ಡಿಕೆಸು, ಗೀತಾ ಸೇರಿ ರಾಜ್ಯದ 7 ಮಂದಿಗೆ ಕಾಂಗ್ರೆಸ್‌ ಟಿಕೆಟ್‌

KannadaprabhaNewsNetwork | Updated : Mar 09 2024, 08:21 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ತನ್ನ ಸಿದ್ಧತೆ ಚುರುಕುಗೊಳಿಸಿರುವ ಕಾಂಗ್ರೆಸ್, ಕರ್ನಾಟಕದ 7 ಸೇರಿದಂತೆ 8 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ 39 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ತನ್ನ ಸಿದ್ಧತೆ ಚುರುಕುಗೊಳಿಸಿರುವ ಕಾಂಗ್ರೆಸ್, ಕರ್ನಾಟಕದ 7 ಸೇರಿದಂತೆ 8 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ 39 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. 

ಮೊದಲ ಪಟ್ಟಿಯಲ್ಲಿ ಹಾಲಿ ಸಂಸದ ಡಿ.ಕೆ.ಸುರೇಶ್‌, ಗೀತಾ ಶಿವರಾಜಕುಮಾರ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ಶಶಿತರೂರ್‌, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಸೇರಿದಂತೆ ಹಲವು ಪ್ರಮುಖರು ಸ್ಥಾನ ಪಡೆದುಕೊಂಡಿದ್ದಾರೆ.

ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ, ಗುರುವಾರ ಮತ್ತು ಶುಕ್ರವಾರ ಇಲ್ಲಿ ಸಭೆ ಸೇರಿದ್ದ ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿ 39 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 

ಅವಕಾಶ ಪಡೆದವರಲ್ಲಿ 15 ಸಾಮಾನ್ಯ ವರ್ಗ, 24 ಜನರು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ವೇಣುಗೋಪಾಲ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಪಟ್ಟಿ: ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಕೇರಳದ 16, ಕರ್ನಾಟಕದ 7, ಛತ್ತೀಸ್‌ಗಢದ 6, ತೆಲಂಗಾಣದ 4, ಮೇಘಾಲಯದ 2, ನಾಗಾಲ್ಯಾಂಡ್‌, ಸಿಕ್ಕಿಂ, ತ್ರಿಪುರಾದ ತಲಾ 1 ಮತ್ತು ಲಕ್ಷದ್ವೀಪದ 1 ಸ್ಥಾನಗಳು ಸೇರಿವೆ.

ರಾಹುಲ್‌ ಗಾಂಧಿ:ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳದ ವಯನಾಡು ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ರಾಹುಲ್‌ ವಯನಾಡಿನಲ್ಲಿ ಗೆದ್ದು, ಉತ್ತರಪ್ರದೇಶದ ಅಮೇಠಿಯಲ್ಲಿ ಸೋತಿದ್ದರು. 

ಆದರೆ ಈ ಬಾರಿ ಇಂಡಿಯಾ ಮೈತ್ರಿಕೂಟದ ಸಿಪಿಎಂ ವಯನಾಡಿನಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿಸುವ ಘೋಷಣೆ ಮಾಡಿದ್ದ ಕಾರಣ ರಾಹುಲ್‌ ಸ್ಪರ್ಧೆ ಬಗ್ಗೆ ಅನುಮಾನಗಳಿತ್ತು. 

ಆದರೆ ಸಿಪಿಎಂನ ಘೋಷಣೆ ಹೊರತಾಗಿಯೂ ರಾಹುಲ್‌ ವಯನಾಡಿನಿಂದ ಕಣಕ್ಕೆ ಇಳಿಯಲು ನಿರ್ಧರಿಸದ್ದಾರೆ.ಉಳಿದಂತೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ರಾಜ್‌ನಂದಗಾಂವ್‌ನಿಂದ, ಹಾಲಿ ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್‌ ಕೇರಳದ ಆಲಪ್ಪುಳದಿಂದ, ಶಶಿತರೂರ್‌ ತಿರುವನಂತಪುರದಿಂದ, ರಮ್ಯಾ ಹರಿದಾಸ್‌ ಅಲತ್ತೂರು, ಕೆ. ಮುರಳೀಧರನ್‌ ತಿಶ್ಯೂರು, ಕೆ.ಸುಧಾಕರನ್‌ ಕಾಸರಗೋಡು, ಹೈಬಿ ಈಡೆನ್‌ ಎರ್ನಾಕುಲಂದಿಂದ ಟಿಕೆಟ್‌ ಪಡೆದಿದ್ದಾರೆ.

7 ಸ್ಥಾನ ಅಂತಿಮ: ಕರ್ನಾಟಕದ ವಿಜಯಪುರದಿಂದ ಎಚ್‌.ಆರ್‌. ಅಗಲೂರು (ರಾಜು), ಹಾವೇರಿಯಿಂದ ಆನಂದಸ್ವಾಮಿ ಗಡ್ಡದೇವರ ಮಠ, ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್‌, ಹಾಸನದಿಂದ ಶ್ರೇಯಸ್‌ ಪಟೇಲ್‌, ತುಮಕೂರಿನಿಂದ ಎಸ್‌.ಪಿ. ಮುದ್ದಹನುಮೇಗೌಡ, ಮಂಡ್ಯದಿಂದ ವೆಂಕಟರಮಣಗೌಡ ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್‌ ಸ್ಥಾನ ಪಡೆದಿದ್ದಾರೆ.

Share this article