ಆನ್‌ಲೈನ್‌-ಆಫ್‌ಲೈನ್‌ ಬೆಟ್ಟಿಂಗ್ ವ್ಯವಹಾರ ಕೇಸ್‌ । ಇನ್ನೆರಡು ದಿನದಲ್ಲಿ ಶಾಸಕ ವೀರೇಂದ್ರ ಬಿಡುಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಆನ್‌ಲೈನ್‌-ಆಫ್‌ಲೈನ್‌ ಬೆಟ್ಟಿಂಗ್‌ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿ ಕೆ.ಸಿ.ವೀರೇಂದ್ರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಮಂಗಳವಾರ ಪ್ರಕಟಿಸಿದರು.

5 ಲಕ್ಷ ರು. ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ನೀಡಬೇಕು, ಪಾಸ್‌ಪೋರ್ಟ್‌ ನ್ಯಾಯಾಲಯದ ವಶಕ್ಕೆ ನೀಡಬೇಕು, ಇ.ಡಿ.ಅಧಿಕಾರಿಗಳ ತನಿಖೆಗೆ ಸಹಕರಿಸುವಂತೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. ಸುಮಾರು ನಾಲ್ಕು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಾಸಕ ವೀರೇಂದ್ರ ಅವರು ಜಾಮೀನು ಷರತ್ತುಗಳನ್ನು ಪೂರೈಸಿದ ಬಳಿಕ ಒಂದೆರಡು ದಿನಗಳಲ್ಲಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಪ್ರಕರಣದ ಹಿನ್ನೆಲೆ: ಆನ್‌ಲೈನ್‌-ಆಫ್‌ಲೈನ್‌ ಬೆಟ್ಟಿಂಗ್‌ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ. ಅಧಿಕಾರಿಗಳು ಕಳೆದ ಆ.22 ಮತ್ತು 23ರಂದು ಕೆ.ಸಿ.ವೀರೇಂದ್ರ, ಆತನ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿ ರಾಜ್ಯ ಹಾಗೂ ಹೊರರಾಜ್ಯಗಳ 31 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಆ.23ರಂದು ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ವೀರೇಂದ್ರ ಅವರನ್ನು ಬಂಧಿಸಿದ್ದರು.

ಶೋಧ ಕಾರ್ಯ ವೇಳೆ ಸುಮಾರು 12 ಕೋಟಿ ನಗದು, ಸುಮಾರು 6 ಕೋಟಿ ರು. ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿವಸ್ತುಗಳು, 1 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿ, ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದರು. ಕೋಟ್ಯಂತರ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅಂತೆಯೇ ವೀರೇಂದ್ರ ಅವರಿಗೆ ಸೇರಿದ 17 ಬ್ಯಾಂಕ್ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳನ್ನು ಫ್ರೀಜ್ ಮಾಡಿದ್ದರು.

ಮತ್ತೆ ಸೆ.2ರಂದು ವೀರೇಂದ್ರ ಹಾಗೂ ಇತರರಿಗೆ ಸೇರಿದ ಬೆಂಗಳೂರು ಮತ್ತು ಚಳ್ಳಕೆರೆಯ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿದ್ದರು. ಈ ವೇಳೆ ವೀರೇಂದ್ರ ಅವರ 9 ಬ್ಯಾಂಕ್ ಖಾತೆಗಳಲ್ಲಿನ ಸುಮಾರು 40.69 ಕೋಟಿ ರು. ಮತ್ತು 262 ನಕಲಿ ಖಾತೆಗಳಲ್ಲಿನ 14.46 ಕೋಟಿ ರು. ಸೇರಿ ಒಟ್ಟು 55 ಕೋಟಿ ರು. ಸ್ಥಗಿತಗೊಳಿಸಿ ಐದು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದರು.

ಸೆ.6ರಂದು ಮತ್ತೆ ಚಳ್ಳಕೆರೆಯಲ್ಲಿ ವೀರೇಂದ್ರ ಹಾಗೂ ಸಂಬಂಧಿಕರ ಮನೆ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿ ವೇಳೆ 24 ಕ್ಯಾರೆಟ್‌ನ 21.43 ಕೆ.ಜಿ. ಚಿನ್ನದ ಗಟ್ಟಿ, 10.985 ಕೆ.ಜಿ. ತೂಕದ ಚಿನ್ನ ಲೇಪಿತ 11 ಬೆಳ್ಳಿಗಟ್ಟಿಗಳು ಹಾಗೂ 1 ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿದ್ದರು. ಈ ಮೂಲಕ ಈವರೆಗೆ ಒಟ್ಟು ಸುಮಾರು 100 ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ತನಿಖೆ ನಡೆಸಿದ್ದ ಇ.ಡಿ.ಅಧಿಕಾರಿಗಳು, ಅ.18ರಂದು ವೀರೇಂದ್ರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ವೀರೇಂದ್ರ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಬಂಧನವನ್ನು ಎತ್ತಿ ಹಿಡಿದು ಅರ್ಜಿ ವಜಾಗೊಳಿಸಿತ್ತು. ಬಳಿಕ ಆರೋಪಿ ವೀರೇಂದ್ರ ಜಾಮೀನು ಕೋರಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.