ಸಹಕಾರ ಸಂಘದ ಸದಸ್ಯರಾಗಿರುವ ಷೇರುದಾರರು ತಮ್ಮ ವ್ಯಾಪಾರ ವಹಿವಾಟುಗಳನ್ನು ಕಡ್ಡಾಯವಾಗಿ ಸಂಘದ ಮೂಲಕವೇ ನಡೆಸುವ ಮೂಲಕ ಸಂಘವು ಪ್ರಗತಿಯತ್ತ ಸಾಗಲು ಸಹಕರಿಸಬೇಕು ಎಂದು ಸುರಭಿ ತೋಟೋತ್ಪನ್ನ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಓ.ಬಿ. ರಾಜಶೇಖರ್ ಸೂಚನೆ ನೀಡಿದರು.

ಸೊರಬ: ಸಹಕಾರ ಸಂಘದ ಸದಸ್ಯರಾಗಿರುವ ಷೇರುದಾರರು ತಮ್ಮ ವ್ಯಾಪಾರ ವಹಿವಾಟುಗಳನ್ನು ಕಡ್ಡಾಯವಾಗಿ ಸಂಘದ ಮೂಲಕವೇ ನಡೆಸುವ ಮೂಲಕ ಸಂಘವು ಪ್ರಗತಿಯತ್ತ ಸಾಗಲು ಸಹಕರಿಸಬೇಕು ಎಂದು ಸುರಭಿ ತೋಟೋತ್ಪನ್ನ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಓ.ಬಿ. ರಾಜಶೇಖರ್ ಸೂಚನೆ ನೀಡಿದರು.

ಪಟ್ಟಣದ ಮುರುಘಾ ಮಠದಲ್ಲಿ ಬುಧವಾರ ಸುರಭಿ ತೋಟೋತ್ಪನ್ನ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸಹಕಾರ ಸಂಘದ ನೂತನ ಗೋದಾಮು ನಿರ್ಮಾಣ ಪೂರ್ಣಗೊಂಡಿದ್ದು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರ ಬ್ಯಾಂಕಿನಿಂದ 60 ಲಕ್ಷ ರು. ಸಾಲ ಪಡೆದು ರಸಗೊಬ್ಬರ, ಬೀಜ ಮತ್ತು ಇತರ ಕೃಷಿ ಪರಿಕರಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದರು.

ಗೋದಾಮಿನಲ್ಲಿ ರೈತರಿಗೆ ಬೇಕಾಗುವ ಎಲ್ಲ ರೀತಿಯ ರಸಗೊಬ್ಬರ, ಉತ್ತಮ ತಳಿಯ ಬೀಜಗಳು ಹಾಗೂ ಕೃಷಿ ಪರಿಕರಗಳನ್ನು ಇಟ್ಟು ನ್ಯಾಯಯುತ ದರದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಎಲ್ಲ ಷೇರುದಾರರು ಸಹಕಾರ ನೀಡಬೇಕು ಎಂದರು.

ಉಪಾಧ್ಯಕ್ಷ ಪುಟ್ಟಪ್ಪ ಗಾಳಿಪೂಜೆ, ನಿರ್ದೇಶಕರಾದ ಕೆವಿ ಗೌಡ, ಎನ್ಎಸ್ ಪುಟ್ಟಪ್ಪಗೌಡ, ಅಶೋಕ್, ಆನಂದ ಗೌಡ, ಇಂದೂಧರ್ ಗೌಡ, ಶ್ರೀಪತಿ, ಸುಜಾತ ಜೋತಾಡಿ, ಎಂವಿ ಶಾಂತಮ್ಮ, ಉಮಾಪತಿ, ಬಿ.ಎಚ್‌. ಶಿವಕುಮಾರ್, ಎಂ. ಬಸವೇಶ್ವರ ಮತ್ತು ಸಂಘದ ಕಾರ್ಯದರ್ಶಿ ಎಂ. ಪ್ರಮೋದ್ ಮೊದಲಾದವರಿದ್ದರು.