ರಾಜಕಾರಣವೆಂದರೆ ಅದೃಷ್ಟ, ಅವಕಾಶ: ಎಚ್.ವಿಶ್ವನಾಥ್

KannadaprabhaNewsNetwork |  
Published : Oct 30, 2023, 12:30 AM IST
೨೯ಕೆಎಂಎನ್‌ಡಿ-೩ಮಂಡ್ಯದ ರೈತ ಸಭಾಂಗಣದಲ್ಲಿ ಬಿ.ಬಸವರಾಜು ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಬಿ.ಬಸವರಾಜು ಅವರ ಮೌನ ಚಿಂತಕ ಕೃತಿಯನ್ನು ಮಾಜಿ ಸಚಿವ ಹೆಚ್.ವಿಶ್ವನಾಥ್ ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ರಾಜಕಾರಣವೆಂದರೆ ಅದೃಷ್ಟ, ಅವಕಾಶ: ಎಚ್.ವಿಶ್ವನಾಥ್ಗ್ರಾಮೀಣ ಜನರಿಗೆ ವಿದ್ಯೆ ಇಲ್ಲದಿದ್ದರೂ ವಿವೇಕವಿದೆಮೌನ ಚಿಂತಕ ಕೃತಿ ಲೋಕಾರ್ಪಣೆ ಸಮಾರಂಭ

- ಗ್ರಾಮೀಣ ಜನರಿಗೆ ವಿದ್ಯೆ ಇಲ್ಲದಿದ್ದರೂ ವಿವೇಕವಿದೆ - ಮೌನ ಚಿಂತಕ ಕೃತಿ ಲೋಕಾರ್ಪಣೆ ಸಮಾರಂಭ ಕನ್ನಡಪ್ರಭ ವಾರ್ತೆ ಮಂಡ್ಯ ರಾಜಕಾರಣವೆಂದರೆ ಅದೃಷ್ಟ ಮತ್ತು ಅವಕಾಶ. ಇವೆರಡೂ ಸಿಕ್ಕಾಗ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು. ಭಾನುವಾರ ನಗರದ ರೈತ ಸಭಾಂಗಣದಲ್ಲಿ ಬಿ.ಬಸವರಾಜು ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಬಿ.ಬಸವರಾಜು ಅವರಿಗೆ ಅಭಿನಂದನೆ ಮತ್ತು ಮೌನ ಚಿಂತಕ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತದಲ್ಲಿ ರಾಜಕೀಯ ಎನ್ನುವುದು ಬಹಗಳ ಮುಖ್ಯ. ರಾಜಕಾರಣವಿಲ್ಲದೆ ಏನೂ ಇಲ್ಲ. ರಾಜಕೀಯ ಸಾಮಾನ್ಯ ಜನರ ಜೀವನದ ಭಾಗವಾಗಿದೆ. ಅದಕ್ಕೆ ಅಂಬೇಡ್ಕರ್ ಅವರು ಭಾರತದಲ್ಲಿ ಬದುಕುವ ಯಾವುದೇ ಜಾತಿ-ಜನಾಂಗ, ಧರ್ಮದವರ ಭವಿಷ್ಯದ ಜೀವನದ ಭಾಗ ರಾಜಕೀಯ ಅಧಿಕಾರ ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ಯಾರು ಯಾವ ಸಮಯದಲ್ಲಿ ಏನಾಗುತ್ತಾರೆ ಎಂಬುದನ್ನು ಊಹಿಸಲಾಗುವುದಿಲ್ಲ. ನನ್ನ ತಂದೆ-ತಾಯಿ ಅಕ್ಷರವಂತರಲ್ಲ. ನಾನು ಓದಿ ಕಾನೂನು ಪದವಿ ಪಡೆದೆ. ರಾಜಕಾರಣ ಪ್ರವೇಶಿಸಿ ಶಾಸಕ, ಮಂತ್ರಿಯೂ ಆದೆ. ಜೀವನದಲ್ಲಿ ಇವೆಲ್ಲಾ ಹುದ್ದೆ ಸಿಗುತ್ತವೆ ಎಂದು ನಾನು ಕನಸಿನಲ್ಲೂ ಕಂಡಿರಲಿಲ್ಲ ಎಂದರು. ಗ್ರಾಮೀಣ ಜನರಿಗೆ ವಿದ್ಯೆ ಇಲ್ಲದಿದ್ದರೂ ವಿವೇಕವಿದೆ. ನಾಗರೀಕತೆ, ಸಂಸ್ಕೃತಿ, ಸಂಸ್ಕಾರ ಹಳ್ಳಿಗಳಲ್ಲಿ ಇಂದಿಗೂ ಉಳಿದುಕೊಂಡಿದೆ. ಸ್ನೇಹಕ್ಕೆ, ಪ್ರೀತಿಗೆ ವಿಶೇಷ ಗೌರವ-ಮರ್ಯಾದೆಗಳನ್ನು ನೀಡುತ್ತಿದ್ದಾರೆ. ನಗರದವರಗಿಂತಲೂ ಸಾಮಾನ್ಯ ಜ್ಞಾನ ಗ್ರಾಮೀಣ ಭಾಗದ ಜನರಲ್ಲಿದೆ ಎಂದು ನುಡಿದರು. ಪ್ರತಿಯೊಬ್ಬರ ಜೀವನದಲ್ಲಿ ಅನುಭವ ಎನ್ನುವುದು ದೊಡ್ಡದು. ಜೀವನದಲ್ಲಿ ಸಿಗುವ ಸ್ನೇಹಿತರು, ಗುರುಗಳು, ಮಾರ್ಗದರ್ಶಕರು, ಅವರೆಲ್ಲರೊಂದಿಗಿನ ಸಂಪರ್ಕ, ಒಡನಾಟ, ಅದರಿಂದ ಕಲಿತ ಪಾಠ, ಉತ್ತಮ ಜೀವನಕ್ಕೆ ಸಿಕ್ಕ ದಾರಿ ಇವೆಲ್ಲವೂ ಪಠ್ಯದಿಂದ ಸಿಗುವಂತಹದ್ದಲ್ಲ. ಒಬ್ಬೊಬ್ಬರ ಅನುಭವವೂ ಒಂದೊಂದು ರೀತಿಯಲ್ಲಿರುತ್ತದೆ. ಅನುಭವಕ್ಕಿಂತ ದೊಡ್ಡದು ಬೇರಾವುದೂ ಇರುವುದಿಲ್ಲ ಎಂದರು. ಬಿ.ಬಸವರಾಜು ಅವರು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣವನ್ನು ರೂಢಿಸಿಕೊಂಡಿದ್ದರು. ಅವರಿಗೆ ರಾಜಕೀಯ ಗಾಡ್‌ಫಾದರ್ ಆಗಿ ಜಿ.ಮಾದೇಗೌಡರು ಸಿಕ್ಕರು. ಹಲವಾರು ನಾಯಕರು ಬಸವರಾಜು ಮೇಲೆ ಪ್ರಭಾವ ಬೀರಿ ವ್ಯಕ್ತಿತ್ವವನ್ನು ಅರಳಿಸಿದ್ದಾರೆ. ನನಗೂ ಮಂಡ್ಯ ಜಿಲ್ಲೆಯಲ್ಲಿ ಅಪಾರ ಸ್ನೇಹ ಬಳಗವಿದೆ. ಆ ಸ್ನೇಹದ ಸಂಕೋಲೆಯೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಜಿ.ಮಾದೇಗೌಡ, ಎಚ್.ಚೌಡಯ್ಯ, ಕೆ.ಎಸ್.ಪುಟ್ಟಣ್ಣಯ್ಯ ಸೇರಿದಂತೆ ಹಲವರೊಂದಿಗಿನ ಒಡನಾಟ ನನಗೆ ಹೊಸ ಹೊಸ ಅನುಭವವನ್ನು ತಂದುಕೊಟ್ಟಿದೆ ಎಂದರು. ರಾಜಕಾರಣಿಯಾದವರು ಮೊದಲು ಸ್ನೇಹ, ನಂತರ ಸೇವೆ, ಸಂಸಾರಕ್ಕೆ ಕೊನೆಯ ಸ್ಥಾನ ನೀಡಿರುತ್ತಾರೆ. ನಾನೂ, ಬಸವರಾಜು ಸೇರಿದಂತೆ ರಾಜಕಾರಣಿಗಳು ಏನೇ ಆಗಿದ್ದರೂ ಅದರ ಹಿಂದೆ ಪತ್ನಿಯರಿರುತ್ತಾರೆ. ಅವರು ಮುಕ್ತವಾಗಿ ಹೊರಗೆ ಬಿಟ್ಟಿರುವುದರಿಂದಲೇ ನಾವು ರಾಜಕಾರಣದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ವಹಿಸಿದ್ದರು. ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಶಿವರಾಮು, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು ಇತರರಿದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ