ಚಿಂತಾಮಣಿ: ದೇಶವನ್ನು ರಕ್ಷಣೆ ಮಾಡುವ ನೆಪದಲ್ಲಿ ಈ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ‘ನ್ಯಾಯಕ್ಕಾಗಿ ಹೋರಾಟ’ ಹೆಸರಿನಲ್ಲಿ ಅನ್ಯಾಯದ ಪರವಾಗಿ ಪಾದಯಾತ್ರೆ ಆರಂಭಿಸಿದ್ದಾರೆಂದು ಸಂಸದ ಎಸ್ ಮುನಿಸ್ವಾಮಿ ಲೇವಡಿ ಮಾಡಿದರು.
ನಗರದ ಕನ್ನಂಪಲ್ಲಿಯ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ದೇವಾಲಯ ಸ್ವಚ್ಛತಾ ಅಭಿಯಾನದ ಅಂಗವಾಗಿ ದೇವಾಲಯದ ಆವರಣ ಮತ್ತು ಗರ್ಭಗುಡಿಯ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿ ಅವರು ಮಾತನಾಡಿದರು.
ನೆರೆ ರಾಷ್ಟ್ರಗಳಿಗೆ ಭಾರತದ ಭೂಮಿ: ಪಾಕಿಸ್ತಾನಕ್ಕೆ ಸ್ವಲ್ಪ, ಚೈನಾಗೆ ಸ್ವಲ್ಪ, ಆಫ್ಘಾನಿಸ್ತಾನ ದೇಶಕ್ಕೆ ಸ್ವಲ್ಪ ನಮ್ಮ ದೇಶದ ನೆಲವನ್ನು ಬಿಟ್ಟುಕೊಟ್ಟಿದ್ದು ರಾಹುಲ್ ಗಾಂಧಿಯವರ ತಂದೆ ಅಜ್ಜಿ ತಾತನವರು ನಡೆಸಿದ ಆಡಳಿತದ ಕಾಲದಲ್ಲಿಯೇ ಆ ಕಾರಣದಿಂದಲೇ ನಮ್ಮ ಕುಟುಂಬ ೬೦ ವರ್ಷಗಳಿಂದ ಈ ದೇಶಕ್ಕೆ ಅನ್ಯಾಯ ಮಾಡಿಬಿಟ್ಟಿದೆಯೆಂದು ಪ್ರಾಯಶ್ಚಿತ್ತ ಮಾಡಿಕೊಳ್ಳಲು ರಾಹುಲ್ ಗಾಂಧಿ ಈಗ ನ್ಯಾಯಕ್ಕಾಗಿ ಹೋರಾಟದ ಹೆಸರಿನಲ್ಲಿ ಕ್ಷಮೆ ಕೇಳಲು ಜನರ ಬಳಿ ಹೊರಟಿದ್ದಾರೆಂದು ವ್ಯಂಗ್ಯವಾಡಿದರು.
ಅಯೋಧ್ಯೆಯ ರಾಮ ಮಂದಿರ ಟ್ರಸ್ಟಿನವರು ದೇಶದ ಎಲ್ಲಾ ಪ್ರಮುಖರಿಗೆ ಪ್ರತಿಷ್ಠಾಪನ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆಯೇ ಹೊರತು ಪ್ರಧಾನ ಮಂತ್ರಿ ನರೇಂದ್ರ ಮೋದಿಯಲ್ಲ.
ಕಾಂಗ್ರೆಸ್‌ಗೆ ರಾಮನ ಮೇಲೆ ನಂಬಿಕೆಯೇ ಇಲ್ಲ. ಆದರೂ ಇವರಿಗೆ ಆಹ್ವಾನವನ್ನು ನೀಡಿದ್ದರೂ ಸಹಾ ಅದನ್ನು ಐಎನ್‌ಡಿಐಎ ಒಕ್ಕೂಟದ ಸದಸ್ಯರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಹಿಂದೂ ವಿರೋಧಿ: ಇದು ಕಾಂಗ್ರೆಸ್‌ನವರ ಹಿಂದೂ ವಿರೋಧಿ ಧೋರಣೆಯನ್ನು ಸೂಚಿಸುತ್ತದೆ. ಪಾಪಗಳು ಜಾಸ್ತಿ ಮಾಡಿರುವುದರಿಂದ ಇವರೇ ಹೋಗುತ್ತಿಲ್ಲ. ಆ ಕಾರಣದಿಂದಲೇ ದೇವರೇ ಇವರು ಅಯೋಧ್ಯೆಗೆ ಬರುವುದು ಬೇಡ ಅಂತಲೇ ಇವರಿಗೆ ಬುದ್ದಿ ಕೊಟ್ಟಿಲ್ಲವೆಂದು ಜರೆದರು.
ಮುಸ್ಲಿಂ ಭಾಂದವರು ಸಹಾ ಮರ್ಯಾದ ಪುರುಷನ ಮಂದಿರ ಕಟ್ಟಲು ದೇಣಿಗೆ ಕೊಟ್ಟಿರುವುದಲ್ಲದೆ ಮುಸ್ಲಿಂ ಮಹಿಳೆಯರು ರಾಮನ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಿದ್ದಾರೆ. ಇಡೀ ದೇಶವೇ ರಾಮ ಪ್ರತಿಷ್ಠಾಪನೆಗಾಗಿ ಕಾಯುತ್ತಿದೆ ಎಂದರು.
ಸಿಎಂ ಅನುಭವಿಸಿದ ಕಷ್ಟ: ಬಿಜಿಪಿಯವರು ಯಾವಾಗಲೂ ದೇವರು ದೇವರು ಅಂತ ಇರ್ತಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನಾನು ಒಂದು ರುಪಾಯಿ ಕೊಡುವುದಿಲ್ಲ, ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡ ಅಂತ ರಾಮ ಹೇಳಿದ್ದಾನಾ, ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಹೇಳಿದ್ದವರು ಏನೇನು ಅನುಭವಿಸಿದರೆಂದು ಎಲ್ಲರಿಗೂ ಗೊತ್ತಿರುವ ವಿಚಾರ.
ತಮ್ಮ ಮಗನನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಹೊಸದಾಗಿ ರಾಮ ಜಪ ಮಾಡಲು ಶುರು ಮಾಡಿದ್ದು ಈಗ ನಾನೂ ಅಯೋಧ್ಯೆಗೆ ಹೋಗುತ್ತೇನೆಂದು ಅಸಂಖ್ಯಾತ ಹಿಂದೂಗಳಲ್ಲಿ ಸಿಂಪತಿ ಪಡೆಯಲು ಭೂತದ ಬಾಯಲ್ಲಿ ಏನೋ ಬಂತು ಎಂಬಂತೆ ಈ ರೀತಿ ಮಾತನಾಡುತ್ತಿದ್ದಾರೆಂದು ಜರಿದರು.
ದೇವರ ಆಶೀರ್ವಾದ ಬೇಕು: ಪ್ರಪಂಚ ಉಳಿಯಬೇಕಾದರೆ ಹಾಗೂ ನಾವುಗಳೆಲ್ಲರೂ ಅರೋಗ್ಯವಾಗಿರಬೇಕಾದರೆ ಕೂಡ ಭಗವಂತನ ಆಶೀರ್ವಾದ ಬೇಕು. ಆದರೆ ಕಾಂಗ್ರೆಸ್ ಪಕ್ಷದವರು ಅಯೋಧ್ಯೆ ಶ್ರೀರಾಮ ಪ್ರಭುವಿನ ಹೆಸರಿನಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆಂದರೆ ಆ ಪಕ್ಷದ ಅಂತ್ಯದ ಕಾಲ ಹತ್ತಿರವಾಗುತ್ತಿದೆಯೆಂದು ಭವಿಷ್ಯ ನುಡಿದರು.