ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಲಿನ ದರವನ್ನು ಪ್ರತಿ ಲೀಟರ್‌ಗೆ 12 ರು. ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಲಿನ ದರವನ್ನು ಪ್ರತಿ ಲೀಟರ್‌ಗೆ 12 ರು. ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲಿನ ದರ ಏರಿಕೆಗೆ ರೈತರು ಒತ್ತಾಯಿಸಿದ್ದಾರೆ. ರೈತರು ಹಾಗೂ ಒಕ್ಕೂಟಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ತಮ್ಮನ್ನು ಭೇಟಿಯಾಗಿ 12 ರು. ಹೆಚ್ಚಳ ಮಾಡಿ. ಅದರಲ್ಲಿ ಎರಡು ರು. ಸಂಘಗಳಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿನ ಪರಿಸ್ಥಿತಿ ಬಗ್ಗೆ ವರದಿಗಳನ್ನು ಪಡೆದು, ಪರಿಶೀಲಿಸುತ್ತೇವೆ. ಅದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.ಹಾಲಿನ ಪ್ರಸ್ತುತ ದರದಿಂದ ಸಂಘಗಳಿಗೆ ನಷ್ಟವಾಗುತ್ತಿದೆ. ಬೆಲೆ ವಿಚಾರದಲ್ಲಿ ರೈತರಲ್ಲಿ ಆಕ್ರೋಶವಿದೆ. 50 ಸಾವಿರ ಹಾಲು ಉತ್ಪಾದಕರು ಹಾಲಿನ ದರ ಏರಿಕೆಗೆ ಆಗ್ರಹಿಸಿದ್ದಾರೆ. ಹೀಗಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದರು.ನಷ್ಟ ಆಗುತ್ತಿದೆ, ಬೇಗ ನೆರವಿಗೆ ಬನ್ನಿ: ಡಿಕೆಸುಹಾಲಿನ ಒಕ್ಕೂಟಗಳು ಹಾಗೂ ರೈತರಿಗೆ ಆಗುತ್ತಿರುವ ನಷ್ಟ ತಡೆಯಲು ಸರ್ಕಾರ ಕೂಡಲೇ ನಮ್ಮ ನೆರವಿಗೆ ಧಾವಿಸಬೇಕು. ಪ್ರತಿ ಲೀಟರ್‌ಗೆ 10 ರು. ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕೂಟಗಳು 4-5 ತಿಂಗಳಿಂದ ನಷ್ಟ ಅನುಭವಿಸುತ್ತಿದೆ. ಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳು ನಾಲ್ಕು ತಿಂಗಳ ಹಿಂದೆಯೇ ದರ ಹೆಚ್ಚಳ ಮಾಡಿವೆ. ಪೆಟ್ರೋಲ್, ಡೀಸೆಲ್, ಪ್ಯಾಕೇಜ್ ಮೆಟೀರಿಯಲ್, ಸಕ್ಕರೆ, ಜೋಳ, ಆಹಾರದ ಬೆಲೆ ಜಾಸ್ತಿಯಾಗಿರುವುದರಿಂದ ಹಾಲಿನ ದರ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸರ್ಕಾರಕ್ಕೆ ಕಳೆದ 5-6 ತಿಂಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.ಯುದ್ಧ, ಬೆಲೆ ಏರಿಕೆಯಿಂದ ನಮಗೆ ಕಷ್ಟವಾಗಿದೆ. ರೈತರೆಲ್ಲರೂ ಹೋರಾಟ ಮಾಡಿದ್ದು ಬೆಂಗಳೂರಿನಲ್ಲಿ ಲಕ್ಷಕ್ಕೂ ಹೆಚ್ಚು ಜನ ಬಂದು ಪ್ರತಿಭಟನೆ ನಡೆಸಿದ್ದಾರೆ. ಎಲ್ಲ ಶಾಸಕರಿಗೂ ಮನವಿ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು ಎಂದರು.
ಈ ಹಿಂದೆ 3,4 ರು. ಹೆಚ್ಚಳ ಮಾಡಿದಾಗ ಒಕ್ಕೂಟಗಳಿಗೆ ಹಣದ ನೆರವು ನೀಡಿಲ್ಲ. ಬದಲಿಗೆ ಎಲ್ಲ ಹಣ ರೈತರಿಗೆ ವರ್ಗಾಯಿಸಲಾಯಿತು. ಒಕ್ಕೂಟಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದ್ದು, ಈ ಬಾರಿ ಒಕ್ಕೂಟಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.