ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಶಾಸಕತನವನ್ನು ನಿಭಾಯಿಸುವುದು ಹೇಗೆ ಎಂದೇ ಗೊತ್ತಿಲ್ಲ. ಶಾಸಕ ಸ್ಥಾನಕ್ಕೆ ಯೋಗ್ಯತೆಯೇ ಇಲ್ಲ ಎಂದು ಶಾಸಕ ಗಣೇಶ್ ಪ್ರಸಾದ್ ವಿರುದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಕಿಡಿಕಾರಿದರು.ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ಹತೋಟಿಗೆ ತಗೊಂಡು,ಅವರ ಮೂಲಕ ಕೆಲಸ ಕಾರ್ಯಗಳನ್ನು ಮಾಡಿಸುವ ಸಾಮರ್ಥ್ಯ ಇಲ್ಲವೇ ಇಲ್ಲ. ಇಂತಹ ಅಸಮರ್ಥ ಶಾಸಕ ನಮ್ಮ ಗುಂಡ್ಲುಪೇಟೆಗೆ ಸಿಕ್ಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಾಸಕರ ಕಚೇರಿ ಮುಂದೆಯೇ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ. ಯಾವ ಕಾಲದಲ್ಲಿಯೂ ಶಾಸಕರ ಕಚೇರಿ ಮುಂದೆ ಇಷ್ಟೊಂದು ದಿನ ಪ್ರತಿಭಟನೆ ಮಾಡಿರಲಿಲ್ಲ. ತಾಲೂಕು ಕಚೇರಿ ಮುಂದೆ ಕೂತಿದ್ದರೆ ತಾಲೂಕು ಆಡಳಿತ ಕೇಳುತ್ತಿಲ್ಲ, ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಯುತ್ತಿದೆ ಎಂದರು.ರೈತರ ಪ್ರತಿಭಟನೆ 72 ದಿನಗಳಿಂದ ನಡೆಯುತ್ತಿದೆ ಜಿಲ್ಲಾಡಳಿತ-ತಾಲೂಕು ಆಡಳಿತ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದರೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಏನಾಗಿದೆ ಅಂತ ಹೇಳೋಣ ನೀವೇ ಹೇಳಿ ಶಾಸಕರೇ ಎಂದು ಪ್ರಶ್ನಿಸಿದರು.
ಕಾರ್ಯಕರ್ತರು ಮೈಸೂರಿಗೆ ಬಂದರೆ, ಮೈಸೂರಿಗೆ ಯಾಕೆ ಬಂದ್ರಿ ಅಂತ ಕೇಳ್ತೀರಿ, ಬಂದವರನ್ನೆಲ್ಲ ಜೋರು ಮಾಡ್ತೀರಿ, ಗಲಾಟೆ ಮಾಡ್ತೀರಿ. ಪಾಪ ಎಷ್ಟೋ ಜನಕ್ಕೆ ಹೊಡೆಯಲು ಹೋಗಿದ್ದೀರಿ ಎಂಬುದು ನಮಗೂ ಗೊತ್ತಿದೆ ಎಂದರು.
ಪ್ರತಿಭಟನೆಗೆ ಬರಲಿಲ್ಲ:
ಕಳೆದ 2024 ಡಿಸೆಂಬರ್ನಲ್ಲಿ ನೀರು ತುಂಬಿಸಿಕೊಡುತ್ತೇನೆ, ಇಲ್ಲದಿದ್ದರೆ ಹೋರಾಟಕ್ಕೆ ಬರುತ್ತೇನೆ ಎಂದು ರೈತರಿಗೆ ಸ್ಥಳೀಯ ಶಾಸಕರು ಹೇಳಿದ್ದರು. 2026ರ ನವೆಂಬರ್ ತಿಂಗಳಲ್ಲಿ ಇದ್ದೇವೆ. 72 ದಿನದಿಂದ ಹೋರಾಟ ನಡೆಯುತ್ತಿದೆ, ಆದರೂ ಶಾಸಕರು ಬರಲಿಲ್ಲ ಎಂದರು.ಬಾಯಿ ಬಿಡಲಿಲ್ಲ:
ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟರ ಮುಂದೆಯೂ ಕೆರೆಗೆ ನೀರು ಬಿಡುವ ವಿಷಯದಲ್ಲಿ ಶಾಸಕರು ಬಾಯಿ ತೆರೆಯಲಿಲ್ಲ. ಮೂರನೇ ಹಂತ ಮುಗಿದ ಕೂಡಲೇ ನಾಲ್ಕನೇ ಹಂತಕ್ಕೆ ಬಿಡಿ ಎಂದು ಹೇಳಬೇಕಿತ್ತು. ಮೋಟಾರ್ ಬಾಂಬೆಯಿಂದ ಬಂದು ರಿಪೇರಿ ಆಗಿ, ಕೋಟಿಗಟ್ಟಲೆ ಖರ್ಚಾದರೂ ನೀರು ಬರಲಿಲ್ಲ ಎಂದರು.ಕೆರೆಗಳಿಗೆ ನೀರು ತುಂಬಿಸುವ ದಿನಾಂಕವನ್ನು ಪ್ರಕಟ ಮಾಡುವುದು ಶಾಸಕರ ಜವಾಬ್ದಾರಿ.ತಪ್ಪಿಸಿಕೊಂಡು ಓಡಾಡಿದರೆ ಆಗುವುದಿಲ್ಲ. ಬಿಜೆಪಿ ನಿಮ್ಮ ವಿರುದ್ಧ ಮಾತನಾಡುತ್ತಿಲ್ಲ. ತಾಲೂಕಿನ ರೈತರ ಹಾಗೂ ಜನಸಾಮಾನ್ಯರ ಪರವಾಗಿ ಮಾತನಾಡುತ್ತಿರುವುದು. ರೈತರಿಗೆ ತೊಂದರೆ ಆಗಬಾರದು,ರೈತರಿಗೆ ಬೆಲೆ ಕೊಡಬೇಕು ಎಂದು ಮಾತನಾಡುತ್ತಿರುವುದು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನ್ನೇಗಾಲಸ್ವಾಮಿ, ತಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಮುಖಂಡರಾದ ಕಲ್ಲಹಳ್ಳಿ ಮಹೇಶ್, ನಾಗೇಶ್, ಬಸವರಾಜು, ಹನುಮಂತಶೆಟ್ಟಿ, ಮಂಜು ಶಿವಪುರ ಇತರರು ಇದ್ದರು.ಎಷ್ಟು ರೈತರಿಗೆ ಸಾಗುವಳಿ ಪತ್ರ ಕೊಟ್ಟಿದ್ದೀರಿ?
ನಾನು ಶಾಸಕನಾಗಿದ್ದಾಗ ೫೦೦ಕ್ಕೂ ಹೆಚ್ಚು ಮಂದಿಗೆ ಸಾಗುವಳಿ ಕೊಟ್ಟೆ. ನೀವು ಶಾಸಕರಾಗಿ 3.5 ವರ್ಷದಲ್ಲಿ ಎಷ್ಟು ಸಾಗುವಳಿ ಪತ್ರ ಕೊಟ್ಟಿದ್ದೀರಿ? ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ರನ್ನು ಪ್ರಶ್ನಿಸಿದರು.ರೈತರ ೩೮ನೇ ದಿನ ಪ್ರತಿಭಟನೆಯ ದಿನ ಅಧಿಕಾರಿಗಳು ಬಂದು ಸರ್ವೆ ಮಾಡುವುದಾಗಿ ಭರವಸೆ ಕೊಟ್ಟರು. ಇವತ್ತಿನವರೆಗೂ ಒಂದು ಸರ್ವೆ ಮಾಡಲಿಕ್ಕೆ ಹೋಗಲಿಲ್ಲ?ಶಾಸಕರು ಸಾಗುವಳಿ ಸಮಿತಿ ಅಧ್ಯಕ್ಷರು,ನಿಮ್ಮ ಜವಾಬ್ದಾರಿ ಏನು? ಎಂದರು.
ರೈತರು ಅರಣ್ಯ ಜಮೀನು ಕೊಡಿ ಎಂದು ಹೇಳುತ್ತಿಲ್ಲ. ಅರಣ್ಯದಿಂದ ಹೊರತಾಗಿರುವ,ಅರಣ್ಯದ ಪಕ್ಕದಲ್ಲಿರುವ ಜಮೀನನ್ನು ಸರ್ವೆ ಮಾಡಲಿಕ್ಕೆ ಬಿಡುತ್ತಿಲ್ಲ.ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವುದಕ್ಕೆ ಸಾಗುವಳಿ ಕೊಡಿ ಎಂದು ಕೇಳುತ್ತಿದ್ದಾರೆ. ಸಾಗುವಳಿ ಪಡೆಯುವುದು ರೈತರ ಹಕ್ಕಲ್ಲವೇ ಎಂದು ಕೇಳಿದರು.