ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದು ಕಾಕ್ರೋಚ್‌ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತರ ಜೊತೆಗೆ ಕೇಂದ್ರ ಸರ್ಕಾರ ಮೊದಲ ಬಾರಿಗೆ ಮಾತುಕತೆ ನಡೆಸಿದೆ.

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದು ಕಾಕ್ರೋಚ್‌ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತರ ಜೊತೆಗೆ ಕೇಂದ್ರ ಸರ್ಕಾರ ಮೊದಲ ಬಾರಿಗೆ ಮಾತುಕತೆ ನಡೆಸಿದೆ. ಸೋಮವಾರದ ಸಂಸತ್‌ ಚಲೋಗೂ ಮುನ್ನ ಕೆಜೆಪಿ ಪಕ್ಷದ ಇಬ್ಬರು ಸದಸ್ಯರು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಸಿಜೆಪಿ ವಕ್ತಾರರಾದ ಆಶುತೋಷ್‌ ರಾಂಕಾ ಮತ್ತು ಸೌರವ್‌ ದಾಸ್‌ 2 ಗಂಟೆಯಲ್ಲಿ 2 ಬಾರಿ ನಡ್ಡಾರನ್ನು ಭೇಟಿಯಾಗಿದ್ದರು. ಈ ವೇಳೆ ಪ್ರತಿಭಟನಾಕಾರರ 4 ಬೇಡಿಕೆಗಳನ್ನು ಅವರಿಗೆ ಲಿಖಿತ ರೂಪದಲ್ಲಿ ಸಲ್ಲಿಸಲಾಯಿತು. ಅದನ್ನು ಸ್ವೀಕರಿಸಿದ ನಡ್ಡಾ, ಸರ್ಕಾರ ಆಂತರಿಕೆ ಸಭೆ ನಡೆಸಿ ಅವುಗಳ ಬಗ್ಗೆ ಆಂತರಿಕ ಚರ್ಚೆ ನಡೆಸುವ ಭರವಸೆ ನೀಡಿದರು. ಜತೆಗೆ ಜಂತರ್‌ ಮಂತರ್‌ನಲ್ಲಿ ಜೂ.20ರಿಂದ ನಡೆಯುತ್ತಿರುವ ಧರಣಿಯನ್ನು ನಿಲ್ಲಿಸುವಂತೆಯೂ ಮನವಿ ಮಾಡಿದರು.

ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಸೌರವ್‌, ‘ಜಂತರ್‌ ಮಂತರ್‌ನಲ್ಲಿ ಪ್ರತಿಭಟನಾನಿರತದ ಮೇಲೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ನಡ್ಡಾ ಅವರು ಮಾತು ಕೊಟ್ಟಿದ್ದಾರೆ. ಎಲ್ಲಾ ಬೇಡಿಕೆಗಳು ಈಡೇರುವ ವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

3 ಬೇಡಿಕೆಗಳೇನು?

- ಸೋನಂ ವಾಂಗ್ಚುಕ್‌ ಬಿಡುಗಡೆ ಮಾಡಬೇಕು. ಅವರ ಮುಕ್ತ ಓಡಾಟಕ್ಕೆ ಅಡ್ಡಿ ಮಾಡಬಾರದು. ವಿಡಿಯೋ ಸಂದೇಶ ಹಂಚಿಕೊಳ್ಳಲು ಬಿಡಬೇಕು

- ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಹುದ್ದೆಯಿಂದ ಧರ್ಮೇಂದ್ರ ಪ್ರಧಾನ್‌ರನ್ನು ತಕ್ಷಣವೇ ವಜಾಗೊಳಿಸಬೇಕು

- ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪರಿವಾರಕ್ಕೆ ತಲಾ 1 ಕೋಟಿ ರು. ಪರಿಹಾರ ನೀಡಬೇಕು

ವಾಂಗ್ಚುಕ್‌ ಮನವಿ ಮೇರೆಗೆ ಉಪವಾಸ ಕೈಬಿಟ್ಟ ದೀಪ್ಕೆ

ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಸೋನಂ ವಾಂಗ್ಚುಕ್‌ ಹಾದಿಯಲ್ಲಿಯೇ ಕಳೆದ ಶನಿವಾರದಿಂದ ಉಪವಾಸ ನಡೆಸುತ್ತಿದ್ದ ಸಿಜೆಪಿಮುಖ್ಯಸ್ಥ ಅಭಿಜಿತ್ ದೀಪ್ಕೆ ಸೋಮವಾರ ತಮ್ಮ ನಿರಶನ ಪ್ರತಿಭಟನೆ ಕೈಬಿಟ್ಟಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಹೋರಾಟಗಾರ ವಾಂಗ್ಚುಕ್, ‘ಪ್ರತಿಭಟನೆ ನಡೆಸಲು ಇನ್ನೂ ಹೆಚ್ಚಿನ ಶಕ್ತಿ ಬೇಕು. ಹಾಗಾಗಿ ಉಪವಾಸ ಕೈಬಿಡಿ’ ಎಂದು ದೀಪ್ಕೆ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಅಭಿಜಿತ್ ಜಂತರ್‌ಮಂತರಿನಲ್ಲಿ ಪ್ರತಿಭಟನಾ ವೇದಿಕೆಯಲ್ಲಿಯೇ ಜ್ಯೂಸ್‌ ಕುಡಿದು ತಮ್ಮ ಉಪವಾಸ ಅಂತ್ಯಗೊಳಿಸಿದ್ದಾರೆ.

ವಾಂಗ್ಚುಕ್‌ ವೈದ್ಯಕೀಯ ವರದಿ ಕೇಳಿದ ದೆಹಲಿ ಹೈಕೋರ್ಟ್‌

ನವದೆಹಲಿ: ದೆಹಲಿಯ ಸಪ್ಧರ್‌ಜಂಗ್‌ ಆಸ್ಪತ್ರೆಯಲ್ಲಿರುವ ಹೋರಾಟಗಾರ ಸೋನಂ ವಾಂಗ್ಚುಕ್‌ ಅವರ ಸದ್ಯದ ಪರಿಸ್ಥಿತಿ ಹಾಗೂ ಹೆಲ್ತ್‌ ಬುಲೆಟಿನ್‌ ಮಾಹಿತಿ ನೀಡುವಂತೆ ದೆಹಲಿ ಹೈಕೋರ್ಟ್‌ ಆಸ್ಪತ್ರೆಗೆ ಸೂಚನೆ ನೀಡಿದೆ. ವಾಂಗ್ಚುಕ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸಲ್ಲಿಸಿದ್ದ ಅರ್ಜಿ ತಿರಸ್ಕಾರದ ವಿರುದ್ಧ ಆಂಗ್ಮೋ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆ ನೀಡಿದ್ದು, ಸೋಮವಾರದ ವರದಿಯೂ ಸೇರಿದಂತೆ ಎಲ್ಲಾ ವೈದ್ಯಕೀಯ ವರದಿಯೂ ನೀಡಬೇಕು ಎಂದಿದೆ. ಇದೇ ವೇಳೆ ನ್ಯಾಯಾಲಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರದ ಬಗ್ಗೆ ಮಂಗಳವಾರ ನಿರ್ಧರಿಸುವುದಾಗಿ ತಿಳಿಸಿದೆ.

ಬೇಡಿಕೆ ಈಡೇರುವವರೆಗೂ ಉಪವಾಸ ನಿಲ್ಸಲ್ಲ: ಸೋನಂ

ನವದೆಹಲಿ: ‘ಶಿಕ್ಷಣ ವ್ಯವಸ್ಥೆಯ ವೈಫಲ್ಯದ(ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ) ಹೊಣೆಯನ್ನು ಸರ್ಕಾರ ಹೊರಬೇಕು ಇಲ್ಲವೇ ಆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವುದಾಗಿ ರಾಜಕೀಯ ನಾಯಕರು ಭರವಸೆ ನೀಡಬೇಕು. ಅಲ್ಲಿಯವರೆಗೆ ನಿರಶನ ಹೋರಾಟ ಮುಂದುವರಿಸುತ್ತೇನೆ’ ಎಂದು ಹೋರಾಟಗಾರ ಸೋನಂ ವಾಂಗ್ಚುಕ್‌ ಅವರು ಹೇಳಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿರುವ ಸೋನಂ ಸಾಮಾಜಿಕ ಮಾಧ್ಯಮದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ, ‘ಶಿಕ್ಷಣ ವ್ಯವಸ್ಥೆಗಳಲ್ಲಾದ ವೈಫಲ್ಯಗಳ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಂಸದ್‌ ಚಲೋ ಪ್ರತಿಭಟನೆ ನಡೆಸುತ್ತಾ ಸಿಜೆಪಿ ನಾಯಕರೊಂದಿಗೆ ನಾನು ಸಂಸತ್ತಿನ ಬಾಗಿಲು ತಲುಪಿದಾಗ, ವಿವಿಧ ಪಕ್ಷಗಳ ಸಂಸದರು ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಮಾತು ಕೊಡಬೇಕು. ನನ್ನ ಆರೋಗ್ಯ ಸಹಕರಿಸದಿದ್ದರೆ ಅವರು ನಾನಿರುವಲ್ಲಿಗೆ ಬಂದು ಭರವಸೆ ನೀಡಬೇಕು. ಅಲ್ಲಿಯ ವರೆಗೆ ಅನ್ನಾಹಾರ ಮುಟ್ಟುವುದಿಲ್ಲ’ ಎಂದು ಬರೆದಿದ್ದಾರೆ. ಇದೇ ವೇಳೆ, ‘ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಯುವಕರೊಂದಿಗೆ ಪೊಲೀಸರು ವರ್ತಿಸುತ್ತಿರುವ ರೀತಿಯಿಂದ ಬೇಸರವಾಗಿದೆ’ ಎಂದೂ ಹೇಳಿದರು. ಜತೆಗೆ, ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ತಮ್ಮನ್ನು ಅಕ್ರಮವಾಗಿ ಬಂಧಿಸಿ ಇಡಲಾಗಿದೆ ಎಂದೂ ವಾಂಗ್ಚುಕ್‌ ಆರೋಪಿಸಿದರು.