ಭಾರತ ಜೋಡೋ ಸಂಘಕ್ಕೆ ನೋಂದಣಿ : ಸಿಎಂ

Published : Aug 10, 2026, 10:26 AM IST
Bharat Jodo Sangha

ಸಾರಾಂಶ

ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್‌ಗಳಲ್ಲಿ ಉದ್ದೇಶಿತ ಒಟ್ಟು 10,000 ಭಾರತ್ ಜೋಡೋ ಯುವ ಶಕ್ತಿ ಸಂಘ ಸ್ಥಾಪನೆಗೆ ಈ ತಿಂಗಳಿಂದಲೇ (ಆಗಸ್ಟ್‌) ನೋಂದಣಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು : ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್‌ಗಳಲ್ಲಿ ಉದ್ದೇಶಿತ ಒಟ್ಟು 10,000 ಭಾರತ್ ಜೋಡೋ ಯುವ ಶಕ್ತಿ ಸಂಘ ಸ್ಥಾಪನೆಗೆ ಈ ತಿಂಗಳಿಂದಲೇ (ಆಗಸ್ಟ್‌) ನೋಂದಣಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಕ್ವಿಟ್‌ ಇಂಡಿಯಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಭವಿಷ್ಯದ ಯುವ ನಾಯಕರನ್ನು ತಯಾರು ಮಾಡುವ ಉದ್ದೇಶದಿಂದ ಯುವಕರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಯುವಜನ ಹಾಗೂ ಕ್ರೀಡಾ ಇಲಾಖೆ ನೇತೃತ್ವದಲ್ಲಿ ಈ ಸಂಘ ಸ್ಥಾಪಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಸರಾಸರಿ 35-40 ಪಂಚಾಯ್ತಿಗಳಿರುತ್ತವೆ. ಪ್ರತಿ ಸಂಘಗಳಲ್ಲಿ 150ರಿಂದ 200 ಸದಸ್ಯರು ಇರುತ್ತಾರೆ. ಯುವಕರಲ್ಲಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಯಕತ್ವ ಬೆಳೆಸಲು, ಮಹಿಳೆಯರಿಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ₹1 ಸಾವಿರ ಕೋಟಿ ಅನುದಾನ ಮೀಸಲಿಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್‌ ಕಾರ್ಯಕರ್ತರು ಅಗತ್ಯ ಸಿದ್ಧತೆ ಮಾಡಿಕೊಂಡು ಯುವಕರನ್ನು ಸಂಘಗಳ ಸದಸ್ಯರಾಗುವಂತೆ ಮಾಡಬೇಕು. ₹10 ಗೌರವ ಧನ ನೀಡಿ ಸದಸ್ಯತ್ವ ಪಡೆಯಬಹುದು. 16-40 ವಯೋಮಾನದವರು ಸದಸ್ಯರಾಗಬಹುದು. ಈ ತಿಂಗಳು ನೋಂದಣಿ ಕಾರ್ಯಕ್ರಮ ಆರಂಭವಾಗಲಿದೆ. 2028ರಲ್ಲಿ ಈ ರಾಜ್ಯಕ್ಕೆ ಹಾಗೂ 2029ರಲ್ಲಿ ದೇಶಕ್ಕೆ ಹೊಸ ಸಂದೇಶ ನೀಡಬೇಕು ಎಂದು ಕರೆ ನೀಡಿದರು.

ಗ್ರಾಪಂ ಮಟ್ಟದಲ್ಲೂ ಗ್ಯಾರಂಟಿ ಸಮಿತಿ:

ನಾವು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಿ ನಮ್ಮ ಕಾರ್ಯಕರ್ತರನ್ನು ನೇಮಿಸಿದ್ದೆವು. ಈಗ ಪಂಚಾಯ್ತಿ ಮಟ್ಟದಲ್ಲಿ ಆರು ಜನರ ಸಮಿತಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು.

ಶೀಘ್ರವೇ 100 ಕಾಂಗ್ರೆಸ್‌ಕಚೇರಿಗೆ ರಾಗಾ ಶಂಕು:

ರಾಜ್ಯದ ವಿವಿಧ 100 ತಾಲೂಕುಗಳಲ್ಲಿ ಕಾಂಗ್ರೆಸ್‌ ಕಚೇರಿ ನಿರ್ಮಿಸಲು ತೀರ್ಮಾನಿಸಿದ್ದೇವೆ. ಸದ್ಯದಲ್ಲೇ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಇದೇ ವೇಳೆ ಮುಖ್ಯಮಂತ್ರಿ ಶಿವಕುಮಾರ್‌ ತಿಳಿಸಿದರು.

ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂದರ್ಭದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮಾಡಿದೆವು. ಅದರ ನೆನಪಿನಲ್ಲಿ ನಾವು 100 ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಪ್ರತಿ ತಾಲೂಕಿನಲ್ಲಿ ಜಾಗ ಪಡೆಯಲಾಗಿದೆ. ಆದರೆ, ನಾವು ಬಿಜೆಪಿಯವರಂತೆ ನೂರಾರು ಎಕರೆ ಪಡೆದಿಲ್ಲ ಎಂದರು.

100 ಕಾಂಗ್ರೆಸ್‌ ಕಚೇರಿಗಳ ಭೂಮಿ ಪೂಜೆ ವೇಳೆ ಪಕ್ಷಕ್ಕೆ ಸೇವೆ ಸಲ್ಲಿಸಿದ ನೂರು ಜನ ಹಿರಿಯ ನಾಯಕರನ್ನು (70 ವರ್ಷ ಮೇಲ್ಪಟ್ಟವರು) ಗುರುತಿಸಿ ಅವರಿಗೆ ಸನ್ಮಾನ ಮಾಡಬೇಕಿದೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಅಧಿಕಾರ ಸಿಕ್ಕಿಲ್ಲ. ನನ್ನಂತೆ, ಸಚಿವರುಗಳಂತೆ, ಸಿದ್ದರಾಮಯ್ಯನವರಂತೆ ಎಲ್ಲರೂ ಅದೃಷ್ಟಶಾಲಿಗಳಾಗಲು ಸಾಧ್ಯವಾಗಿಲ್ಲ. ಅನೇಕ ಕಾರ್ಯಕರ್ತರಿಗೆ ಸಣ್ಣ ಅಧಿಕಾರವನ್ನೂ ಕೊಡಲು ಆಗಿಲ್ಲ. ಹಾಗಾಗಿ ಅಂತಹ ನಾಯಕರು ಹಾಗೂ ಪಕ್ಷಕ್ಕೆ ಭೂಮಿ ದಾನ ಮಾಡಿರುವವರು, ಹಣ ಕೊಟ್ಟಿರುವವರಿಗೆ ಗೌರವ ಸಲ್ಲಿಸಲು ತೀರ್ಮಾನಿಸಿದ್ದೇವೆ. ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಕ್ವಿಟ್ ವೋಟ್ ಚೋರಿ ಚಳವಳಿ ಅಗತ್ಯ:

ದೇಶದಲ್ಲಿ ಮತಗಳ್ಳತನ ನಡೆಯುತ್ತಿದ್ದು, ಇದರ ವಿರುದ್ಧ ನಾವು ಕ್ವಿಟ್ ವೋಟ್ ಚೋರಿ ಚಳವಳಿ ಮಾಡಬೇಕಿದೆ. ರಾಜ್ಯದಲ್ಲೂ ಒಂದು ಕೋಟಿ ಮತದಾರರನ್ನು ಡಿಲೀಟ್ ಮಾಡಲು ಪ್ರಯತ್ನ ನಡೆಯುತ್ತಿದೆ. ಪ್ರತಿಯೊಬ್ಬರೂ ಹೋರಾಟ ಮಾಡಿ ಮತದಾನದ ಹಕ್ಕು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕ್ವಿಟ್ ಇಂಡಿಯಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಮತಚೋರಿ ನಡೆಯುತ್ತಿದೆ. ರಾಜ್ಯದಲ್ಲೂ ಒಂದು ಕೋಟಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಪ್ರಯತ್ನ ನಡೆದಿದೆ. ಮತದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ನಮ್ಮ ಮತದಾರರ ಹಕ್ಕು ಉಳಿಸಿಕೊಳ್ಳುವ ಕೆಲಸ ಮಾಡಬೇಕು, ಇದಕ್ಕಾಗಿ ನಮ್ಮ ಸರ್ಕಾರ ಮನೆಬಾಗಿಲಿಗೆ ಶಾಶ್ವತ ವಾಸಸ್ಥಳದ ದೃಢೀಕರಣ ಪತ್ರ ತಲುಪಿಸುವ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು, ಬಿಎಲ್‌ಎಗಳು ಅಗತ್ಯ ದಾಖಲೆಗಳನ್ನು ಮನೆಗಳಿಗೆ ತಲುಪಿಸಿ ಮತದಾನದ ಹಕ್ಕು ಉಳಿಸುವ ಕೆಲಸ ಮಾಡಬೇಕು. ಇದರಿಂದ ರಾಹುಲ್‌ ಗಾಂಧಿ ಅವರನ್ನು ದೇಶದ ಪ್ರಧಾನಮಂತ್ರಿಯಾಗಿಸಲು ಪೂರಕ ಹೆಜ್ಜೆಯಾಗಲಿದೆ ಎಂದರು.

ಮತದಾನದ ಹಕ್ಕು ಇಲ್ಲದವರಿಗೆ ಮುಂದೆ ಗ್ಯಾರಂಟಿ ಯೋಜನೆಗಳು ಸೇರಿ ಸರ್ಕಾರದ ಯೋಜನೆಗಳು ಲಭ್ಯವಾಗುವುದು ಕಷ್ಟವಾಗುತ್ತದೆ. ಬಿಹಾರದಲ್ಲಿ ಈಗಾಗಲೇ ಮತದಾನದ ಹಕ್ಕು ಇರುವವರಿಗೆ ಮಾತ್ರ ಸರ್ಕಾರಿ ಯೋಜನೆ ನೀಡಲಾಗುತ್ತಿದೆ ಎಂದು ಎಚ್ಚರಿಸಿದರು.

18 ವರ್ಷ ತುಂಬಿರುವ ಯುವಕರಿಗೆ ಫಾರಂ 6 ಮೂಲಕ ಮತದಾನದ ಹಕ್ಕು ಪಡೆಯಲು ಮುಂದಾಗಿ. ಮತದಾನದ ಹಕ್ಕಿಲ್ಲ ಎಂದರೆ ನಿಮಗೆ ಧ್ವನಿ ಇರುವುದಿಲ್ಲ. ಕಾಂಗ್ರೆಸ್‌ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದಾಗ ಎಲ್ಲ ವಿರೋಧ ಪಕ್ಷದವರು ವಿರೋಧಿಸಿದರು. ಆದರೆ ರಾಜೀವ್ ಗಾಂಧಿ ಅವರು 10ನೇ ತರಗತಿ ಪಾಸಾದ ವಿದ್ಯಾರ್ಥಿಗೆ ದೇಶ ಕಾಯುವ ಜವಾಬ್ದಾರಿ ನೀಡುತ್ತಿರುವಾಗ ಮತದಾನದ ಹಕ್ಕು ಯಾಕೆ ನೀಡಬಾರದು ಎಂದು ಪ್ರಶ್ನಿಸಿದ್ದರು ಎಂದು ತಿಳಿಸಿದರು.

ಸರ್ವಾಧಿಕಾರಿ ಮನಸ್ಥಿತಿ:

ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯ ಮೊಳಗಿತ್ತು, ಇಂದು ‘ಸರ್ವಾಧಿಕಾರಿ ಮನಸ್ಥಿತಿ ಅಧಿಕಾರ ಬಿಟ್ಟು ತೊಲಗಿ’ ಎಂದು ಘೋಷವಾಕ್ಯ ಕೂಗಬೇಕಿದೆ. ಅಂದು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು, ಇಂದು ‘ಪ್ರತಿಭಟನೆ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಹೇಳಬೇಕಾಗಿದೆ ಎಂದು ಶಿವಕುಮಾರ್‌ ಪರೋಕ್ಷವಾಗಿ ಕೇಂದ್ರದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಎಂದಿಗೂ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಮ್ಮ ಗುರಿ 2028 ಹಾಗೂ 2029 ಆಗಿದೆ. ಕಾಂಗ್ರೆಸ್ ಮುಕ್ತ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಹೀಗಾಗಿ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎಂದರು.

ಇಂದು ಗಾಂಧೀಜಿ ಅವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಸಂಕಲ್ಪ ಮಾಡಿದ ದಿನ. ನೆಹರು, ಸರ್ದಾರ್ ಪಟೇಲ್, ಮೌಲಾನ ಅಬುಲ್ ಕಲಾಂ ಸೇರಿ ಎಲ್ಲಾ ನಾಯಕರು ಈ ಚಳವಳಿಯಲ್ಲಿ ಹೆಜ್ಜೆ ಹಾಕಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಕಾರ್ಯಾಧ್ಯಕ್ಷ ಮಂಜುನಾಥ್‌ ಭಂಡಾರಿ, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ರಾಣಿ ಸತೀಶ್‌, ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಎಲ್‌.ಹನುಮಂತಯ್ಯ ಉಪಸ್ಥಿತರಿದ್ದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಈ ಕೈ ಅಧಿಕಾರದಲ್ಲಿದ್ದ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಕಾರ್ಯಕ್ರಮ ಇಂದು ದೇಶದ ಕಾರ್ಯಕ್ರಮವಾಗಿದೆ.

-ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದಿಢೀರ್‌ ಪದತ್ಯಾಗ ರಹಸ್ಯದ ಬಗ್ಗೆ ಗೌರ್‍ನರ್‌ಗೆ ಹೊರಟ್ಟಿ ಪತ್ರ
ಕೋರ್ಟ್‌ ಆದೇಶ ಮೀರಿದ ಸಚಿವ ನಾಗೇಂದ್ರ ಕೈಬಿಡಿ- ದೆಹಲಿ ಭೇಟಿ ನ್ಯಾಯಾಂಗ ನಿಂದನೆ