‘ನನ್ನನ್ನು ನಾಡಿನ ದೊರೆ ಎಂದು ಕರೆಯುವ ಬದಲು ಪ್ರಜಾಸೇವಕ ಎಂದು ಕರೆದರೆ ನನಗೆ ಅತ್ಯಂತ ಸಂತೋಷ ಆಗುತ್ತದೆ. ರಾಜಪ್ರಭುತ್ವ ಮುಗಿದು ಪ್ರಜಾಪ್ರಭುತ್ವ ಬಂದಿದೆ. ಈಗ ನಾಡಿನ ದೊರೆಗಳು ಪ್ರಜೆಗಳಾಗಿದ್ದಾರೆ, ನಾವು ಸೇವಕರಷ್ಟೇ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೂಡ್ಲಿಗಿ : ‘ನನ್ನನ್ನು ನಾಡಿನ ದೊರೆ ಎಂದು ಕರೆಯುವ ಬದಲು ಪ್ರಜಾಸೇವಕ ಎಂದು ಕರೆದರೆ ನನಗೆ ಅತ್ಯಂತ ಸಂತೋಷ ಆಗುತ್ತದೆ. ರಾಜಪ್ರಭುತ್ವ ಮುಗಿದು ಪ್ರಜಾಪ್ರಭುತ್ವ ಬಂದಿದೆ. ಈಗ ನಾಡಿನ ದೊರೆಗಳು ಪ್ರಜೆಗಳಾಗಿದ್ದಾರೆ, ನಾವು ಸೇವಕರಷ್ಟೇ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಇಲಾಖೆಯ ಉದ್ಘಾಟನೆ ಹಾಗೂ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಜನಸೇವೆಯೇ ಜನಾರ್ದನನ ಸೇವೆ ಎಂದು ನಾನು ನಂಬಿದ್ದೇನೆ. ಈ ರಾಜ್ಯದ ಜನರು 136 ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದು, ಇಡೀ ದೇಶಕ್ಕೆ ಮಾದರಿಯಾಗುವಂತಹ ಹೊಸ ದಾರಿಯಲ್ಲಿ ಸಾಗಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದಿನ ಕಾರ್ಯಕ್ರಮ ಕೇವಲ ಒಂದು ಸರ್ಕಾರಿ ಇಲಾಖೆಯಾಗದೆ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಜನಪರ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ’ ಎಂದರು.
ಅಧಿಕಾರಿಗಳನ್ನು ಹುಡುಕಿಕೊಂಡು ಬರುವುದು ತಪ್ಪಬೇಕು
‘ಜನಸಾಮಾನ್ಯರು, ಶಾಸಕರು, ಮಂತ್ರಿಗಳು ಅಥವಾ ತಾಲೂಕು ಅಧಿಕಾರಿಗಳನ್ನು ಹುಡುಕಿಕೊಂಡು ಬರುವುದು ತಪ್ಪಬೇಕು. ಅಧಿಕಾರಿಗಳೇ ನೇರವಾಗಿ ಜನರ ಬಳಿಗೆ ತೆರಳಿ ಅವರ ಕುಂದುಕೊರತೆ ಆಲಿಸಿ ಬಗೆಹರಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಗೆ ಚಾಲನೆ ನೀಡಲಾಗಿದೆ’ ಎಂದರು.
224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ
ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯದಲ್ಲಿದ್ದು ಕೆಲಸ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ತಾಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮ ಮುನ್ನಡೆಸಲಿದ್ದಾರೆ. ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ, ಸಭೆ ನಡೆಸಿ ಸಾರ್ವಜನಿಕರಿಂದ ಬಂದ ಅಹವಾಲು ಸ್ವೀಕರಿಸಿ ಪರಿಹರಿಸಬೇಕು ಎಂದು ನಿರ್ದೇಶನ ನೀಡಿದರು.
ಸಮಾಜದ ಪ್ರತಿಯೊಂದು ವರ್ಗಕ್ಕೂ ಅಂಬೇಡ್ಕರ್ ಆದರ್ಶಗಳಂತೆ ಸಮಾನ ಗೌರವ ಸಿಗಬೇಕು ಎಂಬುದು ಸರ್ಕಾರದ ಆಶಯ. ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದೇವೆ. ಈಗಿನ ಪ್ರಜಾಸೇವಾ ಯೋಜನೆ, ಜನಮನ ಗೆಲ್ಲುವುದಷ್ಟೇ ಅಲ್ಲ, ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದರು.

