ಪಟ್ಟಣದಲ್ಲಿ ಸರ್ಕಾರಿ ಬಸ್‌ ನಿಲ್ದಾಣದ ನಿರ್ಮಾಣಕ್ಕೆ 100ಕೋಟಿ ಅನುದಾನ ಕಲ್ಪಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರಲ್ಲಿ ಬೇಡಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಬಜೆಟ್ ನಲ್ಲಿ ಘೋಷಣೆಯಾಗುವ ಭರವಸೆ ಇದೆ ಎಂದು ಶಾಸಕ, ಡಿಸಿಸಿ ಬ್ಯಾಂಕ್‌ ನಿರ್ದೇಶಕ, ತುಮುಲ್‌ ಅಧ್ಯಕ್ಷ ಎಚ್‌. ವಿ. ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಪಟ್ಟಣದಲ್ಲಿ ಸರ್ಕಾರಿ ಬಸ್‌ ನಿಲ್ದಾಣದ ನಿರ್ಮಾಣಕ್ಕೆ 100ಕೋಟಿ ಅನುದಾನ ಕಲ್ಪಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರಲ್ಲಿ ಬೇಡಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಬಜೆಟ್ ನಲ್ಲಿ ಘೋಷಣೆಯಾಗುವ ಭರವಸೆ ಇದೆ ಎಂದು ಶಾಸಕ, ಡಿಸಿಸಿ ಬ್ಯಾಂಕ್‌ ನಿರ್ದೇಶಕ, ತುಮುಲ್‌ ಅಧ್ಯಕ್ಷ ಎಚ್‌. ವಿ. ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಸದಸ್ಯರು,ನೌಕರರ ಕಲ್ಯಾಣ ಟ್ರಸ್ಟ್ ಮತ್ತು ಪಶು ವೈದ್ಯಕೀಯ ಇಲಾಖೆ, ತಾಲೂಕು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಮತ್ತು ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ಪ್ರತಿ ಗ್ರಾಪಂ ವ್ಯಾಪ್ತಿಗೆ ಇಪ್ಪತೈದರಿಂದ ಮೂವತ್ತು ಹಸುಗಳನ್ನು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಗ್ರಾಮೀಣ ರೈತರಿಗೆ ಹಸು ವಿತರಿಸಲು ಉದ್ದೇಶಿಸಿದ್ದು, ಸದ್ಯ ತಾಲೂಕಿನ 45 ಸಾವಿರ ಲೀಟರ್ ಉತ್ಪಾದನೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ 75 ಸಾವಿರ ಲೀಟರ್ ಹಾಲು ಉತ್ಪಾದನೆಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು. ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ 33 ಕೋಟಿ ವೆಚ್ಚದಲ್ಲಿ ಕಾರ್ಮಿಕ ವಸತಿ ಶಾಲೆ ಪ್ರಾರಂಭಿಸಲಿದ್ದು, ಇಲ್ಲಿನ ಪಟ್ಟಣದಲ್ಲಿ ಪ್ರತ್ಯೇಕ ರಸ್ತೆ ಇರಲಿಲ್ಲ. ರಿಂಗ್ ರೋಡ್ ರಸ್ತೆ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ರೈತರ ನೀರಾವರಿ ಪ್ರಗತಿಗೆ ಇನ್ನೆರಡು ವರ್ಷಗಳ ಒಳಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿನ ಕರೆಗಳಿಗೆ ನೀರು ಸಹ ಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ತುಮುಲ್ ವತಿಯಿಂದ ಸಿಗುವ ಸೌಲಭ್ಯಗಳ ಜತೆಗೆ ವಿಎಸ್ಎಸ್ಎನ್ ಸಂಘದಿಂದ ಸಾಲ ಸೌಲಭ್ಯ ನೀಡಿ. ಗ್ರಾಮೀಣ ಭಾಗದಲ್ಲಿ ಜಮೀನು ಹೊಂದಿರುವ ರೈತರಿಗೆ ಕೊಳವೆ ಬಾವಿ ಕೊರೆಯಿಸಿಕೊಡಿ ಎಂದರು.

ತುಮುಲ್ ನಿರ್ದೇಶಕ ಬೆಳಿಬಟ್ಟಲು ಚಂದ್ರಶೇಖರ್ ರೆಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕಿನಿಂದ 1ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಲಾಗಿದೆ. ಖಾಸಗಿ ಡೈರಿಗಳಿಂದ ಮೋಸ ಹೋಗದಂತೆ ತಡೆಯಬೇಕು.ಈ ನಿಟ್ಟಿನಲ್ಲಿ ಡೈರಿ ಕಾರ್ಯದರ್ಶಿಗಳಿಗೆ ಗ್ರಾಮೀಣ ಜನತೆಗೆ ಮನವರಿಕೆ ಮಾಡುವಂತೆ ಸಲಹೆ ನೀಡಿದರು.

ತುಮುಲ್ ತಿಪಟೂರು ನಿರ್ದೇಶಕ ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಿಶ್ರತಳಿ ಪ್ರದರ್ಶನ ಸ್ಪರ್ಧೆಯಲ್ಲಿ 120 ಕರುಗಳು ಭಾಗವಹಿಸಿದ್ದು. ಸ್ಪರ್ಧೆಯಲ್ಲಿ ರಂಗನಾಥ ಕಿಲಾರ್ಲಹಳ್ಳಿ, ಮಾರುತಿ ಮಂಗಳವಾಡ, ವಿನೋದ್ ಕುಮಾರ್ ಬೆಳ್ಳಿಬಟ್ಲು ರವರಿಗೆ ಮೊದಲ ಬಹುಮಾನ ಮತ್ತು ನರಸಿಂಹಯ್ಯ,ಸುರೇಶ್, ಹೇಮಂತ್ ಕುಮಾರ್, ದ್ವಿತೀಯ ಹಾಗೂ ನಾಗೇಂದ್ರ, ಉದ್ದಣ್ಣ, ಮಲ್ಲಿಕಾರ್ಜುನ ರವರಿಗೆ ತೃತೀಯ ಬಹುಮಾನ ವಿತರಿಸಲಾಯಿತು.

ಈ ವೇಳೆ ತುಮುಲ್ ಎಂ.ಡಿ ಶ್ರೀನಿವಾಸ್, ತುಮುಲ್ ನಿರ್ದೇಶಕ ಮಧುಗಿರಿ ನಾಗೇಶ್ ಬಾಬು, ಚಿಕ್ಕನಾಯಕನಹಳ್ಳಿ ಶಿವಪ್ರಕಾಶ್, ವ್ಯವಸ್ಥಾಪಕ ಶ್ರೀನಿವಾಸ್, ಡಿಸಿಸಿ ನಿರ್ದೇಶಕ ಮೂರ್ತಿ, ಪುರಸಭೆ ಮಾಜಿ ಸದಸ್ಯರಾದ ತೆಂಗಿನಕಾಯಿ ರವಿ, ಹನುಮಂತರಾಯಪ್ಪ,ಕಾಂಗ್ರೆಸ್ ಮುಖಂಡರಾದ ಎನ್.ಆರ್.ಅಶ್ವಥ್, ವಿಸ್ತೀರ್ಣ ಧಿಕಾರಿ ಸುನಿತಮ್ಮ ಹಾಗೂ ಇತರೆ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.