ಸಿಂಧನೂರು (ರಾಯಚೂರು) : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ದಿನದಿಂದ ದಿನಕ್ಕೆ ಜನರ ಸಹಕಾರ ಹೆಚ್ಚಾಗುತ್ತಿದೆ. ಎಲ್ಲ ವರ್ಗದವರು ಉತ್ಸಾಹದಿಂದ ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಪಾದಯಾತ್ರೆಯು ಜನಾಂದೋಲನವಾಗಿ ಪರಿವರ್ತನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ರಾಯಚೂರು ಜಿಲ್ಲೆಯ ಸಿಂಧನೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗೋ ಪೂಜೆ ಹಾಗೂ ಕೃಷ್ಣನಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸಿ ನಾಲ್ಕನೇ ದಿನದ ಬಳ್ಳಾರಿ ಬಿಜೆಪಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪಾದಯಾತ್ರೆಗೆ ಭಾರೀ ಜನಸಾಗರವೇ ಹರಿದು ಬಂದಿತ್ತು. ಪಾದಯಾತ್ರೆಯು ಸಿಂಧನೂರಿನಿಂದ ಹೊರಟು ಕೊಪ್ಪಳದ ಕಾರಟಗಿ ಸಮೀಪದ ನವಲಿ ಕ್ರಾಸ್‌ವರೆಗೆ ಒಟ್ಟು 22 ಕಿ.ಮೀ ಸಾಗಿತು.
ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು, ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಮೊದಲು ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ಪಡೆಯಲಾಯಿತು. ಈ ಮೊದಲು 101 ತಾಲೂಕುಗಳಲ್ಲಿ ಬರ ಘೋಷಿಸಿದ್ದರು. ಬಿಜೆಪಿ ಪಾದಯಾತ್ರೆಗೆ ಸಿಕ್ಕ ಜನ ಬೆಂಬಲಕ್ಕೆ ಹೆದರಿ ಈ 2ನೇ ಕಂತಿನಲ್ಲಿ ಉಳಿದ ತಾಲೂಕುಗಳಲ್ಲೂ ಬರ ಘೋಷಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಬಿಜೆಪಿ ಒತ್ತಡದಿಂದಲೇ 3 ದಿನ ವಿಶೇಷ ಅಧಿವೇಶನ ನಡೆಸುವ ತಿರ್ಮಾನ ಹಾಗೂ ಪಾರ್ಕ್ ಬಿಲ್ ವಾಪಸ್ ಪಡೆದಿದ್ದಾರೆ ಎಂದರು.
ವಿಶೇಷವಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದ ಸಿಎಂ, ನಮ್ಮ ಹೋರಾಟಕ್ಕೆ ಮಣಿದು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ನಮ್ಮ ತಂದೆಯವರು ಅವರ ಜೀವನದುದ್ದಕ್ಕೂ ರೈತರು, ಬಡವರ ಪರವೇ ಹೋರಾಟ ಮಾಡಿಕೊಂಡು ಬಂದವರು. ನಾನು ಬಿಜೆಪಿ ರಾಜ್ಯಾಧ್ಯಕ್ಷ ಆಗಿ ಬಡವರು, ರೈತರ ಪರ ಹೋರಾಟ ಮಾಡುತ್ತಿರುವುದು ನನ್ನ ಸುದೈವದ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಸಚಿವ ಮತ್ತು ಶಾಸಕ ವಿ.ಸುನೀಲ್ ಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ಬಿಜೆಪಿ ರಾಜ್ಯಉಪಾಧ್ಯಕ್ಷ ರಾಜುಗೌಡ ನಾಯಕ, ಮಾಜಿ ಸಚಿವ ಶಿವನಗೌಡ ನಾಯಕ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ಶ್ರೀಕೃಷ್ಣನ ಭಾವಚಿತ್ರ, ಗೋವಿಗೆ ಬಿವೈ ಪೂಜೆ
ಸಿಂಧನೂರಿನಲ್ಲಿ ಶುಕ್ರವಾರ 4ನೇ ದಿನದ ಬಿಜೆಪಿ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಹಾಗೂ ಗೋವಿಗೆ ಪೂಜೆ ಸಲ್ಲಿಸಿ ಪಾದಯಾತ್ರಗೆ ಚಾಲನೆ ನೀಡಿದರು. ಇದೇ ವೇಳೆ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ವೇಳೆ ಸಮುದಾಯ ಮುಖಂಡರು ಶಿವಾಜಿ ಮಹಾರಾಜರ ಭಾವಚಿತ್ರ ಕೊಟ್ಟು ಸನ್ಮಾನಿಸಿ ಗೌರವಿಸಿದರು.
ಭತ್ತ ಕಟಾವು ಯಂತ್ರಕ್ಕೆ ಪೂಜೆ:
ಸಿಂಧನೂರು ತಾಲೂಕಿನ ಹೊಸಳ್ಳಿ (ಇ.ಜೆ) ಕ್ಯಾಂಪ್ ಆಗಮಿಸಿದ ವೇಳೆ ತಮ್ಮ ಅಭಿಮಾನಿಯೊಬ್ಬರು ಖರೀದಿಸಿದ್ದ ಭತ್ತ ಕಟಾವು ಯಂತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೂಜೆ ಸಲ್ಲಿಸಿ ಉದ್ಘಾಟನೆ ಮಾಡಿದರು.
ವೃದ್ಧೆಯ ಕಾಲಿಗೆ ಬಿದ್ದು ನಮಸ್ಕಾರ:
ಹೊಸಳ್ಳಿ ಕ್ಯಾಂಪ್ ಮೇಲೆ ಹೋಗುತ್ತಿದ್ದ ಪಾದಯಾತ್ರೆಯಲ್ಲಿ 70 ವರ್ಷದ ವೃದ್ಧೆಯೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹೂವಿನ ಹಾರ ಹಾಕಿ ಬಂದು ಸನ್ಮಾನಿಸಿದರು. ಈ ವೇಳೆ ಆ ಹಾರವನ್ನು ವೃದ್ಧೆಯ ಕೊರಳಿಗೆ ಹಾಕಿ, ವೃದ್ಧೆಯ ಕಾಲಿಗೆ ಬಿದ್ದು ವಿಜಯೇಂದ್ರ ಅವರು ನಮಸ್ಕರಿಸಿ ಸನ್ಮಾನಿಸಿದರು.====
ಕೊಪ್ಪಳದಲ್ಲಿ ಪಾದಯಾತ್ರೆಗೆ ಭರ್ಜರಿ ಸ್ವಾಗತ
ಕಾರಟಗಿ: ರಾಯಚೂರಿನ ಸಿಂಧನೂರಿನಿಂದ ಆರಂಭವಾಗಿ ಬಿಜೆಪಿ ಪಾದಯಾತ್ರೆ ಶುಕ್ರವಾರ ಸಂಜೆ ಕೊಪ್ಪಳ ಪ್ರವೇಶಿಸಿತು. ತಾಲೂಕಿನ ಚನ್ನಳ್ಳಿ ಕ್ರಾಸ್‌ನಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಾದಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು. ಮಹಿಳೆಯರು 101 ಕುಂಭಗಳನ್ನು ಹೊತ್ತು ಭವ್ಯ ಮೆರವಣಿಗೆ ನಡೆಸಿ ನಾಯಕರನ್ನು ಸ್ವಾಗತಿಸಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬೃಹತ್ ಹೂವಿನ ಹಾರ ಹಾಕಿ, ಕಾರ್ಯಕರ್ತರು ಅಭಿನಂದಿಸಿದರು. ಎರಡು ಜೆಸಿಬಿಗಳ ಮೂಲಕ ಹೂವುಗಳ ಸುರಿಮಳೆಗೈದು ವಿಜಯೇಂದ್ರ ಸೇರಿದಂತೆ ನಾಯಕರಿಗೆ ಭರ್ಜರಿ ಸ್ವಾಗತ ಕೋರಿದರು. ನೃತ್ಯ ತಂಡಗಳ ಪ್ರದರ್ಶನವೂ ಸ್ವಾಗತ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಕಾರ್ಯಕರ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.ಬಿವೈವಿಗೆ ಕುರಿಮರಿ ಕಾಣಿಕೆ:
ಸ್ಥಳೀಯ ಅಭಿಮಾನಿಗಳು ವಿಜಯೇಂದ್ರ ಅವರಿಗೆ ಕಂಬಳಿ ಹಾಕಿ, ಎರಡು ಕುರಿ ಮರಿಗಳನ್ನು ಕಾಣಿಕೆಯಾಗಿ ನೀಡಿದರು. ಅಭಿಮಾನಿಗಳು ಕುರಿಮರಿ ನೀಡಿ, ಸ್ವಾಗತಿಸಿದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪುಳಕಗೊಂಡಿದ್ದರಲ್ಲದೇ ಅಭಿಮಾನಿಗಳ ಅಭಿಮಾನ ಕಂಡು ಭಾವುಕರಾದರು. ಈ ನಿಮ್ಮ ಕಾಣಿಕೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲು ಶಕ್ತಿ ನೀಡಿದೆ. ದುಷ್ಟ ಸರ್ಕಾರವನ್ನು ಕಿತ್ತೆಸೆಯಲು ಬಲತುಂಬಿದೆ ಎಂದು ಹೇಳಿ, ಕಾಣಿಕೆ ಕೊಟ್ಟವರಿಗೆ ಹಸ್ತಲಾಘವ ಮಾಡಿ ಅಪ್ಪಿಕೊಂಡರು.
ಕಾರಟಗಿಯಲ್ಲಿ ಇಂದು ಸಮಾರೋಪ: ಚನ್ನಳ್ಳಿ ಕ್ರಾಸ್‌ನಿಂದ ಕಾರಟಗಿ ಪಟ್ಟಣದತ್ತ ಸಾಗಿದ ಪಾದಯಾತ್ರೆ ಶುಕ್ರವಾರ ಕಾರಟಗಿಯಲ್ಲಿ ರಾತ್ರಿ ಸಮಾರೋಪಗೊಂಡಿತು. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಅಬ್ಬರಿಸಿ, ರಾಜ್ಯ ಸರ್ಕಸರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೇರಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಕೇಕೆ, ಹಾಕಿ ಸಂಭ್ರಮಿಸಿದರು.
ನಾಳೆ ಗಂಗಾವತಿಯತ್ತ ಹೆಜ್ಜೆ:
ಶನಿವಾರ ಬೆಳಗ್ಗೆ ಕಾರಟಗಿಯಿಂದ ಪಾದಯಾತ್ರೆ ಮುಂದುವರಿಯಲಿದ್ದು, ಗಂಗಾವತಿಯತ್ತ ಸಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಮೂಲಕ ಪಕ್ಷದ ಸಂಘಟನಾ ಶಕ್ತಿ ಪ್ರದರ್ಶಿಸುವುದರ ಜತೆಗೆ, ಮುಂಬರುವ ರಾಜಕೀಯ ಹೋರಾಟಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ.
