‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆ ಮೂರನೇ ದಿನವಾದ ಗುರುವಾರ ಮಸ್ಕಿ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಿಟಿ ಜಿಟಿ ಮಳೆ, ಬಿಸಿಲನ್ನೂ ಲೆಕ್ಕಿಸದೇ ಸಾಗಿತು.

ಕನ್ನಡಪ್ರಭ ವಾರ್ತೆ ಮಸ್ಕಿ/ಸಿಂಧನೂರು (ರಾಯಚೂರು):

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು. ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆ ಮೂರನೇ ದಿನವಾದ ಗುರುವಾರ ಮಸ್ಕಿ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಿಟಿ ಜಿಟಿ ಮಳೆ, ಬಿಸಿಲನ್ನೂ ಲೆಕ್ಕಿಸದೇ ಸಾಗಿತು. ಗುಡದೂರಿನಿಂದ ಸಿಂಧನೂರಿನವರೆಗೆ 23 ಕಿ.ಮೀ. ಸಾಗಿದ ಯಾತ್ರೆಗೆ ಭರ್ಜರಿ ಸ್ಪಂದನೆ ಸಿಕ್ಕಿತು.

ಬೆಳಗ್ಗೆ 10 ಗಂಟೆ ಸುಮಾರಿಗೆ ಮಸ್ಕಿ ತಾಲೂಕಿನ ಗುಡದೂರಿನ ಕರಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನೇಗಿಲ ಹೊತ್ತು, ಜೋಡೆತ್ತಿನ ಬಂಡಿ ಏರಿದ ವಿಜಯೇಂದ್ರ, ಬಂಡಿಯನ್ನು ಓಡಿಸುವುದರ ಮುಖಾಂತರ ಮೂರನೇ ದಿನದ ಪಾದಯಾತ್ರೆ ಆರಂಭಿಸಿದರು. ಅಲ್ಲಿಂದ ಮುಖ್ಯರಸ್ತೆ ಮುಖಾಂತರ ಸಾಗಿದ ಯಾತ್ರೆ, ಹಸಮನಕಲ್‌ ಗ್ರಾಮಕ್ಕೆ ಆಗಮಿಸಿತು. ಅಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ವಿಜಯೇಂದ್ರ, ಯಾತ್ರೆ ವೀಕ್ಷಿಸಲು ರಸ್ತೆ ಬದಿಯಲ್ಲಿ ಕುತೂಹಲದಿಂದ ಕಾದು ನಿಂತಿದ್ದ ಶಾಲಾ ಮಕ್ಕಳನ್ನು ಕಂಡು ಅವರ ಬಳಿಗೆ ತೆರಳಿ ಸಮಾಲೋಚನೆ ನಡೆಸಿದರು. ಬಳಿಕ, ಪಾಂಡುರಂಗಾಪುರ ಕ್ಯಾಂಪಿನಲ್ಲಿ ಕೆಸರಿನ ಗದ್ದೆಗಿಳಿದು ಭತ್ತದ ಸಸಿ ಮಡಿಗಳನ್ನು ಕೈಯಲ್ಲಿ ಹಿಡಿದು ನಾಟಿ ಮಾಡಿದರು. ಕುಂಭ-ಕಳಸಗಳೊಂದಿಗೆ ಅದ್ಧೂರಿ ಸ್ವಾಗತ:

ಮಸ್ಕಿ ವಿಧಾನಸಭಾ ಕ್ಷೇತ್ರ ದಾಟಿ ಸಿಂಧನೂರು ವಿಧಾನಸಭಾ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಕುಂಭ-ಕಳಸಗಳೊಂದಿಗೆ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ಮಹಿಳೆಯರು ಕುಂಭ-ಕಳಸಗಳನ್ನು ಹಿಡಿದು ಸ್ವಾಗತಿಸಿದರು. ಕಾರ್ಯಕರ್ತರು ಕ್ರೇನ್‌ ಮುಖಾಂತರ ಬೃಹತ್‌ ಮಾಲೆ ಹಾಕಿ, ಪಟಾಕಿ ಸಿಡಿಸಿ, ವಿಜಯೇಂದ್ರ ಅವರನ್ನು ಬರಮಾಡಿಕೊಂಡರು.

ಯಾತ್ರೆ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಜಿಟಿಜಿಟಿ ಮಳೆ ಶುರುವಾಯಿತು. ಮಳೆಗೂ ಜಗ್ಗದೆ ಬಿಜೆಪಿ ನಾಯಕರು ಯಾತ್ರೆ ಮುಂದುವರಿಸಿದರು. ಬಳಿಕ, ಮಧ್ಯಾಹ್ನ ಕುನ್ನಟಗಿ ಕ್ಯಾಂಪ್‌ ನಲ್ಲಿ ಭೋಜನ ಸ್ವೀಕರಿಸಿದ ಬಿಜೆಪಿ ನಾಯಕರು, ಯಾತ್ರೆ ಮುಂದುವರಿಸಿ, ಸಿಂಧನೂರು ನಗರಕ್ಕೆ ಆಗಮಿಸಿದರು. ನಗರದ ಗಾಂಧಿ ಚೌಕ್‌ನಲ್ಲಿ ಕಾರ್ನರ್‌ ಸಮಾವೇಶ ನಡೆಸಿ, ಮೂರನೇ ದಿನದ ಯಾತ್ರೆ ಮುಕ್ತಾಯಗೊಳಿಸಿದರು. ಸಮಾವೇಶದಲ್ಲಿ ಮೊಬೈಲ್‌ ಟಾರ್ಚ್‌ ಹಾಕಿ, ಜನ ಯಾತ್ರೆ ಬೆಂಬಲಿಸಿದುದು ವಿಶೇಷವಾಗಿತ್ತು.

3 ದಿನ 3 ಕ್ಷೇತ್ರ, 55 ಕಿ.ಮೀ. ಸಾಗಿದ ಪಾದಯಾತ್ರೆ:

ಸೆ.1ರಂದು ಲಿಂಗಸುಗೂರು ಪಟ್ಟಣದಿಂದ ಆರಂಭಗೊಂಡ ಪಾದಯಾತ್ರೆ ಗುರುವಾರ ಮೂರನೇ ದಿನ ಪೂರ್ಣಗೊಳಿಸಿತು. ಯಾತ್ರೆ ಮೂರು ದಿನಗಳಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ (ಲಿಂಗಸುಗೂರು, ಮಸ್ಕಿ, ಸಿಂಧನೂರು) 55 ಕಿ.ಮೀ. ಸಾಗಿದೆ. ಮೊದಲ ದಿನ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ 10 ಕಿ.ಮೀ., ಎರಡನೇ ದಿನ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 22 ಕಿ.ಮೀ., ಮೂರನೇ ದಿನ ಮಸ್ಕಿ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ (ಗುಡದೂರಿನಿಂದ ಸಿಂಧನೂರುವರೆಗೆ) 23 ಕಿ.ಮೀ. ಸೇರಿ ಒಟ್ಟು 55 ಕಿ.ಮೀ. ದೂರ ಸಾಗಿದೆ. ಸೆ.10ರವರೆಗೆ 175 ಕಿ.ಮೀ. ದೂರ ಯಾತ್ರೆ ನಡೆಯಲಿದೆ.ಹೊಲದಲ್ಲಿ ಬಿವೈವಿ ನಾಟಿ, ರೈತರ ಜೊತೆ ಊಟ:

ಬಳ್ಳಾರಿ ಚಲೋ ಪಾದಯಾತ್ರೆಯ ಮೂರನೇ ದಿನ ಹಲವು ಆಸಕ್ತಿಕರ ಸಂಗತಿಗಳು ಘಟಿಸಿದವು. ಯಾತ್ರೆ ಮಧ್ಯೆ ವಿಜಯೇಂದ್ರ ಅವರು ಹೊಲದಲ್ಲಿ ನಾಟಿ ಮಾಡಿ, ರೈತ ಮಹಿಳೆಯರ ಜೊತೆ ಮಧ್ಯಾಹ್ನದ ಭೋಜನ ಸವಿದು, ರೈತರ ಸಮಸ್ಯೆ ಆಲಿಸಿದರು.ಯಾತ್ರೆ ಸಿಂಧನೂರು ತಾಲೂಕಿನ ಪಾಂಡುರಂಗಾಪುರ ಕ್ಯಾಂಪ್‌ಗೆ ಆಗಮಿಸಿದಾಗ ಅಲ್ಲಿ ಕೃಷಿ ಕೂಲಿ ಕಾರ್ಮಿಕರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡ ವಿಜಯೇಂದ್ರ ಹಾಗೂ ರಾಮುಲು, ನೇರವಾಗಿ ಕೆಸರಿನ ಗದ್ದೆಗಿಳಿದು ಭತ್ತದ ಸಸಿ ಮಡಿಗಳನ್ನು ಕೈಯಲ್ಲಿ ಹಿಡಿದು ನಾಟಿ ಮಾಡಿದರು. ಈ ವೇಳೆ ಜಮೀನು ಮಾಲಿಕ ಪಿ.ಸಾಯಿಬಾಬ ಅವರೊಂದಿಗೆ ಸಮಾಲೋಚನೆ ನಡೆಸಿ, ಕೃಷಿ ಕೂಲಿ ಕಾರ್ಮಿಕರ ಜೊತೆ ಸೆಲ್ಫಿ ತೆಗೆದುಕೊಂಡರು.ಬಳಿಕ, ಮಧ್ಯಾಹ್ನದ ವೇಳೆಗೆ ಯಾತ್ರೆ ಕುನ್ನಟಗಿ ಕ್ಯಾಂಪ್‌ಗೆ ಆಗಮಿಸಿತು. ಈ ವೇಳೆ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಭೂರಿ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ನಡೆದು ದಣಿದಿದ್ದವರು ಜಿಟಿ ಜಿಟಿ ಮಳೆಯಲ್ಲಿಯೇ ಊಟ ಸವಿದರು. ರೈತ ಮಹಿಳೆಯರು ತಂದಿದ್ದ ಮಧ್ಯಾಹ್ನದ ಊಟವನ್ನು ಕುನ್ನಟಗಿ ಕ್ಯಾಂಪಿನ ಜಮೀನೊಂದರಲ್ಲಿಯೇ ಕುಳಿತು ಸವಿದರು. ಮಹಿಳೆಯರು, ರೈತರೊಂದಿಗೆ ಸೇರಿ ನೆಲದ ಮೇಲೆ ಹಾಸಿದ ಚಾಪೆ ಮೇಲೆ ಕುಳಿತ ವಿಜಯೇಂದ್ರ ಅವರು ತಮಗಾಗಿಯೇ ವಿಶೇಷವಾಗಿ ತಯಾರಿಸಿದ್ದ ಪಲ್ಯ, ರೊಟ್ಟಿ, ಚಪಾತಿ, ಅನ್ನಸಾಂಬಾರ್‌ ತಿಂದರು. ರೈತ ಮಹಿಳೆಯರ ಸಮಸ್ಯೆ ಆಲಿಸಿದರು.