ಚುನಾವಣೆ ಮುಂದೂಡಿಕೆಗೆ ಕಾರಣರಾದ ಅಧಿಕಾರಿಗಳ ಅಮಾನತಿಗೆ ಜೆಡಿಎಸ್ ಆಗ್ರಹ । ಡಿವೈಎಸ್‌ಪಿ ಕಚೇರಿ ಮುಂದೆ ಧರಣಿ
ಚನ್ನಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯನ್ನು ಹಠಾತ್ತಾಗಿ ಮುಂದೂಡಿದ ಕ್ರಮ ಖಂಡಿಸಿ ಹಾಗೂ ಇದಕ್ಕೆ ಕಾರಣಕರ್ತ ಅಧಿಕಾರಿಗಳ ಅಮಾನತುಗೊಳಿಸುವಂತೆ ಆಗ್ರಹಿಸಿ ನಗರದ ಡಿವೈಎಸ್‌ಪಿ ಕಚೇರಿ ಎದುರು ಜೆಡಿಎಸ್ ತಾಲೂಕು ಘಟಕದಿಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಡಿವೈಎಸ್‌ಪಿ ಕಚೇರಿ ಮಂದೆ ಜಮಾಯಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಟಿಎಪಿಸಿಎಂಎಸ್ ಚುನಾವಣೆ ನಡೆದರೆ ಕಾನೂನು ವ್ಯವಸ್ಥೆಗೆ ಧಕ್ಕೆಯಾಗುವ ಕುರಿತು ವರದಿ ನೀಡಿದ ಪೊಲೀಸ್ ಇಲಾಖೆ ಹಾಗೂ ಚುನಾವಣೆಯನ್ನು ಮುಂದೂಡಿದ ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗೆ ಡಿ.೩ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಶನಿವಾರ ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಚುನಾವಣೆ ಮುಂದೂಡಿಕೆಯಾಗಿರುವ ನೋಟಿಸ್ ಅನ್ನು ಸಂಘದ ಗೋಡೆಗೆ ಚುನಾವಣಾಧಿಕಾರಿಗಳು ಅಂಟಿಸಿ ಹೋಗಿದ್ದಾರೆ. ವಿನಾಕರಣ ಚುನಾವಣೆ ಮುಂದೂಡಿಕೆ ಮಾಡಿರುವುದು ಖಂಡನೀಯ. ಇಂದೇ ಟಿಎಪಿಸಿಎಂಎಸ್ ಚುನಾವಣೆಗೆ ದಿನಾಂಕ ಘೋಷಿಸಬೇಕು ಎಂದು ಆಗ್ರಹಿಸಿದರು.
ದಿನಾಂಕ ಘೋಷಣೆಗೆ ಪಟ್ಟು:
ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಮುಖಂಡರಾದ ಇ.ತಿ. ಶ್ರೀನಿವಾಸ್, ಮೆಹರೀಶ್, ಮಾಗನೂರು ಗಂಗರಾಜು ಇತರರು ಉಪಸ್ಥಿತರಿದ್ದರು.
ಡಿವೈಎಸ್‌ಪಿ ಕಚೇರಿ ಎದುರು ಹೈಡ್ರಾಮಾ!
ಪ್ರತಿಭಟನಾನಿರತರು ಚುನಾವಣಾಧಿಕಾರಿ ಬಂದು ಚುನಾವಣಾ ದಿನಾಂಕ ಘೋಷಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಡಿವೈಎಸ್‌ಪಿ ಗಿರಿ ಬಂದು ಮನವೊಲಿಸಲು ಯತ್ನಿಸಿದರಾದರೂ ಚುನಾವಣಾಧಿಕಾರಿ ಬರುವವರಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರ ಪಟ್ಟು ಹಿಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾನಿರತರು ಚುನಾವಣಾಧಿಕಾರಿ ವಿರುದ್ಧ ಗರಂ ಆದರು. ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ಹಂತದಲ್ಲಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಆದರೆ, ಮಧ್ಯೆ ಪ್ರವೇಶಿಸಿದ ಡಿವೈಎಸ್‌ಪಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
---