ರಾಜ್ಯ ಮಾನ್ಯತೆ ಪಡೆದಿರುವ ಇತಿಹಾಸ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳದ ಅಭಿವೃದ್ಧಿ ಹಾಗೂ ಪ್ರೋತ್ಸಾಹಕ್ಕಾಗಿ ಮುಂದಿನ ರಾಜ್ಯ ಬಜೆಟ್‌ನಲ್ಲಿ ₹5 ಕೋಟಿ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಮಂಗಳೂರು : ರಾಜ್ಯ ಮಾನ್ಯತೆ ಪಡೆದಿರುವ ಇತಿಹಾಸ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳದ ಅಭಿವೃದ್ಧಿ ಹಾಗೂ ಪ್ರೋತ್ಸಾಹಕ್ಕಾಗಿ ಮುಂದಿನ ರಾಜ್ಯ ಬಜೆಟ್‌ನಲ್ಲಿ ₹5 ಕೋಟಿ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಸಿಎಂ ಅವರನ್ನು ಭೇಟಿಯಾಗಿ ಮನವಿ
ಶುಕ್ರವಾರ ಕಂಬಳದ ಮಹಾಪೋಷಕ ಹಾಗೂ ಕಂಬಳ ಕ್ರೀಡೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ। ಎಂ.ಎನ್. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ನಿಯೋಗ ಸಿಎಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ನಡೆಯುವ 27 ಕಂಬಳಗಳ ಆಯೋಜನೆಗೆ ₹5 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಹಾಗೂ ಈ ಕುರಿತು ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ನಿಯೋಗ ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಡಿ.ಕೆ. ಶಿವಕುಮಾರ್ ಅವರು ಅನುದಾನ ನೀಡುವ ಭರವಸೆ ನೀಡಿದರು.
ಮೈಸೂರು ದಸರಾದಲ್ಲಿ ನಡೆಯಲಿರುವ ಕಂಬಳ
ಮೈಸೂರು ದಸರಾದಲ್ಲಿ ನಡೆಯಲಿರುವ ಕಂಬಳವನ್ನು ಶಿಸ್ತುಬದ್ಧವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಬೇಕು. ಮೈಸೂರು ಜನತೆಯ ವಿಶ್ವಾಸಕ್ಕೆ ಪಾತ್ರರಾಗುವ ರೀತಿಯಲ್ಲಿ ಕಂಬಳವನ್ನು ನಡೆಸಬೇಕೆಂದು ಸಿಎಂ ಸಲಹೆ ನೀಡಿದರು ಎಂದು ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಬಳಕ್ಕೆ ರಾಜ್ಯ ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಡಿ.ಕೆ.ಶಿವಕುಮಾರ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಹಕಾರ ಸಚಿವ ಲಕ್ಷ್ಮಣ ಸವದಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಇದ್ದರು.
