ರಾಯಚೂರು ವಿವಿ, ವಸತಿ ಶಾಲೆಗೆ ವಾಲ್ಮೀಕಿ ಹೆಸರು ವಾಲ್ಮೀಕಿ ಜಯಂತಿಯಲ್ಲಿ ಸಿಎಂ ಘೋಷಣೆ

Published : Oct 18, 2024, 08:19 AM IST
Siddaramaiah

ಸಾರಾಂಶ

ಪರಿಶಿಷ್ಟ ವರ್ಗದ ಎಲ್ಲಾ ವಸತಿ ಶಾಲೆಗಳು ಮತ್ತು ರಾಯಚೂರು ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಬೆಂಗಳೂರು : ಪರಿಶಿಷ್ಟ ವರ್ಗದ ಎಲ್ಲಾ ವಸತಿ ಶಾಲೆಗಳು ಮತ್ತು ರಾಯಚೂರು ಜಿಲ್ಲೆಯ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಗುರುವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವಾಲ್ಮೀಕಿ ಜಯಂತಿ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಈ ವರ್ಷ ರಾಜ್ಯದಲ್ಲಿ 20 ವಸತಿ ಶಾಲೆಗಳನ್ನು ಆರಂಭಿಸುತ್ತಿದ್ದು, ಈ ಪೈಕಿ 4 ವಸತಿ ಶಾಲೆಗಳನ್ನು ಪರಿಶಿಷ್ಟ ವರ್ಗದವರಿಗೆ ಮೀಸಲು ಇಡುತ್ತಿದ್ದೇವೆ. ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿರುವ ಹಣದಲ್ಲಿ ವೈದ್ಯಕೀಯ ಕಾಲೇಜು ಮಾಡಲು ಯಾವುದೇ ಅಡ್ಡಿಯಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಬಹುಸಂಖ್ಯಾತ ಜನ ಅಕ್ಷರ ಮತ್ತು ಅವಕಾಶಗಳಿಂದ ವಂಚಿತರಾದರು. ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದ್ದರೆ ದೇಶದಲ್ಲಿ ಅಸಮಾನತೆ ಸೃಷ್ಟಿಯಾಗುತ್ತಿರಲಿಲ್ಲ. ಕೆಳಸ್ತರದಲ್ಲಿ ಹುಟ್ಟಿದ ವಾಲ್ಮೀಕಿ ಅವರು ಸಂಸ್ಕೃತ ಕಲಿತು 24 ಸಾವಿರ ಶ್ಲೋಕಗಳ ರಾಮಾಯಣ ಬರೆದರು. ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯಕ್ಕೆ ಸೇರಿದವರು. ಆದರೆ, ದರೋಡೆ ಮಾಡಿಕೊಂಡು ಓಡಾಡುತ್ತಿದ್ದ ವಾಲ್ಮೀಕಿಯು ರಾಮಾಯಣ ಬರೆಯಲು ಸಾಧ್ಯವಾ ಎಂದು ಕತೆ ಕಟ್ಟಿಬಿಟ್ಟರು. ನಮಗೆ ತಪ್ಪು ಮಾಹಿತಿ ಕೊಡುವಂತಹ ಕೆಲಸ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು. ಬರೆದರು. ಜಗತ್ತಿಗೇ ಪ್ರೇರಣೆ ಆದರು. ವಾಲ್ಮೀಕಿ ಅವರು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ. ಸೀತೆ, ಮಕ್ಕಳಾದ ಲವ, ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲ್ಮೀಕಿ ಮಹರ್ಷಿಗಳು. ವಾಲ್ಮೀಕಿ ವಿಶ್ವಮಾನವರಾಗಿದ್ದರು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ ಎಂದರು.

ಕಾಂಗ್ರೆಸ್‌ ಸರ್ಕಾರ ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ಕೊಡಲು ಗ್ಯಾರಂಟಿಗಳನ್ನು ಜಾರಿಗೆ ತಂದರೆ ಇದನ್ನು ವಿರೋಧಿಸಿದವರು ಬಿಜೆಪಿಯವರು. ಆದ್ದರಿಂದ ಗ್ಯಾರಂಟಿಗಳ ಫಲಾನುಭವಿಗಳು ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ. ಬಿಜೆಪಿಯವರ ಸುಳ್ಳುಗಳಿಗೆ ತಲೆ ಕೊಟ್ಟು ಮೋಸ ಹೋಗದೆ ಬಿಜೆಪಿ ಸುಳ್ಳುಗಳಿಗೆ ಸರಿಯಾದ ಉತ್ತರ ಕೊಡಿ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಜಿಲ್ಲಾ ಕೇಂದ್ರಗಳಲ್ಲಿ ವಸತಿ ಶಾಲೆಗಳ ಕೊರತೆ ಇದ್ದು, ಸರ್ಕಾರ ಹೆಚ್ಚಿನ ವಸತಿ ಶಾಲೆ ಸ್ಥಾಪಿಸಿ ಬಡವರ, ಹಿಂದುಳಿದವರ ಶೈಕ್ಷಣಿಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಅವರಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿ, ಎಸ್‌ಸಿಎಸ್‌ಪಿ-ಟಿಎಸ್‌ಪಿಯಲ್ಲಿ ಅತಿ ಹೆಚ್ಚು ಹಣ ಮೀಸಲಿಟ್ಟ ಸರ್ಕಾರ ನಮ್ಮದು. 39 ಸಾವಿರ ಕೋಟಿ ರು. ಅನುದಾನವನ್ನು ಇದಕ್ಕಾಗಿ ಇಟ್ಟಿದೆ. ಬಡವರು ವಿದ್ಯಾವಂತರಾಗಬೇಕು. ರಾಜಕೀಯಕ್ಕೆ ಸರಿಸಮನಾದ ಶಕ್ತಿ ಮತ್ತೊಂದಿಲ್ಲ. ಹಿಂದುಳಿದವರು ರಾಜಕೀಯವಾಗಿ ಮುಂದೆ ಬರಬೇಕು. ಬಡವರ ಪರ ಯೋಜನೆ ತಂದಿರುವುದನ್ನು ಪ್ರತಿಪಕ್ಷದವರು ಸಹಿಸಲಾಗದೇ ಸಿಎಂ ಮೇಲೆ ಆಪಾದನೆ ಮಾಡುತ್ತಿದ್ದು ಅವರಿಗೆ ತಕ್ಕಪಾಠ ಕಲಿಸಬೇಕೆಂದರು.

ಸಮಾರಂಭದಲ್ಲಿ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜನಹಳ್ಳಿ ವಾಲ್ಮೀಕಿ ಸಮುದಾಯದ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಎಚ್.ಕೆ.ಪಾಟೀಲ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವನಗೌಡ ದದ್ದಲ್ ಸೇರಿದಂತೆ ಇತರರು ಇದ್ದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ