ಜ। ನರವಣೆ ಆತ್ಮಚರಿತ್ರೆ ಬಗ್ಗೆ ರಾಹುಲ್‌ ವರ್ಸಸ್ ಪೆಂಗ್ವಿನ್‌

Published : Feb 11, 2026, 07:10 AM IST
rahul gandhi

ಸಾರಾಂಶ

 ಗಲ್ವಾನ್ ಸಂಘರ್ಷದ ವೇಳೆ ಮೋದಿ ಸರ್ಕಾರ ಅನುಸರಿಸಿದ ನೀತಿ  ಪ್ರಶ್ನಿಸಲಾಗಿದೆ ಎನ್ನಲಾದ ನಿವೃತ್ತ ಸೇನಾ ಮುಖ್ಯಸ್ಥ ಜ। ಎಂ.ಎಂ. ನರವಣೆ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

 ನವದೆಹಲಿ :  ಚೀನಾ ಜತೆಗಿನ 2020ರ ಗಲ್ವಾನ್ ಸಂಘರ್ಷದ ವೇಳೆ ಮೋದಿ ಸರ್ಕಾರ ಅನುಸರಿಸಿದ ನೀತಿಗಳನ್ನು ಪ್ರಶ್ನಿಸಲಾಗಿದೆ ಎನ್ನಲಾದ ನಿವೃತ್ತ ಸೇನಾ ಮುಖ್ಯಸ್ಥ ಜ। ಎಂ.ಎಂ. ನರವಣೆ ಅವರ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

‘ಪುಸ್ತಕ ಇನ್ನೂ ಪ್ರಕಟವಾಗಿಲ್ಲ. ಆನ್‌ಲೈನ್‌ನಲ್ಲಿ ಲಭ್ಯವಿರುವ ಪುಟಗಳು ಅನಧಿಕೃತ’ ಎಂದು ಪುಸ್ತಕದ ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಹೇಳಿದೆ. ಆದರೆ ಇದನ್ನು ಪ್ರಶ್ನಿಸಿರುವ ರಾಹುಲ್‌ ಗಾಂಧಿ, ನರವಣೆ ಅವರು 2023ರ ಡಿಸೆಂಬರ್‌ನಲ್ಲಿ ಮಾಡಿದ್ದ ‘ಪುಸ್ತಕ ಈಗ ಲಭ್ಯವಿದೆ. ಈ ಲಿಂಕ್‌ ಫಾಲೋ ಮಾಡಿ’ ಎಂಬ ಟ್ವೀಟ್‌ ಅನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಆಗಲೇ ಅಮೆಜಾನ್‌ನಲ್ಲಿ ಪುಸ್ತಕ ಲಭ್ಯವಿತ್ತು ಎಂದಿದ್ದಾರೆ.

ನರವಣೆ ಮಾತು ನಂಬುವೆ- ರಾಗಾ:

‘ನರವಣೆ ಅವರು ಮಾಡಿರುವ ಟ್ವೀಟ್ ಇದು. ನಾನು ಹೇಳುತ್ತಿರುವ ಅಂಶವೆಂದರೆ ಒಂದೋ ನರವಣೆ ಸುಳ್ಳು ಹೇಳುತ್ತಿದ್ದಾರೆ ಅಥವಾ ಪೆಂಗ್ವಿನ್‌ ಸಂಸ್ಥೆ ಸುಳ್ಳು ಹೇಳುತ್ತಿದೆ. ಆದರೆ ನಿವೃತ್ತ ಸೇನಾ ಮುಖ್ಯಸ್ಥರು ಸುಳ್ಳು ಹೇಳುತ್ತಾರೆ ಎಂದು ನಾನು ನಂಬುವುದಿಲ್ಲ. ನರವಣೆ ಅವರನ್ನು ನಂಬುತ್ತೇನೆ. ಅಮೆಜಾನ್‌ನಲ್ಲಿ ಪುಸ್ತಕ ಲಭ್ಯವಿದೆ’ ಎಂದು ರಾಹುಲ್‌ ಹೇಳಿದ್ದಾರೆ.

ಡಿಜಿಟಲ್ ಮತ್ತು ಇತರ ಸ್ವರೂಪಗಳಲ್ಲಿ ಪುಸ್ತಕದ ಪುಟಗಳು ಅಕ್ರಮವಾಗಿ ಪ್ರಕಟವಾಗುತ್ತಿವೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ಈ ವಾಗ್ಯುದ್ಧ ನಡೆದಿದೆ.

2023ರಲ್ಲಿ ಪ್ರಿ ಆರ್ಡರ್‌ ಘೋಷಿಸಲಾಗಿತ್ತು: ಪೆಂಗ್ವಿನ್‌

ನವದೆಹಲಿ: 2023ರ ಡಿಸೆಂಬರ್‌ನಲ್ಲಿ ಪುಸ್ತಕ ಲಭ್ಯವಿದೆ ಎಂದು ಜ। ನರವಣೆ ಟ್ವೀಟ್‌ ಮಾಡಿದ್ದರು ಎಂದು ರಾಹುಲ್‌ ಗಾಂಧಿ ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಪೆಂಗ್ವಿನ್‌, ‘ಅದು ಪ್ರಿ ಆರ್ಡರ್‌ ಘೋಷಣೆ ಆಗಿತ್ತು. ಪುಸ್ತಕ ಪ್ರಕಟಣೆಗೂ ಮುನ್ನವೇ ಅದರ ಪ್ರತಿಯನ್ನು ಪ್ರಿ ಬುಕ್ಕಿಂಗ್‌ ಮಾಡಬಹುದಾಗಿತ್ತು. ಪ್ರಿ ಆರ್ಡರ್‌ ಘೋಷಣೆಯು ಪುಸ್ತಕ ಪ್ರಕಟಿಸಿದಂತಲ್ಲ’ ಎಂದು ಹೇಳಿದೆ.

ನನ್ನ ಆತ್ಮಚರಿತ್ರೆ ಪ್ರಕಟವಾಗಿಲ್ಲ: ಜ। ನರವಣೆ

ನವದೆಹಲಿ: ತಮ್ಮ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಸುತ್ತ ಎದ್ದಿರುವ ವಿವಾದದ ಬಗ್ಗೆ ನಿವೃತ್ತ ಸೇನಾ ಮುಖ್ಯಸ್ಥ ಜ। ಎಂ.ಎಂ. ನರವಣೆ ಮೌನ ಮುರಿದಿದ್ದು, ‘ಪುಸ್ತಕ ಇನ್ನೂ ಪ್ರಕಟವಾಗಿಲ್ಲ’ ಎಂಬ ಪೆಂಗ್ವಿನ್‌ ಪ್ರಕಾಶನದ ಹೇಳಿಕೆಯನ್ನು ಅನುಮೋದಿಸಿದ್ದಾರೆ. ‘ಪುಸ್ತಕ ಪ್ರಕಟಣೆ ಆಗಿಲ್ಲ’ ಎಂಬ ಪೆಂಗ್ವಿನ್ ಟ್ವೀಟನ್ನು ರೀಟ್ವೀಟ್ ಮಾಡಿದ್ದಾರೆ. ಕಳೆದ ವರ್ಷವೇ ಸಂದರ್ಶನವೊಂದರಲ್ಲಿ ಜ। ನರವಣೆ, ‘ನನ್ನ ಪುಸ್ತಕಕ್ಕೆ ಇನ್ನೂ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ’ ಎಂದಿದ್ದರು.

ನನ್ನ ಆತ್ಮಚರಿತ್ರೆ ಪ್ರಕಟವಾಗಿಲ್ಲ: ಜ। ನರವಣೆ

ನವದೆಹಲಿ :  ಚೀನಾ ಜತೆಗಿನ ಗಲ್ವಾನ್ ಸಂಘರ್ಷದ ವೇಳೆ ಮೋದಿ ಸರ್ಕಾರ ಅನುಸರಿಸಿದ ನೀತಿಗಳನ್ನು ಪ್ರಶ್ನಿಸಲಾಗಿದೆ ಎನ್ನಲಾದ ತಮ್ಮ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಸುತ್ತ ಎದ್ದಿರುವ ವಿವಾದದ ಬಗ್ಗೆ ನಿವೃತ್ತ ಸೇನಾ ಮುಖ್ಯಸ್ಥ ಜ। ಎಂ.ಎಂ. ನರವಣೆ ಮೌನ ಮುರಿದಿದ್ದು, ‘ಪುಸ್ತಕ ಇನ್ನೂ ಪ್ರಕಟವಾಗಿಲ್ಲ’ ಎಂಬ ಪೆಂಗ್ವಿನ್‌ ಪ್ರಕಾಶನದ ಹೇಳಿಕೆಯನ್ನು ಅನುಮೋದಿಸಿದ್ದಾರೆ. ಈ ಮೂಲಕ ಪುಸ್ತಕದಲ್ಲಿ ಇವೆ ಎನ್ನಲಾದ ಅಂಶ ಪ್ರಸ್ತಾಪಿಸಿ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಿನ್ನಡೆ ಆಗಿದೆ.

ಇತ್ತೀಚೆಗೆ ಲೋಕಸಭೆಯಲ್ಲಿ ರಾಹುಲ್‌ ಈ ಪುಸ್ತಕದ ಬಗ್ಗೆ ಪ್ರಸ್ತಾಪಿಸಿ, ‘ಗಲ್ವಾನ್‌ ಸಂಘರ್ಷದ ವೇಳೆ ಮೋದಿ ಸರ್ಕಾರ ಚೀನಾಗೆ ತಲೆಬಾಗಿತ್ತು. ಇದಕ್ಕೆ ಜ। ನರವಣೆ ಪುಸ್ತಕವೇ ಸಾಕ್ಷಿ’ ಎಂದಿದ್ದರು. ಆದರೆ ‘ಪುಸ್ತಕ ಇನ್ನೂ ಪ್ರಕಟ ಆಗಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದಾದ ಬೆನ್ನಲ್ಲೇ ದಿಲ್ಲಿ ಪೊಲೀಸರು ‘ಅಪ್ರಕಟಿತ ಪುಸ್ತಕದ ಪಿಡಿಎಫ್‌ ಪುಟಗಳು ಎಂದು ಬಿಂಬಿಸಿ ಆನ್‌ಲೈನ್‌ನಲ್ಲಿ ಶೇರ್ ಮಾಡಲಾಗುತ್ತಿದೆ. ಇದು ಅಕ್ರಮ’ ಎಂದು ಎಫ್‌ಐಆರ್‌ ದಾಖಲಿಸಿದ್ದರು. ಪೆಂಗ್ವಿನ್ ಪ್ರಕಾಶನ ಸ್ಪಷ್ಟನೆ ನೀಡಿ, ‘ಪುಸ್ತಕ ಇನ್ನೂ ಪ್ರಕಟಣೆ ಆಗಿಲ್ಲ. ಅದನ್ನು ಡಿಜಿಟಲ್‌ ರೂಪದಲ್ಲೂ ಪ್ರಕಟಿಸಿಲ್ಲ. ವಿತರಿಸಿಲ್ಲ. ಮಾರಾಟ ಮಾಡಿಲ್ಲ’ ಎಂದಿತ್ತು.

ಆದರೆ ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ರಾಹುಲ್‌. ‘ಜ। ನರವಣೆ ಅವರು 2023ರ ಡಿಸೆಂಬರ್‌ನಲ್ಲಿ ‘ಪುಸ್ತಕ ಈಗ ಲಭ್ಯವಿದೆ. ಈ ಲಿಂಕ್‌ ಫಾಲೋ ಮಾಡಿ’ ಎಂದು ಟ್ವೀಟ್‌ ಮಾಡಿದ್ದರು. ಅಮೆಜಾನ್‌ನಲ್ಲಿ ಅದು ಲಭ್ಯವಿದೆ. ಆದರೂ ಪೆಂಗ್ವಿನ್ ಪ್ರಕಾಶನ ಪುಸ್ತಕ ಪ್ರಕಟಿಸಿಲ್ಲ ಎಂದಿದೆ. ಪೆಂಗ್ವಿನ್‌ ಮಾತಿಗಿಂತ ನಿವೃತ್ತ ಸೇನಾ ಮುಖ್ಯಸ್ಥರ ಮಾತು ನಾನು ನಂಬುತ್ತೇನೆ’ ಎಂದಿದ್ದರು. ಈ ಮೂಲಕ ಪುಸ್ತಕ ಪ್ರಕಟಣೆ ಆಗಿದೆ ಎಂಬರ್ಥದಲ್ಲಿ ಮಾತನಾಡಿದ್ದರು.

ಆದರೆ ಜ। ನರವಣೆ ಇದಕ್ಕೆ ಪ್ರತಿಕ್ರಿಯೆ ನೀಡಿ, ‘ಪುಸ್ತಕ ಪ್ರಕಟಣೆ ಆಗಿಲ್ಲ’ ಎಂಬ ಪೆಂಗ್ವಿನ್ ಟ್ವೀಟನ್ನು ರೀಟ್ವೀಟ್ ಮಾಡಿದ್ದಾರೆ ಹಾಗೂ ‘ಇದು ಪುಸ್ತಕದ ಸ್ಥಿತಿ’ ಎಂದು ಟಿಪ್ಪಣಿ ಬರೆದಿದ್ದಾರೆ. ಈ ಮೂಲಕ ಪುಸ್ತಕ ಪ್ರಕಟವಾಗಿಲ್ಲ ಎಂಬ ಪೆಂಗ್ವಿನ್ ಹೇಳಿಕೆ ಅನುಮೋದಿಸಿದ್ದಾರೆ.

ಕಳೆದ ವರ್ಷವೇ ಸಂದರ್ಶನವೊಂದರಲ್ಲಿ ಜ। ನರವಣೆ, ‘ನನ್ನ ಪುಸ್ತಕಕ್ಕೆ ಇನ್ನೂ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ’ ಎಂದಿದ್ದರು.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನನ್ನನ್ನು ಕರೆದಿಲ್ಲ, ನಾನು ದಿಲ್ಲಿಗೆ ಹೋಗಲ್ಲ : ಸಿಎಂ
ಸಿದ್ದರಾಮಯ್ಯ , ನಾನು ಕದ್ದು ಮುಚ್ಚಿ ಮಾತಾಡಿಲ್ಲ, ನಮ್ಮಲ್ಲಿ ಗೊಂದಲವೂ ಇಲ್ಲ : ಡಿಸಿಎಂ