ಹಂಗಾಮಿ ಸಭಾಪತಿ ಆಗಿ ಪುಟ್ಟಣ್ಣ ನೇಮಕ : ಗೌರ್‍ನರ್‌

Published : Aug 11, 2026, 05:14 AM IST
Vidhana Soudha

ಸಾರಾಂಶ

ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಸವರಾಜ ಹೊರಟ್ಟಿ ಅವರು ರಾಜ್ಯಪಾಲರಿಗೆ ಪ್ರತ್ಯೇಕ ಪತ್ರ ಬರೆದಿದ್ದರೂ, ರಾಜ್ಯಪಾಲರು ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿ ಆಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ

ಬೆಂಗಳೂರು : ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಸವರಾಜ ಹೊರಟ್ಟಿ ಅವರು ರಾಜ್ಯಪಾಲರಿಗೆ ಪ್ರತ್ಯೇಕ ಪತ್ರ ಬರೆದಿದ್ದರೂ, ರಾಜ್ಯಪಾಲರು ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿ ಆಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ತನ್ಮೂಲಕ ಸಭಾಪತಿ ಚುನಾವಣೆ ಪ್ರಕ್ರಿಯೆ ಸುಲಲಿತವಾದಂತಾಗಿದೆ.

ಆ.14ರಂದು ನೂತನ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಾಂಗ್ರೆಸ್‌ ಪಕ್ಷವು ಸಭಾಪತಿ ಹುದ್ದೆಗೆ ಆಯ್ಕೆ ಮಾಡಿರುವ ಸಲೀಂ ಅಹ್ಮದ್‌ ಅವರು ಅನಾಯಾಸವಾಗಿ ಸಭಾಪತಿ ಸ್ಥಾನ ಅಲಂಕರಿಸುವ ಸಾಧ್ಯತೆಯಿದೆ.

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಹೊರಟ್ಟಿ ಅವರು ಬಳಿಕ ಆ.14ರಂದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಬಳಿಕ ಒತ್ತಡ ಹೆಚ್ಚಾಗಿದ್ದರಿಂದ ಆ.7 ರಂದೇ ರಾಜೀನಾಮೆ ನೀಡಿದ್ದರು.

ಬಳಿಕ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಹೊರಟ್ಟಿ ಅವರು ಮುಖ್ಯಮಂತ್ರಿಗಳು ಹಾಗೂ ಸಚಿವರು ಬಂದು ಒತ್ತಡ ಹಾಕಿದ್ದರಿಂದ ನಾನು ಆ.7ರಂದೇ ರಾಜೀನಾಮೆ ಕೊಡಬೇಕಾಯಿತು ಎಂದು ದೂರಿದ್ದರು. ಹೀಗಾಗಿ ರಾಜ್ಯಪಾಲರು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಹೊರಟ್ಟಿ ಅವರ ರಾಜೀನಾಮೆಯನ್ನು ರಾಜ್ಯಪಾಲರು ತಡೆ ಹಿಡಿಯುತ್ತಾರೆಯೇ ಎಂಬ ಅನುಮಾನಗಳು ಉಂಟಾಗಿದ್ದವು.

ಆದರೆ, ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್ ಅವರು ಹೊರಟ್ಟಿ ಪತ್ರದ ಬಳಿಕವೂ ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಗಳಾಗಿ ನೇಮಿಸಿ ಆದೇಶಿಸಿದ್ದಾರೆ. ಹೀಗಾಗಿ ಸಭಾಪತಿ ಆಗಿ ಹೊರಟ್ಟಿ ಅವರ ಪಾತ್ರ ಅಧಿಕೃತವಾಗಿ ಮುಗಿದಂತಾಗಿದೆ. ವಾಸ್ತವವಾಗಿ ಹೊರಟ್ಟಿ ಅವರ ರಾಜೀನಾಮೆ ಪಡೆಯಲು ಮನವೊಲಿಕೆ ವೇಳೆ ಹಂಗಾಮಿ ಸಭಾಪತಿಯಾಗಿ ಹೊರಟ್ಟಿ ಅವರು ಇರುತ್ತಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಇದೀಗ ಸದರಿ ಹುದ್ದೆಗೆ ಪುಟ್ಟಣ್ಣ ಅವರ ನೇಮಕವಾಗಿದೆ.

ರಾಜ್ಯಪಾಲರ ಅಧಿಸೂಚನೆಯಲ್ಲೇನಿದೆ?

ಸದನವು ಸಭಾಪತಿಯನ್ನು ಯುಕ್ತವಾಗಿ ಚುನಾಯಿಸುವವರೆಗೆ ವಿಧಾನಪರಿಷತ್ತಿನ ಸಭಾಪತಿ ಹುದ್ದೆಯ ಕರ್ತವ್ಯವನ್ನು ನಿರ್ವಹಿಸಲು ಆ.7 ರಿಂದ ಜಾರಿಗೆ ಬರುವಂತೆ ಪುಟ್ಟಣ್ಣ ಅವರನ್ನು ನೇಮಿಸುತ್ತಿದ್ದೇನೆ ಎಂದು ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ.

ಆ.7ರಂದು ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ‌ ನೀಡಿದ ಕೆಲವೇ ಹೊತ್ತಿನಲ್ಲಿ ಸಭಾಪತಿ ಸ್ಥಾ‌ನ ತೆರವಾಗಿರುವ ಅಧಿಸೂಚನೆ ಹೊರಬಿದ್ದಿತ್ತು. ಇದೀಗ ರಾಜ್ಯಪಾಲರು ಆ.10ರಂದು ಸೋಮವಾರ ಆ.7 ರಿಂದ ಅನ್ವಯವಾಗುವಂತೆ ಸಭಾಪತಿ ಕರ್ತವ್ಯವನ್ನು ಪುಟ್ಟಣ್ಣ ಅವರಿಗೆ ವಹಿಸಿದ್ದಾರೆ.

ಅಧಿಕಾರ ವಹಿಸಿಕೊಂಡ ಪುಟ್ಟಣ್ಣ:

ಬೆನ್ನಲ್ಲೇ ಜವಾಬ್ದಾರಿ ವಹಿಸಿಕೊಂಡ ಪುಟ್ಟಣ್ಣ, ‘ಪರಿಷತ್ತಿನ ಸಭಾಪತಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಸಭಾಪತಿ ಅವರನ್ನು ಸದನವು ಆಯ್ಕೆ ಮಾಡುವವರೆಗೆ, ಸಭಾಪತಿ ಕಚೇರಿಯ ಕರ್ತವ್ಯಗಳನ್ನು ನಿರ್ವಹಿಸುವಂತೆ ರಾಜ್ಯಪಾಲರು ನನ್ನನ್ನು ನೇಮಕ ಮಾಡಿದ್ದಾರೆ. ಇದು ನನಗೆ ದೊರೆತ ಗೌರವ ಹಾಗೂ ಮಹತ್ವದ ಜವಾಬ್ದಾರಿ. ಸದನದ ಘನತೆ, ಸಂಸದೀಯ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿದು ನಿಷ್ಪಕ್ಷಪಾತವಾಗಿ ಮತ್ತು ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತೇನೆ’ ಎಂದಿದ್ದಾರೆ.

ಸುಗಮ ಹೇಗೆ?

- ಆ.14ರಂದು ಪರಿಷತ್‌ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಸವರಾಜ ಹೊರಟ್ಟಿ ಘೋಷಿಸಿದ್ದರು

- ಆದರೆ ಆ.7ರಂದೇ ರಾಜೀನಾಮೆ ನೀಡಿದ್ದರು. ಅವರನ್ನು ಹಂಗಾಮಿ ಸಭಾಪತಿ ಮಾಡುವುದಾಗಿ ಸಿಎಂ ಹೇಳಿದ್ದರು

- ಈ ನಡುವೆ, ಒತ್ತಡದಿಂದ ರಾಜೀನಾಮೆ ಕೊಡಿಸಲಾಗಿದೆ ಎಂದು ರಾಜ್ಯಪಾಲರಿಗೆ ಹೊರಟ್ಟಿ ಪತ್ರ ಬರೆದಿದ್ದರು

- ಗೌರ್ನರ್‌ ಅವರು ಹೊರಟ್ಟಿ ರಾಜೀನಾಮೆ ತಡೆ ಹಿಡಿಯಬಹುದು ಎಂಬ ಅನುಮಾನ ಇತ್ತು. ಈಗ ಎಲ್ಲ ಸುಗಮ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪಾದಯಾತ್ರೆಯಿಂದ ದೂರ ಇದ್ದದ್ದಕ್ಕೆ ರಾಜಕೀಯ ಕಾರಣವಿಲ್ಲ : ವಿಜಯೇಂದ್ರ
ಅಧಿವೇಶನದ ಬಳಿಕ ಸಚಿವರ ಸ್ಥಾನಗಳ ಬದಲಾವಣೆ: ಡಿಕೆಶಿ