ವಿಧಾನಮಂಡಲ ಅಧಿವೇಶನ ಮುಂದೂಡಿಕೆ ಸಾಧ್ಯತೆ

Published : Jul 23, 2026, 04:53 AM IST
DK Shivakumar

ಸಾರಾಂಶ

ಸಚಿವ ಸಂಪುಟ ವಿಸ್ತರಣೆ ವಿಳಂಬದ ಹಿನ್ನೆಲೆಯಲ್ಲಿ ಆ.6ರಿಂದ ನಡೆಯುವುದಾಗಿ ನಿರೀಕ್ಷಿಸಿದ್ದ ಮಳೆಗಾಲದ ವಿಧಾನಮಂಡಲ ಅಧಿವೇಶನ ಮುಂದೂಡಿಕೆ ಕಾಣುವ ಸಾಧ್ಯತೆಯಿದೆ. ಸಂಪುಟ ವಿಸ್ತರಣೆ ವಿಳಂಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿವೇಶನ ದಿನಾಂಕ ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ತಿಳಿದುಬಂದಿದೆ.

 ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ವಿಳಂಬದ ಹಿನ್ನೆಲೆಯಲ್ಲಿ ಆ.6ರಿಂದ ನಡೆಯುವುದಾಗಿ ನಿರೀಕ್ಷಿಸಿದ್ದ ಮಳೆಗಾಲದ ವಿಧಾನಮಂಡಲ ಅಧಿವೇಶನ ಮುಂದೂಡಿಕೆ ಕಾಣುವ ಸಾಧ್ಯತೆಯಿದೆ.

ಜು.22-24ರ ವೇಳೆಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರವು ಆ.6 ರಿಂದ ಅಧಿವೇಶನ ಕರೆಯುವ ಕುರಿತು ರಾಜ್ಯಪಾಲರಿಗೆ ಮಾಹಿತಿ ಕಳುಹಿಸಿತ್ತು. ರಾಜ್ಯಪಾಲರು ಅದಕ್ಕೆ ಸಮ್ಮತಿಯನ್ನೂ ಸೂಚಿಸಿದ್ದರೂ, ಸಂಪುಟ ವಿಸ್ತರಣೆ ವಿಳಂಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿವೇಶನ ದಿನಾಂಕ ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ತಿಳಿದುಬಂದಿದೆ.

ಇದೀಗ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನವೂ ಮುಂದೂಡಿಕೆಯಾಗಲಿದೆ.

ನಿಯಮ ಹೇಳೋದೇನು?

ವಾಸ್ತವವಾಗಿ ಅಧಿವೇಶನಕ್ಕೆ ಇಂತಿಷ್ಟು ದಿನಗಳ ಮೊದಲು ಆದೇಶ ಹೊರಡಿಸಬೇಕೆಂಬ ಕಡ್ಡಾಯ ನಿಯಮವಿಲ್ಲ. ಅಧಿವೇಶನಕ್ಕೆ 2-3 ದಿನಗಳ ಮೊದಲು ಸಹ ತುರ್ತು ಅಧಿವೇಶನದ ಹೆಸರಿನಲ್ಲಿ ಅಧಿವೇಶನಗಳನ್ನು ನಡೆಸಿರುವ ಉದಾಹರಣೆ ಇದೆ.

ಆದರೆ, ಅಧಿವೇಶನದಲ್ಲಿ ಪ್ರಶ್ನೋತ್ತರಕ್ಕೆ ಅವಕಾಶ ನೀಡಬೇಕಾದರೆ ಪ್ರಶ್ನೆ ಕೇಳುವ ಶಾಸಕರಿಗೆ, ಪ್ರಶ್ನೆಗಳನ್ನು ಪರಿಶೀಲನೆ ಮಾಡಿ ಆಯಾ ಇಲಾಖೆಗೆ ಕಳುಹಿಸಬೇಕಾದ ಸ್ಪೀಕರ್‌ ಸಚಿವಾಲಯ ಸಿಬ್ಬಂದಿಗೆ ಹಾಗೂ ಪ್ರಶ್ನೆಗೆ ಉತ್ತರಿಸಲು ಸಚಿವರು, ಇಲಾಖಾ ಅಧಿಕಾರಿಗಳಿಗೆ ಸಮಯವಕಾಶ ಬೇಕಾಗುತ್ತದೆ.

ಇದಕ್ಕಾಗಿಯೇ ಅಧಿವೇಶನ ಆರಂಭವಾಗುವ 15 ದಿನ ಮೊದಲೇ ದಿನಾಂಕ ಪ್ರಕಟಿಸಲಾಗುತ್ತಿತ್ತು. 15 ದಿನಗಳ ಒಳಗಾಗಿ ಪ್ರಶ್ನೆಗಳನ್ನು ಸ್ಪೀಕರ್‌ ಕಚೇರಿಗೆ ಸಲ್ಲಿಸುವಂತೆ ಶಾಸಕರಿಗೆ ಹಾಗೂ ಪ್ರಶ್ನೆಗಳನ್ನು ಪರಿಶೀಲಿಸಿ ಉತ್ತರಿಸುವಂತೆ ಇಲಾಖೆಗಳಿಗೆ 10 ದಿನ ಸಮಯವಕಾಶ ನೀಡಲಾಗುತ್ತಿತ್ತು.ಆದರೆ, ಈಗ ಸಂಪುಟ ವಿಸ್ತರಣೆಯಾಗಿಲ್ಲ. ಹೊಸದಾಗಿ ಸಚಿವರಾಗುವವರು ಕಚೇರಿ ಪೂಜೆ, ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಇಲಾಖೆ ಅರಿಯಲು ಸಮಯವಕಾಶ ಬೇಕು. ಪ್ರಶ್ನೆಗಳಿಗೆ ಉತ್ತರಿಸಲು ಸೂಕ್ತ ಸಿದ್ಧತೆ ಬೇಕು.

ಹೀಗಾಗಿ ಆ.6 ರಂದು ಅಧಿವೇಶನ ಶುರುವಾದರೂ ಮೊದಲ ದಿನ ನಿಧನರಾಗಿದ್ದ ಹಾಲಿ ಸಚಿವರಾದ ಡಿ. ಸುಧಾಕರ್‌ ಅವರಿಗೆ ಸಂತಾಪ ಸೂಚಿಸಿ ಮುಂದೂಡಲಾಗುತ್ತಿತ್ತು. ಎರಡನೇ ದಿನ ಸ್ಪೀಕರ್‌ ಚುನಾವಣೆ ನಿಗದಿಯಾಗುತ್ತಿತ್ತು. ಆ.10 ರಿಂದ ಪ್ರಶ್ನೋತ್ತರ ಕಲಾಪ ಶುರುವಾಗುತ್ತಿದ್ದರಿಂದ ಜು.25ರ ಒಳಗೆ ಸಂಪುಟ ವಿಸ್ತರಣೆ ಆದರೂ ಆ.6 ರಿಂದ ಅಧಿವೇಶನ ನಡೆಸಬಹುದು.

ಆದರೆ, 27-28ರವರೆಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದೂಡಿದರೆ ಅನಿವಾರ್ಯವಾಗಿ ಆ.13 ಅಥವಾ ಆ.17ಕ್ಕೆ ಅಧಿವೇಶನ ಮುಂದೂಡಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಬರಗಾಲದ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯಂತಹ ಸಚಿವರು ಇಲ್ಲದೆ ಅಧಿವೇಶನ ಎದುರಿಸುವುದು ಕಷ್ಟಸಾಧ್ಯ. 34 ಸಚಿವರ ಬದಲಿಗೆ 14 ಮಂದಿ ಮಾತ್ರ ಸಚಿವರಿದ್ದು, ಬಹುತೇಕ ಖಾತೆಗಳು ಮುಖ್ಯಮಂತ್ರಿಗಳ ಬಳಿಯೇ ಇವೆ. ಹೀಗಾಗಿ ಸಂಪುಟ ವಿಸ್ತರಣೆ ಬಳಿಕವೇ ಅಧಿವೇಶನ ನಡೆಸಲು ಸರ್ಕಾರ ಚಿಂತನೆ ನಡೆಸಿದ್ದು, ಪರಿಣಾಮ ಅಧಿವೇಶನ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

- ಇಂತಿಷ್ಟು ದಿನಗಳ ಮೊದಲು ಅಧಿವೇಶನಕ್ಕೆ ಆದೇಶಿಸಬೇಕು ಎಂಬ ಕಡ್ಡಾಯ ನಿಯಮವಿಲ್ಲ.

- 2-3 ದಿನಗಳ ಮೊದಲು ಸಹ ಆದೇಶ ಹೊರಡಿಸಿ ತುರ್ತು ಅಧಿವೇಶನದ ನಡೆಸಿದ್ದೂ ಉಂಟು

- ಶಾಸಕರಿಗೆ ಪ್ರಶ್ನೆ ಕೇಳಲು, ಸಚಿವರಿಗೆ ಉತ್ತರಿಸಲು 15 ದಿನದ ಅವಕಾಶ ನೀಡುವುದುಂಟು

- ಆದರೆ ಸಂಪುಟ ವಿಸ್ತರಣೆ ಆಗಿ ಹೊಸ ಸಚಿವರು ಬಂದರೂ ದಿಢೀರ್‌ ಉತ್ತರಿಸಲು ಆಗದು

- ಹೀಗಾಗಿ ಆ.27/29ಕ್ಕೆ ಸಂಪುಟ ರಚನೆ ಆದರೆ ಆ.13/17ರಿಂದ ಅಧಿವೇಶನ ಆರಂಭ ಸಂಭವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿರಳೆ ಸದ್ದು ಕಡಿಮೆಯಾದರೆ 27/29ಕ್ಕೆ ಸಂಪುಟ ವಿಸ್ತರಣೆ?
ಆರತಿ ಕೃಷ್ಣ ಸಂಪುಟ ಸೇರ್ಪಡೆಗೆ ಸ್ಯಾಂ ಪಿತ್ರೋಡಾ ಲಾಬಿ ಬಲ?