ಗುಡಿಬಂಡೆ : ರಂಗೇರಿದ ಪಟ್ಟಣ ಪಂಚಾಯತ್ ಅಧ್ಯಕ್ಷ ಚುನಾವಣೆ - ಆಕಾಂಕ್ಷಿಗಳ ರಣತಂತ್ರ ಶುರು

KannadaprabhaNewsNetwork | Updated : Aug 10 2024, 04:32 AM IST

ಸಾರಾಂಶ

ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಿರುವ ಕಾರಣದಿಂದ ಪ್ರತಿಯೊಬ್ಬರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪ್ರಕಟಿತ ಮೀಸಲಿನಿಂದ ಪ.ಪಂಗಡದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ

 ಗುಡಿಬಂಡೆ :  ಸ್ಥಳೀಯ ಪಟ್ಟಣ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗಿದ್ದು, ಆಕಾಂಕ್ಷಿಗಳ ರಣತಂತ್ರ ಶುರುವಾಗಿದೆ. ಗುಡಿಬಂಡೆ ಪ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟ ಕಾರಣ ಆಕಾಂಕ್ಷಿಗಳು ಸಹ ಹೆಚ್ಚಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಪ.ಜಾತಿ (ಮಹಿಳೆ) ವರ್ಗಕ್ಕೆ ಮೀಸಲಿಡಲಾಗಿದೆ.

ಪಪಂನಲ್ಲಿ ಪಕ್ಷಗಳ ಬಲಾಬಲ

ಸ್ಥಳೀಯ ಗುಡಿಬಂಡೆ ಪಟ್ಟಣ ಪಂಚಾಯತಿಯ ಚುನಾವಣೆಯ ಫಲಿತಾಂಶದಂತೆ ಕಾಂಗ್ರೆಸ್ -6, ಜೆಡಿಎಸ್-2 ಹಾಗೂ ಪಕ್ಷೇತರರು 3 ವಾರ್ಡ್‌ಗಳಲ್ಲಿ ಜಯಗಳಿಸಿದ್ದರು. 2021 ರಿಂದ 2024 ರ ಅವಧಿಯಲ್ಲಿ ಅಂದಿನ ಅರೋಗ್ಯ ಸಚಿವ ಡಾ. ಕೆ. ಸುಧಾಕರ್ ಬೆಂಬಲದಿಂದಾಗಿ ಕೆಲ ಸದಸ್ಯರು ಬಿಜೆಪಿ ಬೆಂಬಲದೊಂದಿಗೆ ಬಿಸಿಎಂ ( ಎ ) ಮಹಿಳೆಗೆ ನಿಗದಿಯಾಗಿದ್ದ ಮೀಸಲಾತಿ ಮೂಲಕ 7ನೇ ವಾರ್ಡ್ ಸದಸ್ಯೆ ಬಷೀರಾ ರಿಜ್ವಾನ್ ಅಧ್ಯಕ್ಷರಾಗಿ ಅಧಿಕಾರ ಗಿಟ್ಟಿಸಿಕೊಂಡಿದ್ದರು.

ಹಿಂದೆ ಅಧ್ಯಕ್ಷರಾಗಿದ್ದ ಬಷೀರಾ ರಿಜ್ವಾನ್ ಪುನಃ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾದರೇ ಕಾಂಗ್ರೆಸ್ ಅಧಿಕಾರ ಹಿಡಿಯಬಹುದಾಗಿದೆ. ಒಂದು ವೇಳೆ ಚುನಾವಣೆ ನಡೆದರೇ ಕಾಂಗ್ರೇಸ್ ಶಾಸಕರ ಮತವನ್ನು ಪಡೆದುಕೊಳ್ಳಬಹುದಾಗಿದೆ. ಪಕ್ಷೇತರರು ಹಾಗೂ ಜೆಡಿಎಸ್ ಒಂದಾದರೇ ಬಿಜೆಪಿ ಸಂಸದರಾದ ಡಾ.ಕೆ.ಸುಧಾಕರ್ ರವರ ಮತವನ್ನು ಪಡೆದುಕೊಳ್ಳಬಹುದಾಗಿದೆ.

ಮೀಸಲು ವಿರುದ್ಧ ಕೋರ್ಟ್‌ಗೆ

ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಿರುವ ಕಾರಣದಿಂದ ಪ್ರತಿಯೊಬ್ಬರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪ್ರಕಟಿತ ಮೀಸಲಿನಿಂದ ಪ.ಪಂಗಡದ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಸಂಬಂಧ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು 9ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ವೀಣಾ ತಿಳಿಸಿದ್ದಾರೆ.

ಪಪಂ ಅಧ್ಯಕ್ಷ ಗಾದಿಗೆ ಕಾಂಗ್ರೆಸ್‌ನಿಂದ 3ನೇ ವಾರ್ಡಿನ ವಿಕಾಸ್, 8ನೇ ವಾರ್ಡಿ ಇಸ್ಮಾಯಿಲ್ ಅಜಾದ್ ಬಾಬು, 10 ನೇ ವಾರ್ಡ್‌ನ ಮಂಜುಳ ರೇಸ್ ನಲ್ಲಿದ್ದಾರೆ. ಜೊತೆಗೆ ಜೆಡಿಎಸ್‌ನಿಂದ 6ನೇ ವಾರ್ಡಿನ ಬಷೀರ್, ಪಕ್ಷೇತರ ಸದಸ್ಯ 2ನೇ ವಾರ್ಡಿನ ಜಿ. ರಾಜೇಶ್, 9ನೇ ವಾರ್ಡಿನ ಪಕ್ಷೇತರ ಸದಸ್ಯೆ ವೀಣಾ ನಿತಿನ್ ಸಹ ರೇಸ್ ನಲ್ಲಿದ್ದಾರೆ ಎನ್ನಲಾಗಿದೆ.

Share this article