In the last two years, only 40 to 50 percent of the work has been completed. The quality of the remaining work is not up to par, and there is no maintenance at all. Half-hearted work has been done.

ಕನ್ನಡಪ್ರಭ ವಾರ್ತೆ, ಹುಮನಾಬಾದ್‌

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಯ ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ 5 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕಳಪೆಯಾಗಿದ್ದು, ಹಳ್ಳ ಹಿಡಿಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಪಟ್ಟಣದ ಅವರ ಗೃಹ ಕಚೇರಿಯಲ್ಲಿ ಬುಧವಾರ ಮಾತನಾಡಿ, ಹುಮನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಕಳೆದ ಡಿ. 22 ರಂದು ಮನೆ ಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಮಹಾತ್ವಕಾಂಕ್ಷಿ ಯೋಜನೆ ಉದ್ಘಾಟಿಸಿ ಇದೀಗ ಎರಡು ವರ್ಷದಲ್ಲಿ ಕೇವಲ ಶೇ. 40 ರಿಂದ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ ಗುಣಮಟ್ಟ ಲೆಕ್ಕಕ್ಕಿಲ್ಲ, ನಿರ್ವಹಣೆಯಂತೂ ಇಲ್ಲವೇ ಇಲ್ಲ. ಅರ್ಧಬಂರ್ಧ ಕೆಲಸ ನಡೆದಿದೆ ಎಂದರು.ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಕುಡಿಯುವ ಶುದ್ಧ ನೀರನ್ನು ಒದಗಿಸಬೇಕೆಂಬ ಜಲ ಜೀವನ್‌ ಮಿಷನ್‌ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಗೋಚರಿಸುತ್ತಿದೆ. ಇದಕ್ಕೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಬಿಡಿ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಿ ಕಳಪೆ ಮಟ್ಟದ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ ಎಂದಿದ್ದಾರೆ.ಕೆಲವು ಕಡೆಗಳಲ್ಲಿ ಪೈಪ್‌ಲೈನ್‌ ಕಾಮಗಾರಿ ಮುಗಿದು ಆರೇಳು ತಿಂಗಳಾಗಿದ್ದರೂ ಸಂಪರ್ಕ ಕೊಡುತ್ತಿಲ್ಲ, ಸಿಸಿ ರಸ್ತೆಗಳನ್ನ ಎಲ್ಲೆಂದರಲ್ಲಿ ಅಗೆದು ಅವುಗಳನ್ನು ದುರಸ್ತಿ ಮಾಡದೆ ಹಾಗೇ ಬಿಟ್ಟಿದ್ದಾರೆ ಇದರಿಂದ ಜನರು ಪರದಾಡುವಂತಾಗಿದೆ. ಒಟ್ಟಾರೆ ಮನೆ ಮನೆಗೆ ನೀರು ಕೊಡುವ ಕಾಮಗಾರಿ ಸಂಪೂರ್ಣವಾಗಿ ವಿಫಲವಾಗಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ರಸ್ತೆ ರಿಪೇರಿ ಮಾಡದೇ ಹೋಗಿದ್ದಾರೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.ಜೆಜೆಎಂ ಕಾಮಗಾರಿ 2023ರಿಂದ ಪ್ರಾರಂಭವಾಗಿದೆ. ದುಬಲಗುಂಡಿ ಗ್ರಾಮಕ್ಕೆ 5ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಿ ಎರಡು ವರ್ಷವಾದರೂ ಹಾಗೆಯೇ ಉಳಿದಿದೆ. ಅನೇಕ ಕಡೆ ರಸ್ತೆಗಳನ್ನು ಅಗೆದುಬಿಡಲಾಗಿದೆ. ಎಲ್ಲವೂ ಕಳಪೆ ಮಟ್ಟ ಕಾಮಗಾರಿಗಳು ನಡೆಯುತ್ತಿವೆ. ಗುತ್ತಿಗೆದಾರ ಬಿಡಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಈ ಕುರಿತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಜಿಪಂ ಸಿಇಒ ಪತ್ರ ನೀಡುವ ಮೂಲಕ ಸಂಪೂರ್ಣ ತನಿಖೆಗೆ ಆಗ್ರಹಿಸಲಾಗುತ್ತಿದೆ ಎಂದು ಮಾಜಿ ಸಚಿವರು ರಾಜಶೇಖರ ಪಾಟೀಲ್‌ ಹೇಳಿದರು.