ಕನ್ನಡಪ್ರಭ ವಾರ್ತೆ, ತುಮಕೂರು ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘಕ್ಕೆ ಸರ್ಕಾರ ನಿವೇಶನ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು. ಗೃಹ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಲ್.ಜಗದೀಶ್ ಹೇಳಿದರು. ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ 24ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಜಗದೀಶ್, ಈ ವರ್ಷ ನಿವೃತ್ತರಾದ ಬಹಳಷ್ಟು ಪೊಲೀಸ್ ಅಧಿಕಾರಿಗಳು ಸಂಘದ ಸದಸ್ಯತ್ವ ಪಡೆದಿಲ್ಲ, ಅವರೆಲ್ಲಾ ಸದಸ್ಯರಾಗಿ ಸಂಘದ ವಿವಿಧ ಸೌಲಭ್ಯ ಪಡೆಯಬೇಕು ಎಂದು ಮನವಿ ಮಾಡಿದರು. ಒಂದು ಲಕ್ಷ ರು.ವರೆಗೆ ಚಿಕಿತ್ಸಾ ಸೌಲಭ್ಯವಿರುವ ಆರೋಗ್ಯ ವಿಮಾ ಯೋಜನೆ ನವೀಕರಣ ಮಾಡಿ, ಅದರ ಪ್ರಯೋಜನ ಪಡೆಯುವಂತೆ ಸದಸ್ಯರಿಗೆ ಸಲಹೆ ಮಾಡಿದರು. ನಿವೃತ್ತ ಎಸ್ಪಿ ಆನಂದ್ ಮಾತನಾಡಿ, ಸರ್ಕಾರದಿಂದ ನಗರದಲ್ಲಿ ನಿವೇಶನ ಪಡೆದು ಸಂಘದ ಸ್ವಂತ ಕಟ್ಟಡ ನಿರ್ಮಾಣ ಪ್ರಯತ್ನ ನಡೆದಿದೆ ಎಂದರು. ಸಂಘದ ಉಪಾಧ್ಯಕ್ಷ ಗಂಗಣ್ಣ ಮಾತನಾಡಿ, ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರ ನೆರವು ನೀಡುತ್ತಿದೆ. ಆದರೆ, ನಿವೃತ್ತ ಯೋಧರಿಗೆ ದೊರೆಯುವ ಸೌಲಭ್ಯಗಳು ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಸರ್ಕಾರ ನೀಡಬೇಕು ಎಂದು ಮಾಡಿದರು. ಸೈಬರ್ ಕ್ರೈಮ್ ಬ್ರ್ಯಾಂಚ್ ವಿಭಾಗದ ಪೊಲೀಸ್ ಸಿಬ್ಬಂದಿ ಹರೀಶ್ ಮಾತನಾಡಿ, ಸೈಬರ್ ವಂಚಕರ ಬಗ್ಗೆ ಎಚ್ಚರಿಕೆವಹಿಸುವ ಕುರಿತು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಶಿವಬಸವಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.