3 ದಿನದ ದಳ ಪಾದಯಾತ್ರೆ ಎರಡನೇ ದಿನವೇ ಮೊಟಕು

Published : Aug 11, 2026, 04:58 AM IST
Bidadi JDS padayatra

ಸಾರಾಂಶ

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯು ಬೆಂಗಳೂರು ನಗರದತ್ತ ತೆರಳದಂತೆ ಪೊಲೀಸರು ಸೋಮವಾರ ತಡೆಯೊಡ್ಡಿದ್ದರಿಂದ ತಳ್ಳಾಟ-ನೂಕಾಟದಂತಹ ಹೈಡ್ರಾಮಾ

 ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯು ಬೆಂಗಳೂರು ನಗರದತ್ತ ತೆರಳದಂತೆ ಪೊಲೀಸರು ಸೋಮವಾರ ತಡೆಯೊಡ್ಡಿದ್ದರಿಂದ ತಳ್ಳಾಟ-ನೂಕಾಟದಂತಹ ಹೈಡ್ರಾಮಾ ನಡೆದು ಯಾತ್ರೆ ಎರಡನೇ ದಿನವೇ ಮೊಟಕುಗೊಂಡಿತು. ಆದರೆ, ಯೋಜನೆ ವಿರುದ್ಧ ಚಳವಳಿ ಮುಂದುವರಿಸುವುದಾಗಿ ಹೇಳಿರುವ ನಿಖಿಲ್‌, ಆಗಸ್ಟ್ 18ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ ಪಡೆದ ಪಾದಯಾತ್ರೆ

ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಲ್ಲಿ ಎರಡನೇ ದಿನವಾದ ಸೋಮವಾರ ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ ಪಡೆದ ಪಾದಯಾತ್ರೆ 10 ಕಿಲೋ ಮೀಟರ್ ಸಾಗಿ ಬೆಂಗಳೂರು ದಕ್ಷಿಣ ತಾಲೂಕಿನ ಕಣಿಮಿಣಿಕೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದರು. ಹೈಕೋರ್ಟ್ ಸೂಚನೆಯಂತೆ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೆಂಗಳೂರು ನಗರದ ಇತರ ಸ್ಥಳಗಳಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಸೂಚಿಸಿ, ನಿಖಿಲ್ ಸೇರಿದಂತೆ ಪ್ರಮುಖ ನಾಯಕರನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸಿದಾಗ ನೂಕಾಟ-ತಳ್ಳಾಟ ಉಂಟಾಯಿತು.

ಈ ವೇಳೆ, ಪೊಲೀಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪೊಲೀಸರ ಸರ್ಪಗಾವಲನ್ನು ಭೇದಿಸಿದ ನಾಯಕರು ಮತ್ತು ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ಬೆಂಗಳೂರಿನತ್ತೆ ಹೆಜ್ಜೆ ಹಾಕಿದರು. ಬಳಿಕ, ಕಣಿಮಿಣಿಕೆ ಸಮೀಪದ ಸಿರಿ ಕನ್ವೆನ್ಷನ್ ಹಾಲ್ ಬಳಿ ಬರುತ್ತಿದ್ದಂತೆ ರಸ್ತೆಗೆ ಬಸ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ, ಸಾವಿರಾರು ಪೊಲೀಸರನ್ನು ನಿಯೋಜಿಸಲಾಯಿತು. ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕೆಲಕಾಲ ಧರಣಿ ಕುಳಿತು, ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ಕೊನೆಗೆ, ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಯನ್ನು ಮೊಟಕುಗೊಳಿಸುತ್ತಿರುವುದಾಗಿ ಘೋಷಿಸಿದರು. ಆಗಸ್ಟ್ 18ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಹೋರಾಟ ನಡೆಸೋಣ, ಅಲ್ಲಿಗೆ ಎಲ್ಲರೂ ಬನ್ನಿ ಎಂದು ರೈತರು, ಕಾರ್ಯಕರ್ತರಿಗೆ ಕರೆ ನೀಡಿದರು.

ಜೆಡಿಎಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ತಳ್ಳಾಟ-ನೂಕಾಟದ ವೇಳೆ ಎಸ್ಪಿ ಶ್ರೀನಿವಾಸ್​ಗೌಡರ ಎಡಗೈ ಬೆರಳಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಪ್ರತಿಭಟನೆಯನ್ನು ಶಾಂತಿಯುತವಾಗಿ ಕೈಬಿಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ಮುಂದುವರಿಸುತ್ತೇವೆ. ಆಗಸ್ಟ್ 18ರಂದು ಫ್ರೀಡಂಪಾರ್ಕ್‌ನಲ್ಲಿ ಹೋರಾಟ ನಡೆಯಲಿದೆ.

- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಭಾರತ ಜೋಡೋ ಸಂಘಕ್ಕೆ ನೋಂದಣಿ : ಸಿಎಂ
ದಿಢೀರ್‌ ಪದತ್ಯಾಗ ರಹಸ್ಯದ ಬಗ್ಗೆ ಗೌರ್‍ನರ್‌ಗೆ ಹೊರಟ್ಟಿ ಪತ್ರ