ಹಾಲು ಉತ್ಪಾದನಾ ಹಾಗೂ ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಹಾಲಿನ ದರವನ್ನು 4ರಿಂದ 5 ರು. ಹೆಚ್ಚಿಸುವುದು ಬಹುತೇಕ ಖಚಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಸರ್ಕಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಕೆಎಂಎಫ್‌ ಮೂಲಗಳು ಮಾಹಿತಿ ನೀಡಿವೆ.

 ಬೆಂಗಳೂರು : ಹಾಲು ಉತ್ಪಾದನಾ ಹಾಗೂ ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಹಾಲಿನ ದರವನ್ನು 4ರಿಂದ 5 ರು. ಹೆಚ್ಚಿಸುವುದು ಬಹುತೇಕ ಖಚಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಸರ್ಕಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಕೆಎಂಎಫ್‌ ಮೂಲಗಳು ಮಾಹಿತಿ ನೀಡಿವೆ.

ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಬೇಡಿಕೆಗೆ ಮಣಿದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಾಲಿನ ದರ ಹೆಚ್ಚಿಸಲು ಮೌಖಿಕ ಸಮ್ಮತಿ ನೀಡಿದ್ದು, ಈ ಸಂಬಂಧ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಶುಕ್ರವಾರ ಕೆಎಂಎಫ್‌ ಸರ್ವ ಸದಸ್ಯರ ಸಭೆ ನಡೆಯಲಿದೆ. ನಂತರ ಸಿಎಂ ರಾಜ್ಯದ ಎಲ್ಲ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆಯಲಿದ್ದು, ಹಾಲಿನ ದರ ಏರಿಕೆ ಕುರಿತು ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 8 ರಿಂದ 10 ರು. ಮತ್ತು ಹೈನುಗಾರರಿಗೆ ನೀಡುವ ಪ್ರೋತ್ಸಾಹ ಧನವನ್ನು 8 ರು.ಗೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಪ್ರತಿನಿಧಿಗಳು ರೈತರು ಮಂಗಳವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಬರದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕು

ಬರದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕು. ಜೊತೆಗೆ ಗ್ರಾಹಕರಿಗೂ ಹೊರೆಯಾಗದಂತೆ ದರ ಹೆಚ್ಚಳ ಮಾಡಬೇಕಾಗಿದೆ. ಹಾಗಾಗಿ ಹಾಲು ಒಕ್ಕೂಟಗಳ ಬೇಡಿಕೆಯಂತೆ ಪ್ರತಿ ಲೀಟರ್‌ಗೆ 8 ರು.ದರ ಹೆಚ್ಚಳ ಮಾಡದೆ ಎಲ್ಲರಿಗೂ ಅನುಕೂಲವಾಗುವಂತೆ ಹಾಲಿನ ದರ ಪರಿಷ್ಕರಣೆ ಸಂಬಂಧ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಯವರು ಕೆಎಂಎಫ್‌ಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ 4ರು. ಹೆಚ್ಚಳ:

ರಾಜ್ಯದಲ್ಲಿ ನಂದಿನಿ ಹಾಲಿನ ಮಾರಾಟ ದರವನ್ನು ಕೊನೆಯ ಬಾರಿಗೆ 2025ರ ಏಪ್ರಿಲ್‌ನಲ್ಲಿ ಲೀಟರ್‌ಗೆ 4 ರು. ಹೆಚ್ಚಳ ಮಾಡಲಾಗಿತ್ತು. ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ 36 ರು. ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ ಲೀಟರ್‌ಗೆ 5 ರು. ಸೇರಿ ಒಟ್ಟು 41 ರು.ಗಳನ್ನು ರೈತರಿಗೆ ಕೊಡಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ದರ 46 ರು. ಇದ್ದು, ಬೆಲೆ ಹೆಚ್ಚಳವಾದರೆ ಪರಿಷ್ಕೃತ ದರ ಲೀಟರ್‌ಗೆ 50 ಅಥವಾ 51 ರೂ. ಆಗಲಿದೆ. ದರ ಪರಿಷ್ಕರಣೆಗೆ ಅನುಗುಣವಾಗಿ ನಂದಿನಿ ಮೊಸರು, ಮಜ್ಜಿಗೆ ಸೇರಿ ಹಾಲಿನ ಉತ್ಪನ್ನಗಳ ಬೆಲೆಯೂ ಏರಿಕೆಯಾಗುವ ನಿರೀಕ್ಷೆ ಇದೆ.