ನವದೆಹಲಿ : ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಭಾನಗಡಿ ಆಗಿದೆ. ಮತಗಳ್ಳತನ ಕುರಿತ ಸಾಕ್ಷ್ಯ ಹೇಳುವ ‘ಆಟಂ ಬಾಂಬ್’ ನನ್ನ ಬಳಿ ಇದೆ’ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದೀಗ ದೇಶದಲ್ಲಿ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತುಹೋಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ‘ಕರ್ನಾಟಕದ ಕ್ಷೇತ್ರವೊಂದರಲ್ಲಿ 1.5 ಲಕ್ಷ ಮತ ನಕಲಿ ಆಗಿದ್ದವು. 2024ರಲ್ಲಿ ದೇಶದ 70ರಿಂದ 100 ಲೋಕಸಭೆ ಕ್ಷೇತ್ರಗಳಲ್ಲಿ ರಿಗ್ಗಿಂಗ್ ನಡೆದಿರುವ ಶಂಕೆ ಇದೆ. ಒಂದು ವೇಳೆ ನೈಜ ಚುನಾವಣೆ ನಡೆಸಿದ್ದರೆ ನರೇಂದ್ರ ಮೋದಿ ಪ್ರಧಾನಿಯೇ ಆಗುತ್ತಿರಲಿಲ್ಲ’ ಎಂದು ಹೊಸ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ‘ಸಂವಿಧಾನಾತ್ಮಕ ಸವಾಲುಗಳು: ದೃಷ್ಟಿಕೋನಗಳು ಮತ್ತು ಮಾರ್ಗಗಳು’ ಕುರಿತ ಕಾನೂನು ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವು ಸ್ಫೋಟಕ ಹೇಳಿಕೆ ನೀಡಿದರು.
‘ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾರರ ಹೆಸರು ಮತ್ತು ಪಟ್ಟಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಖುದ್ದಾಗಿ ಪರಿಶೀಲಿಸಿದ್ದಾರೆ. 6.5 ಲಕ್ಷ ವೋಟುಗಳಲ್ಲಿ 1.5 ಲಕ್ಷ ವೋಟುಗಳು ನಕಲಿ ಎಂಬುದು ಆಗ ಪತ್ತೆಯಾಗಿದೆ. ನಾವು ಈ ಕುರಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ ಬಳಿಕ ಇಡೀ ಚುನಾವಣಾ ವ್ಯವಸ್ಥೆಯಲ್ಲಿ ಆಘಾತ ಸೃಷ್ಟಿಸಲಿದೆ. ಇದು ಒಂದು ರೀತಿಯಲ್ಲಿ ಚುನಾವಣಾ ವ್ಯವಸ್ಥೆಯ ಪಾಲಿನ ‘ಆಟಂ ಬಾಂಬ್’ ಆಗಿದೆ’ ಎಂದು ಕಾಂಗ್ರೆಸ್ ಮುಖಂಡ ಹೇಳಿದರು.
ಆದರೆ ಅವರು ಯಾವ ಕ್ಷೇತ್ರ ಎಂಬುದನ್ನು ಹೇಳಲಿಲ್ಲ. ಈ ಹಿಂದೆ ಮಹದೇವಪುರ ಕ್ಷೇತ್ರಗಳಲ್ಲಿ ಮತ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಆ.5ರಂದು ಬೆಂಗಳೂರಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಜಾಜಿನಗರ ಹಾಗೂ ಗಾಂಧಿನಗರದಲ್ಲೂ ಅಕ್ರಮ ನಡೆದಿದ್ದವು ಎಂಬ ಆರೋಪ ಕೇಳಿಬಂದಿವೆ. ಅದರ ನಡುವೆಯೇ ರಾಹುಲ್‌ರ ಈ ಹೇಳಿಕೆ ಬಂದಿದೆ.
ಸದ್ಯದಲ್ಲೇ ಸಾಬೀತು ಮಾಡುವೆ:
‘2024ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಅಕ್ರಮ ನಡೆಸಬಹುದು ಮತ್ತು ಈಗಾಗಲೇ ಹೇಗೆ ಅಕ್ರಮ ಆಗಿದೆ ಎಂಬುದನ್ನು ನಾವು ಸದ್ಯದಲ್ಲೇ ಸಾಬೀತು ಮಾಡಲಿದ್ದೇವೆ. ಈಗ ಈ ಅಕ್ರಮದ ಕುರಿತು ಏಕೆ ಮಾತನಾಡುತ್ತಿದ್ದೇನೆಂದರೆ ನನ್ನ ಬಳಿ ಅದಕ್ಕೆ ಶೇ.100 ಸಾಕ್ಷ್ಯ ಇದೆ. ನಾನು ಯಾರಿಗೆಲ್ಲ ಈ ಸಾಕ್ಷ್ಯಗಳನ್ನು ತೋರಿಸಿದ್ದೇನೋ ಅವರೆಲ್ಲ ಹೌಹಾರಿದ್ದಾರೆ. ನಾವು ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದ ಬಳಿಕ ಚುನಾವಣಾ ವ್ಯವಸ್ಥೆಯಲ್ಲಿ ಆಘಾತದ ತಲ್ಲಣ ಸೃಷ್ಟಿಯಾಗಲಿದೆ‘ ಎಂದರು.
ಅಕ್ರಮ ಶಂಕೆ:
‘ಚುನಾವಣಾ ವ್ಯವಸ್ಥೆಯಲ್ಲಿನ ದೋಷಗಳ ಕುರಿತು ನನಗೆ ಹಿಂದಿನಿಂದಲೂ ಅನುಮಾನ ಇತ್ತು. 2014ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಬಹುಮತದ ಗೆಲುವಿನ ಬಗ್ಗೆ ಶಂಕೆ ಮೂಡಿತ್ತು. ಕಾಂಗ್ರೆಸ್‌ಗೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಒಂದೇ ಒಂದು ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ಅಚ್ಚರಿಯಾಗಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ದಾಖಲೆಗಳ ಪರಿಶೀಲನೆ ಕಾರ್ಯ ಆರಂಭಿಸಿತು. ಇದು ನಂತರ ಮುಂದಿನ 6 ತಿಂಗಳಲ್ಲಿ ಸ್ವತಂತ್ರ ತನಿಖೆಗೆ ಅನುವು ಮಾಡಿಕೊಟ್ಟಿತು’ ಎಂದರು.
ರಾಹುಲ್ ಆರೋಪಸುಳ್ಳು: ಆಯೋಗ
ನವದೆಹಲಿ; ‘ಚುನಾವಣಾ ಆಯೋಗ ಅಕ್ರಮ ನಡೆಸಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪದೇ ಪದೇ ಮಾಡುತ್ತಿರುವ ಆರೋಪಗಳು ನಿರಾಧಾರದಿಂದ ಕೂಡಿವೆ. ಯಾವುದೇ ಚುನಾವಣೆಗಳಲ್ಲಿ ಅಕ್ರಮ ನಡೆದಿಲ್ಲ’ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ. ‘ರಾಹುಲ್ ಈ ಹಿಂದೆ ಪತ್ರಿಕಾ ಲೇಖನ ಬರೆದು ಅಕ್ರಮದ ಆರೋಪ ಮಾಡಿದ್ದರು. ಅದಕ್ಕೆ 2 ತಿಂಗಳ ಹಿಂದೆ ಜೂ.12ಕ್ಕೆ ಅವರಿಗೆ ಪತ್ರ ಬರೆದು ಚರ್ಚೆಗೆ ಆಹ್ವಾನಿಸಲಾಗಿತ್ತು. ಆ ಪತ್ರಕ್ಕೆ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ ಪದೇ ಪದೇ ಅವರು ಮಿಥ್ಯಾರೋಪ ಮಾಡುವುದು ಸರಿಯಲ್ಲ’ ಎಂದು ಅವು ಹೇಳಿವೆ.