ಜನರ ಕುಂದುಕೊರತೆ ಆಲಿಸಲು ಪ್ರಜಾಸೇವೆ ಇಲಾಖೆಗೆ ಚಾಲನೆ

Published : Sep 06, 2026, 07:53 AM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಹತ್ವಾಕಾಂಕ್ಷಿ ನೂತನ ಯೋಜನೆ ‘ಪ್ರಜಾಸೇವಾ ಇಲಾಖೆ’ಗೆ ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಶನಿವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು. 2026ರ ಜೂನ್ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವ ನಿರ್ಧಾರ ಕೈಗೊಂಡಿದ್ದರು.

ಕೂಡ್ಲಿಗಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಹತ್ವಾಕಾಂಕ್ಷಿ ನೂತನ ಯೋಜನೆ ‘ಪ್ರಜಾಸೇವಾ ಇಲಾಖೆ’ಗೆ ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಶನಿವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಕರ್ನಾಟಕ ಸರ್ಕಾರದ ವತಿಯಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ಸಲುವಾಗಿ ನೂತನ ‘ಪ್ರಜಾಸೇವಾ ಇಲಾಖೆ’ಯನ್ನು ರಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ಮರುದಿನವೇ ಘೋಷಿಸಿದ್ದರು. ಬಳಿಕ 2026ರ ಜೂನ್ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರುವ ನಿರ್ಧಾರ ಕೈಗೊಂಡಿದ್ದರು.

ಅದರಂತೆ ‘ಬಾಗಿಲಿಗೆ ಬರಲಿದೆ ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಆಶಯದೊಂದಿಗೆ ಪ್ರಜಾಸೇವಾ ಇಲಾಖೆಯ ಉದ್ಘಾಟನಾ ಕಾರ್ಯಕ್ರಮ ಕೂಡ್ಲಿಗಿಯ ಗುಡೇಕೋಟೆ ರಸ್ತೆಯಲ್ಲಿರುವ ಕೂಡ್ಲಿಗಿಯ ಶಾಸಕರ ಕಚೇರಿಯ ಮುಂಭಾಗದಲ್ಲಿ ಶನಿವಾರ ನಡೆಯಿತು.

ಸಂಸದೆ ಪ್ರಭಾ ಮಲ್ಲಿಕಾರ್ಜುನ, ಶಾಸಕಿ ಲತಾ ಮಲ್ಲಿಕಾರ್ಜುನ, ಶಾಲಿನಿ ರಜನೀಶ್‌ ಜೊತೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ, ಪ್ರಜಾಸೇವೆ ವೆಬ್ ಸೈಟ್ ಲೋಕಾರ್ಪಣೆ ಮಾಡಿದರು. ಇದೇ ವೇಳೆ, ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಈ ಕಾರ್ಯಕ್ರಮಕ್ಕೆ ಏಕಕಾಲದಲ್ಲಿ ಚಾಲನೆ ನೀಡಲಾಯಿತು.

ಇಲಾಖೆ ಉದ್ಘಾಟಿಸಿ ಮಾತನಾಡಿದ ಸಿಎಂ, ‘ಇಡೀ ರಾಜ್ಯಕ್ಕೆ ಜಯ ಸಿಗಬೇಕೆಂದು ವಿಜಯನಗರ ಸಾಮ್ರಾಜ್ಯ ಆಳಿದ ಹಂಪಿಯಂತಹ ಪುಣ್ಯಭೂಮಿ ಹೊಂದಿರುವ ವಿಜಯನಗರ ಜಿಲ್ಲೆಯಲ್ಲಿ ಪ್ರಜಾಸೇವಾ ಇಲಾಖೆ ಉದ್ಘಾಟನೆ ಮಾಡಿದ್ದೇನೆ. ನಾನು ಕೂಡ್ಲಿಗಿಗೆ ಬಂದ ತಕ್ಷಣ ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಹೋಗಿ ನಮನ ಸಲ್ಲಿಸಿದೆ, ದೆಹಲಿಯ ರಾಜಘಾಟ್ ಬಿಟ್ಟರೆ ಗಾಂಧೀಜಿಯ ಚಿತಾಭಸ್ಮ ಕೂಡ್ಲಿಗಿಯಲ್ಲಿ ಮಾತ್ರ ಇದೆ. ಇಂತಹ ಪುಣ್ಯದ ನೆಲದಲ್ಲಿ ನಾನು ಪ್ರಜಾಸೇವಾ ಇಲಾಖೆ ಉದ್ಘಾಟನೆ ಮಾಡಿದ್ದೇನೆ ಎಂಬ ಹೆಮ್ಮೆ ಇದೆ. ಪ್ರಜಾಸೇವಾ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಲಿದೆ’ ಎಂದರು.

2 ತಾಸು ಅರ್ಜಿ ಸ್ವೀಕರಿಸಿದ ಸಿಎಂ:

ಇದೇ ವೇಳೆ, ವೇದಿಕೆಯಿಂಲೇ ಎಲ್ಲಾ ಜಿಲ್ಲೆಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದರು. ಇವತ್ತು ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಪರಿಹಾರ ಆಗಿವೆ ಎಂಬುದರ ಬಗ್ಗೆ ಸಂಜೆಯ ವೇಳೆಗೆ ವರದಿ ನೀಡಲು ಸಚಿವರು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ, ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಚೆಕ್ ವಿತರಣೆ ಮಾಡಿದರು. ನಂತರ, ವೇದಿಕೆಯ ಮುಂಭಾಗದಲ್ಲಿ ಕುಳಿತು ಜನರಿಂದ ಅಹವಾಲು ಸ್ವೀಕರಿಸಿ, ಖುದ್ದಾಗಿ ಅರ್ಜಿಗಳ ಪರಿಶೀಲನೆ ನಡೆಸಿದರು. ಸತತ 2 ಗಂಟೆ ಜನರ ಅಹವಾಲು ಸ್ವೀಕರಿಸಿದ ಸಿಎಂ, ಸಮಸ್ಯೆ ಆಲಿಸುತ್ತಲೇ ವೇದಿಕೆಯ ಮೇಲೆ ಊಟ ಮಾಡಿದರು.

ಈ ವೇಳೆ, ಪ್ರಿಯಾಂಕ್ ಖರ್ಗೆಯಿಂದ ಮಾಹಿತಿ ಪಡೆಯುವಾಗ ಕಲಬುರಗಿಯ ಅಜ್ಜಿಯ ಸಮಸ್ಯೆ ಆಲಿಸಿದರು. ಮನೆ ಬಿಲ್ ಆಗಿಲ್ಲ ಎಂದು ಅಜ್ಜಿ ಸಮಸ್ಯೆ ಹೇಳಿಕೊಂಡಾಗ ಕೂಡಲೇ ಸಮಸ್ಯೆ ಸರಿಪಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಕ್ತಿಯೋಸಿಸ್ ಸಮಸ್ಯೆಯಿಂದ ಬಳಲುತ್ತಿರುವ ಹೆಣ್ಣುಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಬಂದ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿಯ ಸಿದ್ದಮ್ಮ, ನನ್ನ ಮಗುವಿಗೆ ಡ್ರೈಸ್ಕಿನ್ ಸಮಸ್ಯೆ ಇದೆ ಪರಿಹಾರ ನೀಡಿ ಎಂದು ಅಳುತ್ತಲೇ ಮುಖ ಮುಚ್ಚಿಕೊಂಡಾಗ, ಸಮಾಧಾನದಿಂದ ಆಕೆಯ ಸಮಸ್ಯೆ ಆಲಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಅಲ್ಲಿಯೇ ಇದ್ದ ತಾಲೂಕು ವೈದ್ಯಾಧಿಕಾರಿ ಹಾಗೂ ಶಾಸಕ ಎನ್.ಟಿ.ಶ್ರೀನಿವಾಸಗೆ ಸೂಚಿಸಿದರು.

ಹುಣಸೆ ಬೀಜದ ಹಾರದೊಂದಿಗೆ ಸನ್ಮಾನ:

ಈ ಮಧ್ಯೆ, ಕಾರ್ಯಕ್ರಮದ ವೇದಿಕೆಯಲ್ಲಿ ಡಿಕೆಶಿಗೆ ಒನಕೆ ಓಬವ್ವ ಅವರ ಮೂರ್ತಿ, ಕಲ್ಲಿನ ತೇರಿನ ಸ್ಮಾರಕ ನೀಡಿ, ವಿಶೇಷವಾಗಿ ಹುಣಸೆ ಬೀಜದ ಹಾರದೊಂದಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು, ಅವರು ವಿವಿಧ ಇಲಾಖೆಗಳ ಸ್ಟಾಲ್‌ಗಳಿಗೆ ಭೇಟಿ ನೀಡಿ, ಅವುಗಳ ವೀಕ್ಷಣೆ ಮಾಡಿದರು. ಸ್ಥಳೀಯ ಅಧಿಕಾರಿಗಳಿಂದ ಮತ್ತು ಜನರಿಂದ ಅಲ್ಲಿನ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಆರವತ್ತಕ್ಕೂ ಹೆಚ್ಚು ಸ್ಟಾಲ್ ಗಳನ್ನು ಹಾಕಲಾಗಿತ್ತು.

2 ತಾಸು ಖುದ್ದು ಅಹವಾಲುಗಳ ಆಲಿಸಿದ ಡಿಕೆಶಿ

ಕೂಡ್ಲಿಗಿ: ಪ್ರಜಾಸೇವೆ ಯೋಜನೆಗೆ ಚಾಲನೆ ನೀಡಿದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು, ವೇದಿಕೆಯ ಮುಂಭಾಗದಲ್ಲಿ ಕುಳಿತು ಜನರಿಂದ ಖುದ್ದಾಗಿ ಅಹವಾಲು ಸ್ವೀಕರಿಸಿದರು. ಸತತ 2 ಗಂಟೆ ಜನರ ಮನವಿ ಸ್ವೀಕರಿಸಿ ಸಿಎಂ, ಸಮಸ್ಯೆ ಆಲಿಸುತ್ತಲೇ ವೇದಿಕೆ ಮೇಲೆ ಊಟ ಮಾಡಿದರು. ಈ ವೇಳೆ, ಪ್ರಿಯಾಂಕ್ ಖರ್ಗೆಯಿಂದ ಮಾಹಿತಿ ಪಡೆವಾಗ ಕಲಬುರಗಿಯ ಅಜ್ಜಿಯ ಸಮಸ್ಯೆ ಆಲಿಸಿ ಸಮಸ್ಯೆಗೆ ಪರಿಹಾರ ಸೂಚಿಸಿದರು. ಮಗುವಿನ ಅನಾರೋಗ್ಯ ಸಮಸ್ಯೆ ಹೊತ್ತು ಬಂದಿದ್ದ ಮಹಿಳೆ ಸಿದ್ದಮ್ಮ ಅತ್ತಾಗ ಸಮಾಧಾನಿಸಿ, ಸಮಸ್ಯೆ ಬಗೆಹರಿಸಲು ವೈದ್ಯರಿಗೆ ಸೂಚಿಸಿದರು.

ಏನಿದು ಪ್ರಜಾಸೇವೆ?:

- ಆಡಳಿತವನ್ನು ಜನರ ಬಳಿಗೇ ಕೊಂಡೊಯ್ಯಲು ರಾಜ್ಯಾದ್ಯಂತ ಜಾರಿಗೆ ತಂದ ಯೋಜನೆ

- ನಿಯಮಿತವಾಗಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಶಾಸಕರು, ಸಚಿವರಿಂದ ಸಭೆ

-.ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಉಸ್ತುವಾರಿ ಸಚಿವರಿಂದ ತಾಲೂಕಲ್ಲಿ ಸಭೆ

- 2ನೇ ಮತ್ತು 4ನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಸಭೆ

- ಇಲಾಖಾ ವೆಬ್‌ಸೈಟಲ್ಲೂ ದೂರಬಹುದು. ಎಲ್ಲ ಅರ್ಜಿಗಳು ಕಾಲಮಿತಿಯಲ್ಲಿ ಇತ್ಯರ್ಥ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾನು ‘ನಾಡ ದೊರೆ’ ಅಲ್ಲ, ‘ಪ್ರಜಾಸೇವಕ’: ಸಿಎಂ ಡಿಕೆಶಿ
ಹೆಲಿಕಾಪ್ಟರಲ್ಲಿ ಬರ ವೀಕ್ಷಣೆ ಎಷ್ಟು ಸರಿ?: ವಿಜಯೇಂದ್ರ ಕಿಡಿ