಿರುವಿಕೆ ಮತ್ತು ವಂಚನೆಯಿಂದಾಗಿ ದೇಶವು ಸಂಕಷ್ಟಕ್ಕೆ ಸಿಲುಕಿದೆ. ಇಂದು ದೇಶ ಎದುರಿಸುತ್ತಿರುವ ಎಲ್ಲಾ ದೊಡ್ಡ ಸವಾಲುಗಳು ಕಾಂಗ್ರೆಸ್ಸಿನ ಈ ನಡವಳಿಕೆಯಿಂದ ಹುಟ್ಟಿಕೊಂಡಿವೆ’ ಎಂದು ಆಕ್ರೋಶಿಸಿದರು.

ಇದನ್ನು ಒಂದು ದೊಡ್ಡ ಸೈದ್ಧಾಂತಿಕ ಯುದ್ಧ ಎಂದು ಕರೆದ ಪ್ರಧಾನಿ, ‘ಈ ಹೋರಾಟವು ಕೇವಲ ಕಾನೂನಿನ ಕುರಿತಾಗಿ ಇರುವಂಥದ್ದಲ್ಲ. ಬದಲಿಗೆ, ಕಾಂಗ್ರೆಸ್ಸಿನ ಸುಧಾರಣಾ ವಿರೋಧಿ ಮನಃಸ್ಥಿತಿಯ ಬಗ್ಗೆ ಇರುವಂಥದ್ದು. ದೇಶದ ಮಹಿಳೆಯರು ಕಾಂಗ್ರೆಸ್ಸಿನ ಈ ಮನಃಸ್ಥಿತಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಹಿಳಾ ಮೀಸಲಾತಿ ಮಸೂದೆ ತಿರಸ್ಕರಿಸಿದ ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ
ಮಹಾ ಶಾಲೆಗಳು ಮರಾಠಿ ಕಲಿಸದಿದ್ರೆ ಮಾನ್ಯತೆಯೇ ರದ್ದು