ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ.
ಬೆಂಗಳೂರು : ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ.
ಈ ವೇಳೆ ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳ ಭರ್ತಿ, ಐದು ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ನಿಗಮ ಮಂಡಳಿ ನೇಮಕಾತಿ ಕುರಿತು ಹೈಕಮಾಂಡ್ ನಾಯಕರೊಂದಿಗ ರಾಜ್ಯ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದಾರೆ.
ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧದ ಅಪಸ್ವರ ಮತ್ತು ಮತ ಕಳವು ಕುರಿತು ಚರ್ಚೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಎಐಸಿಸಿಯು ಮಂಗಳವಾರ (ಸೆ.29) ದೆಹಲಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆದಿದೆ. ಈ ಸಭೆಯಲ್ಲಿ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.
ಸಂಪುಟ, ನಿಗಮ ಮಂಡಳಿ ಬಗ್ಗೆ ಚರ್ಚೆ -ಡಿಕೇಶಿ:
ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗಿನ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿಗಮ ಮಂಡಳಿ, ಸಚಿವ ಸಂಪುಟದ 2 ಖಾಲಿ ಹುದ್ದೆ ಹಾಗೂ ವಿಧಾನ ಪರಿಷತ್ ನಾಮನಿರ್ದೇಶನದ ಬಗ್ಗೆ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
2 ಸಚಿವ ಸ್ಥಾನ ಭರ್ತಿ ಹಾಗೂ ನಿಗಮ ಮಂಡಳಿ ನೇಮಕಾತಿ ಬಗ್ಗೆ ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ಹಿರಿಯ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸಬೇಕು. ನಂತರ ಪಕ್ಷದ ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎಂಬ ತೀರ್ಮಾನವಾಗಿದೆ. ಉಳಿದ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ಸಂಪುಟದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ವಿಚಾರದ ಕುರಿತು ಕೇಳಿದಾಗ, ಅದರ ಬಗ್ಗೆಯೂ ದೆಹಲಿಗೆ ಹೋದಾಗ ಚರ್ಚಿಸುತ್ತೇನೆ ಎಂದರು.
ರಾಜ್ಯ ನಾಯಕತ್ವ ಸುದೀರ್ಘ ಚರ್ಚೆ
ಇತ್ತೀಚೆಗೆ ಸುರ್ಜೇವಾಲ ಅವರು ಬೆಂಗಳೂರಿಗೆ ಆಗಮಿಸಿದ್ದಾಗಲೂ ಈ ವಿಚಾರಗಳ ಬಗ್ಗೆ ರಾಜ್ಯ ನಾಯಕತ್ವ ಸುದೀರ್ಘ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಚರ್ಚೆಯಾದ ಅಂಶಗಳ ಆಧಾರದ ಮೇಲೆ ವರಿಷ್ಠರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ವೇಳೆ 3-4 ಬಾರಿ ಗೆದ್ದವರು ಸೇರಿದಂತೆ 8-10 ಮಂದಿ ಶಾಸಕರನ್ನು ಬಿಟ್ಟು ಉಳಿದೆಲ್ಲಾ ನಿಗಮ-ಮಂಡಳಿ ಅಧ್ಯಕ್ಷರನ್ನು ಬದಲಿಸಬೇಕು. ಹೊಸಬರಿಗೆ ಅವಕಾಶ ನೀಡಬೇಕು. ಜತೆಗೆ ನಿರ್ದೇಶಕರನ್ನೂ ಬದಲಿಸಿ ಕಾರ್ಯಕರ್ತರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡಿ ಪಕ್ಷ ಸಂಘಟನೆಗೆ ಪ್ರೇರೇಪಿಸಬೇಕು ಎಂಬ ಚರ್ಚೆಯಾಗಲಿದ್ದು, ಅಂತಿಮ ತೀರ್ಮಾನವಾಗುವ ನಿರೀಕ್ಷೆಯಿದೆ.

