ಕ್ಷೇತ್ರ ಸಿದ್ಧ ಮಾಡ್ಕೊಳ್ಳಿ, ಸೀಟು ತರೋದು ನನ್ನ ಹೊಣೆ: ಎಚ್ಡಿಕೆ

Published : Jun 16, 2025, 05:08 AM IST
HD Kumaraswamy

ಸಾರಾಂಶ

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೈತ್ರಿ ಕುರಿತ ಯಾವುದೇ ಅಪಪ್ರಚಾರಗಳಿಗೆ ವಿಚಲಿತರಾಗದೆ ಈಗಿನಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಿ

ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೈತ್ರಿ ಕುರಿತ ಯಾವುದೇ ಅಪಪ್ರಚಾರಗಳಿಗೆ ವಿಚಲಿತರಾಗದೆ ಈಗಿನಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಿ. ಕ್ಷೇತ್ರ ಗಟ್ಟಿಮಾಡಿಕೊಳ್ಳಿ. ದೆಹಲಿಯಿಂದ ಸೀಟು ತರುವುದು ನನ್ನ ಜವಾಬ್ದಾರಿ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ರಾಜ್ಯ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ನಿಖಿಲ್‌ ಕುಮಾರಸ್ವಾಮಿ ನೇತೃತ್ವದ ‘ಜನರೊಂದಿಗೆ ಜೆಡಿಎಸ್‌’ ಪಕ್ಷ ಸಂಘಟನಾ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.

ಜೆಡಿಎಸ್‌ ಮುಗಿದೇ ಹೋಯಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರಲ್ವಾ? ಇಲ್ಲಿ ಜನ ಸೇರಿರುವುದು ನೋಡಿದರೆ ಅವರಿಗೆ ಇಂದೇ ಸಿಕ್ಕಿದಂತಿದೆ. ಸ್ಥಳೀಯವಾಗಿ ನಾಲ್ಕೈದು ಮಂದಿ ಆಡುವ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದರು.

ಶ್ವೇತಪತ್ರ ಪ್ರಕಟಿಸಿ:

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಯಾದಗಿರಿಯಲ್ಲಿ ಕಲ್ಯಾಣ ಕರ್ನಾಟಕದ ಉದ್ಧಾರ ಮಾಡುತ್ತೇವೆ ಎಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಹಾಗಾದರೆ ನಿಮ್ಮ ಪಕ್ಷದ ಆಡಳಿತಾವಧಿಯಲ್ಲಿ, ಅದೂ ಎರಡು ವರ್ಷಗಳ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೀರಿ? ನೀಡಿರುವ ಅನುದಾನ, ಮಾಡಿರುವ ವೆಚ್ಚ, ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.

ಖರ್ಗೆ ಕೊಡುಗೆ ಏನು?:

ಗುರುಮಿಟ್ಕಲ್ ಜನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶಾಸಕರಾಗಿ, ಮಂತ್ರಿಯಾಗಿ, ಪ್ರತಿಪಕ್ಷ ನಾಯಕರಾಗಿ ಲೋಕಸಭೆ ನಂತರ ರಾಜ್ಯಸಭೆ ಪ್ರತಿಪಕ್ಷದ ನಾಯಕರಾಗಿಸಿದ್ದಾರೆ. ಆದರೂ ಕಲ್ಯಾಣ ಕರ್ನಾಟಕ ಇನ್ನೂ ಅಭಿವೃದ್ಧಿ ಆಗಿಲ್ಲ ಯಾಕೆ? ಈವರೆಗೆ ಈ ಭಾಗಕ್ಕೆ ಹಂಚಿಕೆಯಾದ ಅನುದಾನ ಎಲ್ಲಿಗೆ ಹೋಯಿತು? ಕಲ್ಯಾಣ ಕರ್ನಾಟಕವನ್ನು ಬೆಂಗಳೂರು, ಮೈಸೂರಿನಂತೆ ಅಭಿವೃದ್ಧಿ ಮಾಡಿ ಎಂದು ಖರ್ಗೆ ಅವರು ಹೇಳಿದ್ದಾರೆ. ಹಾಗಾದರೆ ಇಷ್ಟು ಸುದೀರ್ಘ ಕಾಲ ನೀವು ಮಾಡಿದ್ದೇನು? ಇಷ್ಟು ವರ್ಷ ಬಂದ ಹಣವೆಲ್ಲ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಜಾತಿ ಗಣತಿ ವರದಿ ಯಾಕೆ ಜಾರಿ ಇಲ್ಲ?:

ಜಾತಿಗಣತಿ ವರದಿ ಸ್ವೀಕಾರ ಮಾಡುವ ವಿಚಾರದಲ್ಲಿ ಕುಮಾರಸ್ವಾಮಿ ಅಂದಿನ ಸಚಿವ ಪುಟ್ಟರಂಗಶೆಟ್ಟಿಯನ್ನು ಹೆದರಿಸಿದರು ಎಂದು ಮುಖ್ಯಮಂತ್ರಿ ಸುಳ್ಳು ಹೇಳಿದ್ದಾರೆ. ಜಾತಿ ಗಣತಿ ವರದಿಯನ್ನು ಅಂಗೀಕಾರ ಮಾಡಬೇಡಿ ಎಂದು ನಿಮ್ಮನ್ನು ಯಾರು ಹಿಡಿದು ಕೂತಿದ್ದಾರೆ? ಯಾಕೆ ವರದಿ ಜಾರಿ ಮಾಡಲಿಲ್ಲ. ಕಾಂತರಾಜು ಫೋಟೋ ಇಟ್ಟುಕೊಂಡು ಪೂಜೆ ಮಾಡಿದ್ರಾ? ಕಾವೇರಿ ಆರತಿಗೆ ನೂರು ಕೋಟಿ ರು. ಖರ್ಚು ಮಾಡುತ್ತಾರಂತೆ. ನಿಮ್ಮ ಮುಖಕ್ಕೆ ಮಂಗಳಾರತಿ ಮಾಡಿಕೊಳ್ಳಲು ನೂರು ಕೋಟಿ ರು. ಹಣ ಬೇಕಾ? ಎಂದು ವಾಗ್ದಾಳಿ ನಡೆಸಿದರು.

ಅಪಪ್ರಚಾರಕ್ಕೆ ಕಿವಿ ಬೇಡ

ಜೆಡಿಎಸ್‌ ಕಥೆ ಮುಗಿದೇ ಹೋಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳ್ತಾರೆ

ಇಂದು ಇಲ್ಲಿ ಸೇರಿರುವ ಜನ ಸಮೂಹವೇ ಅವರ ಮಾತಿಗೆ ಉತ್ತರದಂತಿದೆ

ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನಿಮ್ಮ ನಿಮ್ಮ ಕ್ಷೇತ್ರಗಳನ್ನು ಸಿದ್ಧಪಡಿಸಿಕೊಳ್ಳಿ

ನಮಗೆ ಬೇಕಾದ ಸೀಟು ದೆಹಲಿಯಿಂದ ತರುವ ಹೊಣೆ ನನ್ನದು: ಕುಮಾರಸ್ವಾಮಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು