ಪಾದಯಾತ್ರೆಯಿಂದ ದೂರ ಇದ್ದದ್ದಕ್ಕೆ ರಾಜಕೀಯ ಕಾರಣವಿಲ್ಲ : ವಿಜಯೇಂದ್ರ

Published : Aug 11, 2026, 05:08 AM IST
Why Vijayendra absent JDS padayatra opposing the Bidadi township

ಸಾರಾಂಶ

‘ಬಿಡದಿ ಹೋರಾಟಕ್ಕೆ ಬಿಜೆಪಿ ಬೆಂಬಲದಲ್ಲಿ ಯಾವುದೇ ಗೊಂದಲವಿಲ್ಲ. ನಾನು ಪಾದಯಾತ್ರೆಯಲ್ಲಿ ಭಾಗವಹಿಸದಿರುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು : ‘ಬಿಡದಿ ಹೋರಾಟಕ್ಕೆ ಬಿಜೆಪಿ ಬೆಂಬಲದಲ್ಲಿ ಯಾವುದೇ ಗೊಂದಲವಿಲ್ಲ. ನಾನು ಪಾದಯಾತ್ರೆಯಲ್ಲಿ ಭಾಗವಹಿಸದಿರುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಡದಿ ರೈತರ ಜಮೀನು ಹಾಗೂ ರೈತರ ಹಿತರಕ್ಷಣೆಯ ವಿಚಾರದಲ್ಲಿ ಬಿಜೆಪಿಗೆ ಯಾವುದೇ ಗೊಂದಲವಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಎರಡೂ ರೈತರ ಹಿತಕ್ಕಾಗಿ ಹೋರಾಟ ನಡೆಸುತ್ತಿದ್ದು, ರೈತರ ಹಿತರಕ್ಷಣೆಯೇ ನಮ್ಮೆಲ್ಲರ ಸಾಮಾನ್ಯ ಉದ್ದೇಶ ಎಂದರು.

ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು

ಚಿಕ್ಕಬಳ್ಳಾಪುರ ಮತ್ತು ಕೋಲಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮಗಳು ಹಲವು ಬಾರಿ ಮುಂದೂಡಲ್ಪಟ್ಟಿದ್ದವು. ಭಾನುವಾರ ಕಾರ್ಯಕ್ರಮ ನಡೆಸಬೇಕೆಂಬ ಸ್ಥಳೀಯ ನಾಯಕರ ಒತ್ತಾಯದ ಹಿನ್ನೆಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ತೆರಳಬೇಕಾಯಿತು ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ ಈ ಹೋರಾಟದಿಂದ ಹಿಂದೆ ಸರಿದಿಲ್ಲ. ಸರಿಯುವುದೂ ಇಲ್ಲ. ಬಿಡದಿ ಮಾತ್ರವಲ್ಲದೆ ರಾಜ್ಯಾದ್ಯಂತ ರೈತರ ಜಮೀನುಗಳ ರಕ್ಷಣೆ ವಿಚಾರದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಬಿಡದಿ, ವಿಮಾನ ನಿಲ್ದಾಣ ಸೇರಿ ರೈತರ ಭೂಮಿಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ಬಿಜೆಪಿ ರೈತರ ಪರ ನಿಲ್ಲಲಿದೆ. ರೈತರ ಜಮೀನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಗೊಂದಲ ಬೇಡ:

ಬಿಡದಿ ಪಾದಯಾತ್ರೆ ಕುರಿತು ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ನಾನು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕಳೆದ ವಾರ ದೂರವಾಣಿ ಮೂಲಕ ಮಾತನಾಡಿ ಬಿಜೆಪಿ ಕೂಡ ರೈತರ ಪರವಾಗಿದ್ದು, ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿ ಪಾದಯಾತ್ರೆ ನಡೆಸುವ ಕುರಿತು ಚರ್ಚಿಸಿದ್ದೆ. ನಂತರ ಜೆಡಿಎಸ್ ವತಿಯಿಂದ ಪಾದಯಾತ್ರೆಯ ದಿನಾಂಕವನ್ನು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ನಿರ್ಧಾರಕ್ಕೆ ಬರಲಾಯಿತು. ಜೆಡಿಎಸ್ ಈಗಾಗಲೇ ದಿನಾಂಕ ಘೋಷಿಸಿರುವ ಹಿನ್ನೆಲೆಯಲ್ಲಿ, ಸಾಂಕೇತಿಕವಾಗಿ ಪಾದಯಾತ್ರೆಗೆ ಬೆಂಬಲ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು ಎಂದು ವಿಜಯೇಂದ್ರ ವಿವರಿಸಿದರು.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿ ಪಕ್ಷದ ಮುಖಂಡರು ಸಾಂಕೇತಿಕವಾಗಿ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಒಳಗೆ ಯಾವುದೇ ರೀತಿಯ ಗೊಂದಲವಿಲ್ಲ. ರೈತರ ಹೋರಾಟದ ವಿಚಾರದಲ್ಲಿ ಬಿಜೆಪಿ ಸದಾ ರೈತರ ಪರವಾಗಿಯೇ ನಿಲ್ಲಲಿದೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಧಿವೇಶನದ ಬಳಿಕ ಸಚಿವರ ಸ್ಥಾನಗಳ ಬದಲಾವಣೆ: ಡಿಕೆಶಿ
3 ದಿನದ ದಳ ಪಾದಯಾತ್ರೆ ಎರಡನೇ ದಿನವೇ ಮೊಟಕು