ರಮೇಶ್ ಕುಮಾರ್ ನಂಬಿಕೆ ದ್ರೋಹಿ: ಶ್ರೀನಿವಾಸಗೌಡ ಆಕ್ರೋಶ

KannadaprabhaNewsNetwork | Updated : Jun 03 2024, 04:24 AM IST

ಸಾರಾಂಶ

ಸಿದ್ದರಾಮಯ್ಯ ಕೋಲಾರಕ್ಕೆ ಬರಲಿಲ್ಲ ಎಂದ ಮೇಲೆ ತ್ಯಾಗ ಮಾಡಲು ಸಿದ್ಧನಿದ್ದ ನನಗೇ ಅವಕಾಶ ನೀಡಬೇಕಾಗಿತ್ತು, ಆದರೆ ಇನ್ಯಾರನ್ನೋ ತಂದು ಇಲ್ಲಿ ನಿಲ್ಲಿಸಬೇಕಾಗಿತ್ತಾ. ಮಹಾನುಭಾವನನ್ನು ನಂಬಿ ಮೋಸಹೋದೆ

 ಕೋಲಾರ  : ಸಿದ್ದರಾಮಯ್ಯರಿಗೆ ಕ್ಷೇತ್ರ ಬಿಟ್ಟುಕೊಟ್ಟರೆ ಎಂಎಲ್‌ಸಿ ಮಾಡಿಸುವುದಾಗಿ ಭರವಸೆ ನೀಡಿದ್ದ ಮಾಜಿ ಸ್ಪೀಕರ್‌ ರಮೇಶ್ ಕುಮಾರ್ ನಂಬಿಕೆ ದ್ರೋಹ ಮಾಡಿದರು, ಅವರು ಬರೀ ಸ್ವಾಮಿ ಅಲ್ಲ, ಮಹಾನ್‌ ಸ್ವಾಮಿ ಎಂದು ಮಾಜಿ ಶಾಸಕ ಕೆ. ಶ್ರೀನಿವಾಸಗೌಡ ಆಕ್ರೋಶ ವ್ಯಕ್ತಪಡಿಸಿದರು.ನಗರದ ತಮ್ಮ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕೋಲಾರಕ್ಕೆ ಬರಲಿಲ್ಲ ಎಂದ ಮೇಲೆ ತ್ಯಾಗ ಮಾಡಲು ಸಿದ್ಧನಿದ್ದ ನನಗೇ ಅವಕಾಶ ನೀಡಬೇಕಾಗಿತ್ತು, ಆದರೆ ಇನ್ಯಾರನ್ನೋ ತಂದು ಇಲ್ಲಿ ನಿಲ್ಲಿಸಬೇಕಾಗಿತ್ತಾ ಎಂದು ಪ್ರಶ್ನೆ ಮಾಡಿದರು.ನಾನು ಮೋಸ ಹೋದೆ

ಸಿದ್ದರಾಮಯ್ಯ ಸಿಎಂ ಆದ ಮೇಲೆ ನಮ್ಮ ನಿವಾಸಕ್ಕೆ ಬಂದು ಎಂಎಲ್‌ಸಿ ಮಾಡುವ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಸೋತ ನನಗೆ ಯಾವುದೇ ಸ್ಥಾನ ಬೇಡ ಎಂದು ಹೇಳಿಕೊಂಡಿದ್ದ ಮಾಜಿ ಸಚಿವ ರಮೇಶ್‌ಕುಮಾರ್ ಈಗ ಎಂಎಲ್‌ಸಿ ಆಗಲು ಸಿದ್ದರಾಮಯ್ಯ ಹಿಂದೆ ಬಿದ್ದಿದ್ದಾರೆ. ಈ ಮಹಾನುಭಾವನನ್ನು ನಂಬಿ ನಾನು ಮೋಸ ಹೋದೆ ಎಂದರು.ಇವರಿಗಿಂತ ಮೊದಲು ಶಾಸಕನಾದವನು ನಾನು. ಹಿಂದೆ ಸಂಪುಟದಲ್ಲಿ ಸಚಿವನಾದೆ. ಈ ಮಹಾಸ್ವಾಮಿಗೆ ಸ್ಥಾನ ಸಿಗಲಿಲ್ಲ, ಬ್ರಾಹ್ಮಣನಾದ ತನಗೆ ಅವಕಾಶ ಸಿಗಲಿಲ್ಲ ಎಂದು ಅಂದೇ ಈತ ಒಳಗೊಳಗೆ ದ್ವೇಷ ಕಾರತೊಡಗಿದ್ದ. ನನ್ನನ್ನು ಎಂಎಲ್‌ಸಿ ಮಾಡಿ, ಮಂತ್ರಿ ಮಾಡಿದರೆ ತಪ್ಪೇನು, ಎಂಎಲ್‌ಸಿ ಸಿಗದಿದ್ದರೆ ಪಕ್ಷ ಬಿಡಲ್ಲ. ನಾನು ಆ ಮಟ್ಟದಲ್ಲಿ ರಾಜಕಾರಣ ಮಾಡಿಲ್ಲ. ಇಫ್ಕೋ, ಕ್ರಿಬ್ಕೋ ಮತ್ತಿತರ ಸಂಸ್ಥೆಗಳಲ್ಲಿ ಅಂತಾರಾಷ್ಟಿಯ ಮಟ್ಟದಲ್ಲಿ ಕೆಲಸ ಮಾಡಿದ್ದೇನೆ, ಈಗಲೂ ೭ನೇ ಬಾರಿ ಆಯ್ಕೆಯಾಗಿದ್ದೇನೆ ಎಂದರು.

ರಮೇಶ್‌ ಕುಮಾರ್‌ ಕಳ್ಳಕಣ್ಣೀರು

ಸೋಲಿಸಿಬಿಟ್ಟರು ಎಂದು ರಮೇಶ್ ಕುಮಾರ್ ಕಣ್ಣೀರು ಹಾಕಿದ್ದರು. ಅದೆಲ್ಲ ಕಳ್ಳ ಕಣ್ಣೀರು, ಅದನ್ನು ಅವರಿಗೆ ಹೇಳಿಕೊಡಬೇಕಾ ಎಂದು ವ್ಯಂಗ್ಯವಾಡಿದ ಶ್ರೀನಿವಾಸಗೌಡ, ಶ್ರೀನಿವಾಸಪುರದಲ್ಲಿ ಒಂದು ಬಾರಿ ವೆಂಕಟಶಿವಾರೆಡ್ಡಿ, ಒಂದು ಬಾರಿ ಈ ಮಹಾಸ್ವಾಮಿ ಗೆಲ್ಲೋದು ಸಂಪ್ರದಾಯವಾಗಿತ್ತು. ಆದರೆ ಕಳೆದ ಬಾರಿ ಎರಡನೇ ಬಾರಿ ರಮೇಶ್‌ಕುಮಾರ್ ಗೆಲ್ಲಲು ಹೋಳೂರು ಹೋಬಳಿಯಲ್ಲಿ ನಾನು ಕೆಲಸ ಮಾಡಿದ್ದೇ ಕಾರಣ ಎಂದರು.ಪಾತಾಳ ತಲುಪಿದ್ದ ಡಿಸಿಸಿ ಬ್ಯಾಂಕನ್ನು ಗೋವಿಂದಗೌಡ ಅಧಿಕಾರಕ್ಕೆ ಬಂದ ಮೇಲೆ ಒಂದು ಮಟ್ಟಕ್ಕೆ ತಂದಿದ್ದರು. ಇದೀಗ ಇದೇ ಮಹಾಸ್ವಾಮಿ ಬ್ಯಾಂಕನ್ನು ಮುಗಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತಪಡಿಸಿದರು.ಜೆಡಿಎಸ್ ಮುಗಿಸಲು ಸಾಧ್ಯವಿಲ್ಲದೇವೇಗೌಡರ ಕುಟುಂಬ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಗೌಡರು ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗೇರಿ ಗೌರವ ಉಳಿಸಿಕೊಂಡಿದ್ದರು. ಈಗ ಪ್ರಜ್ವಲ್, ರೇವಣ್ಣ ಅವರ ಪತ್ನಿ ಗೌಡರ ಗೌರವಕ್ಕೆ ಮಸಿ ಬಳಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಇರುವವರೆಗೂ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಅವರಿಗೆ ಪಕ್ಷ ಮುನ್ನಡೆಸುವ ಶಕ್ತಿ ಇದೆ ಎಂದರು.

Share this article