ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್‌ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ಈ ಹಗರಣದ ಮೂಲ ಮತ್ತು ಜಾಲದ ಕುರಿತು ಸಿಐಡಿ ತನಿಖೆಯಲ್ಲಿ ಹಲವು ಆಘಾತಕಾರಿ ಸತ್ಯಗಳು ಹೊರಬಿದ್ದಿದ್ದು, ಕನ್ನಾಳೆ ಮತ್ತು ಐಎಎಸ್‌ ಅಧಿಕಾರಿ ಜ್ಞಾನೇಂದ್ರ ದೆಹಲಿ ದೋಸ್ತಿಯೇ ಅಕ್ರಮಕ್ಕೆ ಮೂಲ ಎಂಬುದು ಬೆಳಕಿಗೆ ಬಂದಿದೆ.

 ಅಪ್ಪಾರಾವ್‌ ಸೌದಿ

ಬೀದರ್‌ : ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್‌ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ಈ ಹಗರಣದ ಮೂಲ ಮತ್ತು ಜಾಲದ ಕುರಿತು ಸಿಐಡಿ ತನಿಖೆಯಲ್ಲಿ ಹಲವು ಆಘಾತಕಾರಿ ಸತ್ಯಗಳು ಹೊರಬಿದ್ದಿದ್ದು, ಕನ್ನಾಳೆ ಮತ್ತು ಐಎಎಸ್‌ ಅಧಿಕಾರಿ ಜ್ಞಾನೇಂದ್ರ ದೆಹಲಿ ದೋಸ್ತಿಯೇ ಅಕ್ರಮಕ್ಕೆ ಮೂಲ ಎಂಬುದು ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ ಶುರುವಾಗಿದ್ದ ದೋಸ್ತಿ:

2015ರಲ್ಲಿ ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಒಟ್ಟಿಗೆ ತರಬೇತಿ ಪಡೆಯುತ್ತಿದ್ದ ಜ್ಞಾನೇಂದ್ರ ಕುಮಾರ್‌ ಗಂಗವಾರ್‌, ಬಸವರಾಜ ಕನ್ನಾಳೆ ಹಾಗೂ ಬೀದರ್‌ ಜಿಲ್ಲೆಯ ಮನ್ನಾಎಖ್ಖೆಳ್ಳಿಯ ಪವನ್‌ ರೆಡ್ಡಿ ನಡುವೆ ನಿಕಟ ಪರಿಚಯ ಬೆಳೆದಿತ್ತು. ಈ ಪೈಕಿ ಜ್ಞಾನೇಂದ್ರಕುಮಾರ್‌ ಮಾತ್ರ ಯುಪಿಎಸ್‌ಸಿ ತೇರ್ಗಡೆಯಾಗಿ ಐಎಎಸ್‌ ಅಧಿಕಾರಿಯಾದರೆ, ಬಸವರಾಜ ಕನ್ನಾಳೆ ಮತ್ತು ಪವನ್‌ ರೆಡ್ಡಿ ವಿಫಲರಾಗಿದ್ದರು.

ಐಎಎಸ್‌ ಅಧಿಕಾರಿಯಾಗಿ ಆಯ್ಕೆಯಾದ ಜ್ಞಾನೇಂದ್ರಕುಮಾರ್ 2018ರಲ್ಲಿ ಬಸವಕಲ್ಯಾಣದಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2019ರಲ್ಲಿ ಬೀದರ್‌ ಜಿಲ್ಲಾ ಪಂಚಾಯತ್‌ ಸಿಇಒ ಆಗಿ ಸೇವೆ ಸಲ್ಲಿಸಿದರು. ದೆಹಲಿಯಲ್ಲಿ ಆರಂಭವಾದ ಈ ಮೂವರ ಗೆಳೆತನ ಬೀದರ್‌ನಲ್ಲೂ ಮುಂದುವರಿದು, ಕೊನೆಗೆ ಕೆಪಿಎಸ್‌ಸಿ ಅಕ್ರಮಕ್ಕೆ ದಾರಿಯಾಯಿತು ಎಂಬುದು ಸಿಐಡಿ ತನಿಖೆಯಿಂದ ತಿಳಿದುಬಂದಿದೆ.

ಗಡಿ ಜಿಲ್ಲೇಲಿ ತೀವ್ರಗೊಂಡ ಸಿಐಡಿ ದಾಳಿ:

ಸಿಐಡಿ ಡಿವೈಎಸ್‌ಪಿ ಅಸ್ಲಮ್‌ ಭಾಷಾ ಅವರ ನೇತೃತ್ವದ ತಂಡ ಕಳೆದ 3 ದಿನಗಳಿಂದ ಬೀದರ್‌ ಜಿಲ್ಲೆಯಲ್ಲಿ ಠಿಕಾಣಿ ಹೂಡಿ ಪರಿಶೀಲನೆ ನಡೆಸುತ್ತಿದೆ. ಭಾಲ್ಕಿಯ ‘ಓಂ ಲಕ್ಷ್ಮಿ ಸೌಹಾರ್ದ ಸಹಕಾರ ಬ್ಯಾಂಕ್‌’ ಹಾಗೂ ಮನ್ನಾಎಖ್ಖೆಳ್ಳಿಯಲ್ಲಿರುವ ಪವನ ರೆಡ್ಡಿ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಹಣದಲ್ಲಿ ಫ್ಯಾನ್ಸಿ ನಂಬರ್‌ ವಾಹನಗಳ ಕ್ರೇಜ್:

ಅಕ್ರಮ ಸಂಪಾದನೆಯಿಂದ ಮೆರೆಯುತ್ತಿದ್ದ ಬಸವರಾಜ ಕನ್ನಾಳೆ, ತನ್ನ ಎಲ್ಲಾ ವಾಹನಗಳಿಗೆ ‘7890’ ಎಂಬ ಫ್ಯಾನ್ಸಿ ನಂಬರ್‌ನಲ್ಲೇ ನೋಂದಣಿ ಮಾಡಿಸುತ್ತಿದ್ದ. ತನ್ನ ತಂದೆ ನಾಗನಾಥ ಅವರ ವಯೋನಿವೃತ್ತಿಯ ವೇಳೆ ಸುಮಾರು ₹33 ಲಕ್ಷ ನೀಡಿ, ಫ್ಯಾನ್ಸಿ ನಂಬರ್‌ ಹೊಂದಿದ್ದ ‘ಇನೋವಾ ಕ್ರಿಸ್ಟಾ’ ಕಾರನ್ನು ಉಡುಗೊರೆಯಾಗಿ ನೀಡಿದ್ದ.

ಅಷ್ಟೇ ಅಲ್ಲದೆ, ಅಕ್ರಮ ಹಣವನ್ನು ಹೂಡಿಕೆ ಮಾಡಲು (ಅಶ್ವಥ ನಾರಾಯಣ್‌ ಕನ್ನಾಳೆ ಟ್ರಾವೆಲ್ಸ್‌) ಹೆಸರಿನಲ್ಲಿ ಟ್ರಾವೆಲ್ಸ್‌ ಉದ್ಯಮವನ್ನು ಆರಂಭಿಸಿದ್ದು, ಆ ಟ್ರಾವೆಲ್ಸ್‌ ವಾಹನಗಳಿಗೂ ಅದೇ ‘7890’ ಫ್ಯಾನ್ಸಿ ನಂಬರ್‌ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಸಿಐಡಿ ಅಧಿಕಾರಿಗಳು ವಶ ಪಡಿಸಿಕೊಂಡಿರುವ ದಾಖಲೆಗಳ ಪರಿಶೀಲನೆಯನ್ನು ಮುಂದುವರಿಸಿದ್ದು, ಹಗರಣದ ಸುತ್ತಲಿನ ಜಾಲ ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿದೆ.