ಜಾರಿ ನಿರ್ದೇಶನಾಲಯ (ಇ.ಡಿ)ವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಪ್ರಮುಖ ಆರೋಪಿ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಸೇರಿ ಮೂವರು ಆರೋಪಿಗಳಿಗೆ ಸೇರಿದ 1.22 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ (ಇ.ಡಿ)ವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಪ್ರಮುಖ ಆರೋಪಿ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಸೇರಿ ಮೂವರು ಆರೋಪಿಗಳಿಗೆ ಸೇರಿದ 1.22 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌, ಸದಸ್ಯೆ ಬಿ.ವಿ.ಗೀತಾ ಮತ್ತು ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ಗೆ ಸೇರಿದ ಆಸ್ತಿಗಳನ್ನು ಇ.ಡಿ. ಜಪ್ತಿ ಮಾಡಿದೆ.

ಈ ಮೂವರು ಆರೋಪಿಗಳು ಮಧ್ಯವರ್ತಿ ಬಸವರಾಜ ಕನ್ನಾಳೆ ಹಾಗೂ ಇತರರೊಂದಿಗೆ ಸೇರಿ ಸಂಚು ರೂಪಿಸಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಭ್ಯರ್ಥಿಗಳಿಗೆ ಖಚಿತವಾಗಿ ಹುದ್ದೆಗೆ ಆಯ್ಕೆ ಮಾಡುವ ಭರವಸೆ ನೀಡಿ, ಅವರಿಂದ ಅಕ್ರಮವಾಗಿ ಹಣ ಪಡೆದಿರುವುದು ತನಿಖೆಯಲ್ಲಿ ತಿಳಿದಿದೆ.

ಕನ್ನಾಳೆ 10 ಅಭ್ಯರ್ಥಿಗಳೊಂದಿಗೆ ಡೀಲ್‌:

ಅಂದಿನ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ 2026ರ ಜ.7ರಂದು ಉತ್ತರ ಸಹಿತ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿ ತನ್ನ ಆಪ್ತ ಬಸವರಾಜ ಕನ್ನಾಳೆಗೆ ನೀಡಿದ್ದರು. ಬಳಿಕ ಕನ್ನಾಳೆ 10 ಮಂದಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ಡೀಲ್‌ ಕುದುರಿಸಿದ್ದರು. ಪ್ರತಿ ಹುದ್ದೆಗೆ 20 ಲಕ್ಷ ರು.ನಿಂದ 40 ಲಕ್ಷ ರು. ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ತರುವಾಯ ಅಭ್ಯರ್ಥಿಗಳಿಂದ ಮುಂಗಡವಾಗಿ ಹಣ ಪಡೆದುಕೊಂಡಿದ್ದರು.

ಬಾಕಿ ಹಣಕ್ಕೆ ಗ್ಯಾರಂಟಿಯಾಗಿ ಅಭ್ಯರ್ಥಿಗಳು ಸಹಿ ಮಾಡಿದ ಖಾಲಿ ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳನ್ನು ಪಡೆದುಕೊಂಡಿದ್ದರು. ಪರೀಕ್ಷೆಗೂ ಒಂದು ದಿನ ಮುಂಚಿತವಾಗಿ 10 ಮಂದಿ ಅಭ್ಯರ್ಥಿಗಳನ್ನು ಬೆಂಗಳೂರು ಹೊರವಲಯದ ವಿಲ್ಲಾಗೆ ಕರೆದೊಯ್ದು ಉತ್ತರ ಸಹಿತ ಪ್ರಶ್ನೆಪತ್ರಿಕೆ ನೀಡಿದ್ದರು. ಈ ಅಭ್ಯರ್ಥಿಗಳ ಒಎಂಆರ್‌ ಉತ್ತರ ಪತ್ರಿಕೆಗಳು ಕೆಪಿಎಸ್ಸಿ ಪ್ರಕಟಿಸಿದ ಆರಂಭಿಕ ಕೀ ಉತ್ತರಗಳೊಂದಿಗೆ ಸಂಪೂರ್ಣ ಹೊಂದಿಕೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕೆಎಎಸ್‌ ಸಂದರ್ಶನದಲ್ಲಿ ಹೇಳಿದ ಅಭ್ಯರ್ಥಿಗೆ ಉತ್ತಮ ಅಂಕ:

ಶಿವಶಂಕರಪ್ಪ ಸಾಹುಕಾರ್‌ ಸೂಚನೆ ಮೇರೆಗೆ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಆಸನ ವ್ಯವಸ್ಥೆ ಮತ್ತು ಪ್ರಶ್ನೆ ಪತ್ರಿಕೆಗಳ ಕ್ರಮ ಬದಲಿಸುವ ಚಾರ್ಟ್‌ಗಳನ್ನು ಬಳಸಿಕೊಂಡು 6 ಅಭ್ಯರ್ಥಿಗಳಿಗೆ 80 ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿದ್ಧಪಡಿಸಿದ್ದರು. ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಅವರು ಈ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಗಂಗ್ವಾರ್‌ಗೆ ನೀಡಿದ್ದರು. 2026ರ ಜ.8ರಂದು ಆ ಉತ್ತರಗಳನ್ನು ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌, ಬಿ.ವಿ.ಗೀತಾಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಶಿವಶಂಕರಪ್ಪ ಸಾಹುಕಾರ್‌ ಅವರು ಕೆಎಎಸ್‌ ಪರೀಕ್ಷೆಯ ಸಂದರ್ಶನದಲ್ಲಿ ನೀವು ಸೂಚಿಸುವ ಅಭ್ಯರ್ಥಿಗೆ ಉತ್ತಮ ಅಂಕಗಳನ್ನು ನೀಡುವುದಾಗಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ಗೆ ಭರವಸೆ ನೀಡಿದ್ದರು.

ಸಾಹುಕಾರ್‌ ಕೈಬರಹದ ನೋಟ್‌ ಬುಕ್‌:

ಶಿವಶಂಕರಪ್ಪ ಸಾಹುಕಾರ್‌ ನಿವಾಸದಲ್ಲಿ ನಡೆಸಿದ ಶೋಧದ ವೇಳೆ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಪರೀಕ್ಷಾ ಕೇಂದ್ರವಾರು ಬರೆದಿಟ್ಟಿದ್ದ ನೋಟ್‌ಬುಕ್‌ ವಶಕ್ಕೆ ಪಡೆಯಲಾಗಿದೆ. ಸ್ವತಃ ಶಿವಶಂಕರಪ್ಪ ಸಾಹುಕಾರ್‌ ಕೈಬರಹದಲ್ಲಿ ಇದನ್ನು ಬರೆಯಲಾಗಿದೆ. ಶಿವಶಂಕರಪ್ಪ ಸಾಹುಕಾರ್‌ ಓರ್ವ ಅಭ್ಯರ್ಥಿಗೆ ಖಚಿತವಾಗಿ ಹುದ್ದೆಗೆ ಆಯ್ಕೆ ಮಾಡುವ ಭರವಸೆ ನೀಡಿ 20 ಲಕ್ಷ ರು.ಗೆ ಡೀಲ್‌ ಕುದುರಿಸಿದ್ದರು. ಈ ಪೈಕಿ 10 ಲಕ್ಷ ರು. ನಗದು ಪಡೆದಿದ್ದರು. ಅಂತೆಯೇ ಬಿ.ವಿ.ಗೀತಾ ಮತ್ತೊಬ್ಬ ಅಭ್ಯರ್ಥಿಯೊಂದಿಗೆ 40 ಲಕ್ಷ ರು.ಗೆ ಡೀಲ್‌ ಕುದುರಿಸಿ, ಈ ಪೈಕಿ 20 ಲಕ್ಷ ರು. ನಗದು ರೂಪದಲ್ಲಿ ಪಡೆದಿದ್ದರು ಎಂಬುದು ಇ.ಡಿ.ತನಿಖೆಯಲ್ಲಿ ಬಯಲಾಗಿದೆ.

3ನೇ ವ್ಯಕ್ತಿಗಳ ಖಾತೆಗಳ ಮುಖಾಂತರ ಹಣ ಸ್ವೀಕಾರ:

ಅಭ್ಯರ್ಥಿಗಳಿಂದ ನಗದು ರೂಪದಲ್ಲಿ ಪಡೆದ ಈ ಹಣವನ್ನು ಬೀದರ್‌ನ ಭಾಲ್ಕಿಯ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮತ್ತು ಮೂರನೇ ವ್ಯಕ್ತಿಗಳ ಬ್ಯಾಂಕ್‌ ಖಾತೆಗಳ ಮುಖಾಂತರ ಸ್ವೀಕರಿಸಲಾಗಿದೆ. ಬಳಿಕ ನಕಲಿ ಉಳಿತಾಯ ಖಾತೆಗಳಲ್ಲಿ ನಮೂದಿಸುವ ಮುಖಾಂತರ ಈ ಹಣದ ಮೂಲ ಮುಚ್ಚಿಡಲಾಗಿತ್ತು. ಹೀಗೆ ಅಕ್ರಮವಾಗಿ ಬಂದ ಹಣದಲ್ಲಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ 3ನೇ ವ್ಯಕ್ತಿ ಹೆಸರಿನಲ್ಲಿ 52.30 ಲಕ್ಷ ರು. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಿದ್ದರು. ಅಂತೆಯೇ ಗಂಗ್ವಾರ್‌, ಅವರ ಕುಟುಂಬದ ಸದಸ್ಯರು, ಸ್ನೇಹಿತರ ವಿಮಾನ ಪ್ರಯಾಣದ ವೆಚ್ಚ 13.31 ಲಕ್ಷ ರು. ಮೂರನೇ ವ್ಯಕ್ತಿಯ ಬ್ಯಾಂಕ್‌ ಖಾತೆಗಳ ಮೂಲಕ ಬಸವರಾಜ ಕನ್ನಾಳೆ ಭರಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.