ರಾಜ್ಯದಲ್ಲಿ ತೀವ್ರತರವಾದ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖುದ್ದಾಗ ತೆರಳಿ ಬರ ಅಧ್ಯಯನ ನಡೆಸಿದರು.ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲಿಗೆ ವೈಮಾನಿಕ ಸಮೀಕ್ಷೆ ಕೈಗೊಂಡ ಮುಖ್ಯಮಂತ್ರಿಗಳು
ಬಾಗಲಕೋಟೆ : ರಾಜ್ಯದಲ್ಲಿ ತೀವ್ರತರವಾದ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖುದ್ದಾಗ ತೆರಳಿ ಬರ ಅಧ್ಯಯನ ನಡೆಸಿದರು.
ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲಿಗೆ ವೈಮಾನಿಕ ಸಮೀಕ್ಷೆ ಕೈಗೊಂಡ ಮುಖ್ಯಮಂತ್ರಿಗಳು ನಂತರ ಹೊಲಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಧನ್ನೂರ ಗ್ರಾಮದ ವ್ಯಾಪ್ತಿಯಲ್ಲಿ ಬಾರಕೇರ ಎಂಬುವರ ಹೊಲಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಈರುಳ್ಳು, ಮೆಣಸಿನಕಾಯಿ, ಸೂರ್ಯಕಾಂತಿ ಸೇರಿದಂತೆ ಹಾನಿಯಾದ ಬೆಳೆಗಳನ್ನು ವೀಕ್ಷಿಸಿದರು.
ಬಳಿಕ ಬಾಗಲಕೋಟೆಯ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳನ್ನು ಸೇರ್ಪಡೆಗೊಳಿಸುವ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಸಲ್ಲಿಸಿರುವ ವರದಿ ಆಧರಿಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಂತ ಹಂತವಾಗಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಮಿಕ್ಕ ತಾಲೂಕುಗಳ ಬಗ್ಗೆ ವೈಜ್ಞಾನಿಕ ಪರಿಶೀಲನೆ ನಡೆಯುತ್ತಿದೆ. ಒಂದಷ್ಟು ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿದರೆ, ಬಹುತೇಕ ಕಡೆ ಉತ್ತಮ ಬೆಳೆ ಕಾಣುತ್ತಿಲ್ಲ. ಬಾಗಲಕೋಟೆಯಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ರೈತರೊಂದಿಗೆ ಚರ್ಚಿಸಿ ವಾಸ್ತವ ಸ್ಥಿತಿಯನ್ನು ಅರಿಯಲಾಯಿತು ಎಂದು ಹೇಳಿದರು.
ಕೇಂದ್ರದ ಮಾರ್ಗಸೂಚಿಯಲ್ಲಿ ಇಷ್ಟು ದಿನಗಳ ಕಾಲ ಮಳೆ ಆಗಿರಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಗದಗ ಜಿಲ್ಲೆಯಲ್ಲಿ 6 ತಾಲೂಕಿನಲ್ಲಿ ಒಂದು ತಾಲೂಕು ಬರ ಎಂದು ಘೋಷಣೆಯಾಗಿದೆ. ಗದಗ, ಹುಬ್ಬಳ್ಳಿ-ಧಾರವಾಡ ಸೇರಿ ಹಲವು ಭಾಗಗಳಲ್ಲಿ ಕೃಷಿ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ವೈಮಾನಿಕ ಸಮೀಕ್ಷೆ ಮೂಲಕವೂ ಪರಿಸ್ಥಿತಿ ಗಮನಿಸಲಾಗಿದೆ ಎಂದು ವಿವರಿಸಿದರು.
ಸರ್ಕಾರಕ್ಕೆ ರೈತರ ಹಿತ ಮುಖ್ಯ:
ಕೃಷ್ಣಾ ನದಿಗೆ ಸ್ವಲ್ಪ ನೀರು ಬಂದಿದೆ, ಕಾವೇರಿ ಸೇರಿದಂತೆ ಬೇರೆಡೆಗಳಲ್ಲಿ ಇಷ್ಟೂ ನೀರು ಬಂದಿಲ್ಲ. ತಮಿಳುನಾಡಿನವರು ತಮ್ಮ ಬೆಳೆಗಳಿಗಾಗಿ ನೀರು ಕೇಳುತ್ತಿದ್ದಾರೆ. ನಾನು, ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಚೆಲುವರಾಯಸ್ವಾಮಿಯವರು ಚರ್ಚಿಸಿ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಕೆಆರ್‌ಎಸ್ ಬದಲಿಗೆ ಕಬಿನಿಯಿಂದ ನೀರನ್ನು ಹರಿಸಲಾಗುತ್ತಿದೆ. ರೈತರ ಹಿತ ಸರ್ಕಾರಕ್ಕೆ ಮುಖ್ಯ ಎಂದರು.
ಇಂದಿನಿಂದ ಪ್ರಜಾಸೇವಾ, ಮನೆ ಬಾಗಿಲಿಗೆ ಸರ್ಕಾರ:
ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೂಡ್ಲಗಿಯಲ್ಲಿ ಪ್ರಜಾಸೇವಾ ಇಲಾಖೆಗೆ ಚಾಲನೆ ನೀಡಲಾಗುತ್ತಿದೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದ ಅವರು, ಪ್ರತಿ ತಿಂಗಳು ಮೊದಲ ಹಾಗೂ 3ನೇ ಶನಿವಾರ ಸಚಿವರು ಕಡ್ಡಾಯವಾಗಿ ಒಂದೊಂದು ತಾಲೂಕಿಗೆ ತೆರಳಿ ಜನರ ಸಮಸ್ಯೆ ಆಲಿಸಬೇಕು. ಮೊದಲ ಸುತ್ತಿನ ಬಳಿಕ ಹೋಬಳಿ ಮಟ್ಟಕ್ಕೂ ತೆರಳಬೇಕು. ಶಾಸಕರು ಪಂಚಾಯಿತಿ ಮಟ್ಟದಲ್ಲಿ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲು ಸೂಚಿಸಲಾಗಿದೆ. ಎಲ್ಲ ಸಮಸ್ಯೆಗಳನ್ನೂ ತಕ್ಷಣವೇ ಪರಿಹರಿಸಲಾಗುತ್ತದೆ ಎಂದು ಹೇಳುವುದಿಲ್ಲ. ಆದರೆ, ಜನರ ಬಳಿಗೆ ತೆರಳಿ ಅವರ ಸಮಸ್ಯೆ ಮತ್ತು ಭಾವನೆಗಳನ್ನು ನೇರವಾಗಿ ತಿಳಿದುಕೊಂಡರೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.
ಯು,ವೈ,ಎಕ್ಸ್ ಎಲ್ಲ ಹತ್ತಿರವಿದೆ-ಸಿಎಂ:
ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದಿರುವುದಕ್ಕೆ ವಿಪಕ್ಷಗಳು ಸಿಎಂ ಯು-ಟರ್ನ್ ಎನ್ನುತ್ತಿವೆ. ಯೂ, ವೈ, ಎಕ್ಸ್ ಎಲ್ಲಾ ಅವರ ಹತ್ತಿರಾನೇ ಇದೆ. ಎಸ್ ಟರ್ನ್ ಮಾಡೋಕೆ ಜನರು ನನಗೆ ಶಕ್ತಿ ಕೊಟ್ಟಿದ್ದಾರೆ. ಯಾವ ಟರ್ನ್ ಮಾಡಬೇಕು ಅನ್ನೋದನ್ನು ಆಮೇಲೆ ನೋಡೋಣ ಎಂದು ಕುಟುಕಿಯಾಡಿದರು.
ಅಧಿವೇಶನದಲ್ಲಿ ಚರ್ಚೆ ನಡೆಸಿದ್ದರೆ ಈ ಬಗ್ಗೆ ಸೂಕ್ತ ಉತ್ತರ ಕೊಡುತ್ತಿದ್ದೆ. ವಿಧೇಯಕ ಜಾರಿ ಮಾಡುತ್ತಿರುವುದು ಸಾರ್ವಜನಿಕರ ಹಿತಕ್ಕಾಗಿ. ಅಗತ್ಯ ಬಿದ್ದರೆ ಸಮಿತಿ ಮಾಡಿ ತೀರ್ಮಾನ ಮಾಡಿ ಎಂದು ಹೇಳುತ್ತಿದ್ದೆ. ವಿಧೇಯಕಕ್ಕೆ ಅಧಿವೇಶದಲ್ಲಿ ಅನುಮೋದನೆ ಕೂಡ ದೊರೆತಿತ್ತು. ಹಿಂದಕ್ಕೆ ಪಡೆಯುವ ವಿಚಾರದಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ. ನನಗೆ ಸಾರ್ವಜನಿಕ ಹಿತ, ಅಭಿಪ್ರಾಯ ಮುಖ್ಯ ಎಂದರು.
