;Resize=(412,232))
ಬೆಂಗಳೂರು : ಉದ್ಘಾಟನೆಗೆ ಮುನ್ನವೇ ವಾಲಿಕೊಂಡಿರುವ ಕೂಡ್ಲು ಬಳಿಯ ಹರಳೂರು ರಸ್ತೆಯ ಎಸ್‌ಎನ್‌ಎನ್ ರಾಜ್‌ಕಾರ್ಪ್‌ನ 18 ಮಹಡಿಯ 49 ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್ ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.
ಕಟ್ಟಡ ಪೂರ್ಣಗೊಂಡು, ಜಿಬಿಎನಿಂದ ವಾಸಯೋಗ್ಯತೆ (ಒಸಿ) ಪ್ರಮಾಣಪತ್ರವನ್ನು ಪಡೆದುಕೊಂಡಿದ್ದ ಈ ಅಪಾರ್ಟ್‌ಮೆಂಟ್‌ನ ಕೀಗಳನ್ನು ಮಾಲೀಕರಿಗೆ ಹಸ್ತಾಂತರಿಸುವ ಮೊದಲು ಸ್ವಂತ ಎಂಜಿನಿಯರ್‌ಗಳ ತಂಡ ನಡೆಸಿದ ಆಡಿಟಿಂಗ್ ವೇಳೆ ಕಟ್ಟಡ ವಾಲಿರುವುದು ಕಂಡು ಬಂದಿತ್ತು. ಸಮಗ್ರ ಪರಿಶೀಲನೆ ನಂತರ ಕಟ್ಟಡವನ್ನು ನೆಲಸಮ ಮಾಡುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡು, ಜಿಬಿಎಗೆ ಮಾಹಿತಿ ನೀಡಿತ್ತು.
ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಪಾರ್ಟ್‌ಮೆಂಟ್‌ನ ನಿರ್ದೇಶಕ ಅನೂಜ್, ಕಟ್ಟಡವನ್ನು ನಾವೇ ನೆಲಸಮ ಮಾಡುತ್ತಿದ್ದೇವೆ. ಮುಂಬೈ ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, 6 ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಸುರಕ್ಷತಾ ಕ್ರಮ ಅನುಸರಿಸಿ ಹಂತ ಹಂತವಾಗಿ ತೆರವು ಮಾಡುತ್ತೇವೆ ಎಂದರು.
ಬುನಾದಿ ಹಾಕುವ ವೇಳೆ ಕೈಗೊಳ್ಳಬೇಕಿದ್ದ ಕ್ರಮಗಳ ಕುರಿತು ಖಾಸಗಿ ಕನ್ಸಲ್ಟೆನ್ಸಿಯಿಂದ ವರದಿಯನ್ನು ಪಡೆಯಲಾಗಿತ್ತು. ವರದಿಯು ಲೋಪ ದೋಷಗಳಿಂದ ಕೂಡಿದ್ದ ಕಾರಣ ಕಟ್ಟಡ ಪೂರ್ಣಗೊಂಡ ಬಳಿಕ 0.19 ಡಿಗ್ರಿಯಷ್ಟು ಕಟ್ಟಡ ವಾಲಿರುವುದು ಕಂಡು ಬಂದಿದೆ. ಇದನ್ನು ಮೈಕ್ರೋ ಪೈಲಿಂಗ್ ಮೂಲಕ ಸರಿಪಡಿಸಿಕೊಳ್ಳಬಹುದು ಎಂಬ ಸಲಹೆಯು ಬಂದಿತ್ತು. ಆದರೂ, ನಾವು ನೆಲಸಮ ಮಾಡಿ ಹೊಸದಾಗಿ ಕಟ್ಟಿಸಲು ನಿರ್ಧರಿಸಿದ್ದೇವೆ ಎಂದು ಅನೂಜ್ ಹೇಳಿದ್ದಾರೆ.
ಈಗಾಗಲೇ ಫ್ಲ್ಯಾಟ್‌ಗಳು ಬುಕ್ಕಿಂಗ್ ಆಗಿದ್ದವು. ಆದರೆ, ಸನ್ನಿವೇಶ ಬದಲಾಗಿರುವ ಕಾರಣ ಬುಕ್ಕಿಂಗ್ ಮಾಡಿರುವವರೊಂದಿಗೆ ಮಾತನಾಡಿ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಅನೂಜ್ ತಿಳಿಸಿದರು.
ಶಾಲೆಗೆ ಆತಂಕ: ಡೆಮಾಲಿಷನ್ ಆರಂಭವಾಗಿರುವ ಅಪಾರ್ಟ್‌ಮೆಂಟ್ ಸಮೀಪದಲ್ಲಿ ಕೆಂಬ್ರಿಡ್ಜ್ ಶಾಲೆಯಿದ್ದು, ಮಕ್ಕಳು ಹಾಗೂ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಶಾಲೆಯ ಮಗುವಿನ ಪಾಲಕರೊಬ್ಬರು, ಕಟ್ಟಡ ತೆರವು ವೇಳೆ ಆನ್‌ಲೈನ್ ತರಗತಿ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆದರೆ, ಈಗ ಶಾಲೆಗೆ ಬನ್ನಿ ಎಂದು ಹೇಳಿದ್ದಾರೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಆದಷ್ಟು ಬೇಗ ಕಟ್ಟಡ ತೆರವು ಮಾಡಲಿ ಎಂದರು.