ಕನ್ನಡಪ್ರಭ ವಾರ್ತೆ ವಿಧಾನಸಭೆ
ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರ ಸಾವು ಸಂಭವಿಸಿದ ದಿನ ರಾಜ್ಯದ ಕ್ರೀಡಾ ಇತಿಹಾಸದ ‘ಬ್ಲ್ಯಾಕ್ ಡೇ’ ಆಗಿದೆ. ಇದೊಂದು ಆಕಸ್ಮಿಕ ಘಟನೆಯಾಗಿದ್ದರೂ ಹಲವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ಆರ್‌ಸಿಬಿ ಕಾಲ್ತುಳಿತ ದುರಂತ ಸಂಬಂಧ ನಡೆದ ಸುದೀರ್ಘ ಚರ್ಚೆ ಬಳಿಕ ಉತ್ತರಿಸಿದ ಅವರು, ರಾಜ್ಯ ಕ್ರೀಡಾ ಇತಿಹಾಸದಲ್ಲಿ ಇಂಥ ಘಟನೆ ನಡೆದಿರಲಿಲ್ಲ. ಈ ಘಟನೆ ಇಡೀ ದೇಶವೇ ನಮ್ಮ ಕಡೆ ನೋಡುವಂತೆ ಮಾಡಿತು. 11 ಮಂದಿ ಎಳೆಯ ವಯಸ್ಸಿನ ಅಮಾಯಕರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಇದು ನೋವಿನ ಸಂಗತಿ. ಈ ಘಟನೆ ಸಂಬಂಧ ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ವಿಸ್ತೃತವಾಗಿ ಮಾತನಾಡುವುದಿಲ್ಲ ಎಂದರು.
ಅವಘಡ ಸಂಬಂಧ ಹಲವು ಕ್ರಮ:ತಪ್ಪು ಆದ ಮೇಲೆ ಕ್ರಮ ಆಗಲೇಬೇಕು. ಅದರಂತೆ ನಾವು ಈ ಘಟನೆ ಸಂಬಂಧ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನ ಸಹ ಮಾಡಿದ್ದೇವೆ. ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಅಂತೆಯೇ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಮ್ಯಾಜಿಸ್ಟ್ರೇಟ್ ವಿಚಾರಣೆಗೂ ಆದೇಶಿಸಲಾಗಿದೆ. ಮುಂದೆ ಇಂಥ ಘಟನೆಗಳು ಆಗದಂತೆ ತಡೆಯಲು ಜನಸಂದಣಿ ನಿಯಂತ್ರಣ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಿ, ಸದನ ಸಮಿತಿಗೆ ವಹಿಸಲಾಗಿದೆ ಎಂದು ಹೇಳಿದರು.
ಘಟನೆ ಸಂಬಂಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನು ಹುದ್ದೆಯಿಂದ ಕೈ ಬಿಡಲಾಗಿದೆ. ಘಟನೆ ಸಂಬಂಧ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕನ್ಹಾ ಅವರ ಏಕಸದಸ್ಯ ವಿಚಾರಣಾ ಆಯೋಗ ರಚಿಸಲಾಗಿದೆ. ಮ್ಯಾಜಿಸ್ಟ್ರೇಟ್ ವಿಚಾರಣಾ ವರದಿ ಸಲ್ಲಿಕೆಯಾಗಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಈ ವರದಿ ಬಹಿರಂಗಪಡಿಸುವುದಿಲ್ಲ. ನ್ಯಾಯಾಲಯದ ತೀರ್ಪು ಬಂದ ಬಳಿಕ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.ಸ್ಟೇಡಿಯಂ ನಿರ್ಮಾಣಕ್ಕೆ ತುಮಕೂರು ಬಳಿ 41 ಎಕರೆ:
ಕಾಲ್ತುಳಿತ ಘಟನೆ ಸಂಬಂಧ ಕ್ರಮಗಳ ಜತೆಗೆ ಚಿನ್ನಸ್ವಾಮಿ ಸ್ಟೇಡಿಯಂ ಕಡಿಮೆ ಸಾಮರ್ಥ್ಯ ಹೊಂದಿರುವುದರಿಂದ ತುಮಕೂರು ಬಳಿ 1 ಲಕ್ಷ ಸಾಮರ್ಥ್ಯದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕೆಎಸ್‌ಸಿಎಗೆ 41 ಎಕರೆ ಜಾಗ ನೀಡಿದ್ದೇವೆ. ದೇವನಹಳ್ಳಿ ಬಳಿ ಸ್ಪೋರ್ಟ್ಸ್ ಸಿಟಿ ಮಾಡುವ ಪ್ರಸ್ತಾವನೆ ಇದೆ ಎಂದು ಪರಮೇಶ್ವರ್ ಹೇಳಿದರು.ಆರ್‌ಸಿಬಿ ರಾಜ್ಯದ ತಂಡವಲ್ಲ:
ಐಪಿಎಲ್‌ನ ಆರ್‌ಸಿಬಿ ತಂಡ ಕರ್ನಾಟಕದ ತಂಡವಲ್ಲ. ಆದರೂ ಜನರಲ್ಲಿ ಬೆಂಗಳೂರಿನ ತಂಡ ಎಂಬ ಭಾವನೆ ಇದೆ. ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ವೃತ್ತಿಪರ ಕ್ರಿಕೆಟ್‌ಗೆ ಪ್ರೋತ್ಸಾಹಿಸುವುದು, ಮನರಂಜನೆ ಹಾಗೂ ಹಣದ ಉದ್ದೇಶದಿಂದ ನಡೆಸಲಾಗುತ್ತಿದೆ. ಪ್ರಾಂಚೈಸಿಗಳು ಇಲ್ಲಿ ಹರಾಜು ನಡೆಸಿ ಹಣ ನೀಡಿ ಆಟಗಾರರನ್ನು ಖರೀದಿಸುತ್ತಾರೆ. ಅದರಂತೆ ಆರ್‌ಸಿಬಿ ತಂಡ ಫೈನಲ್‌ನಲ್ಲಿ ಮೊದಲ ಬಾರಿ ಗೆದ್ದ ಹಿನ್ನೆಲೆಯಲ್ಲಿ ವಿಧಾನಸೌಧದ ಮೆಟ್ಟಿಲುಗಳಲ್ಲಿ ಹಾಗೂ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರನ್ನು ಸನ್ಮಾನಿಸಲಾಗಿದೆ. ಇದು ಸರ್ಕಾರದ ಕಾರ್ಯಕ್ರಮವಲ್ಲ. ಆದರೂ ಯಾರೂ ಊಹೆ ಮಾಡದ ಕಾಲ್ತುಳಿತ ಅವಘಡ ಸಂಭವಿಸಿದೆ ಎಂದರು.ವಿವಿಧ ರಾಜ್ಯಗಳಲ್ಲಿ ಕಾಲ್ತುಳಿತ:
ಈ ದೇಶದಲ್ಲಿ ಅನೇಕ ಕಡೆ ಕಾಲ್ತುಳಿತ ಘಟನೆಗಳು ನಡೆದಿವೆ. ಹಾಗಂತಾ ನಾನು ಇಲ್ಲಿನ ಘಟನೆಯನ್ನು ಸಮರ್ಥಿಸುತ್ತಿಲ್ಲ. 2013ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಗೋದಾವರಿ ಕಾಲ್ತುಳಿತದಲ್ಲಿ 29, ಜಾರ್ಖಂಡ್‌ನ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ 10, ತಿರುವಣ್ಣಾ ಮಲೈನಲ್ಲಿ 4, ಉತ್ತರಾಖಂಡದ ಮಹಾಕುಂಭ ಮೇಳದಲ್ಲಿ 6, ಒಡಿಶಾದ ಪುರಿಯಲ್ಲಿ 3, ವೈಷ್ಣೋದೇವಿ ದೇವಸ್ಥಾನದಲ್ಲಿ 12, ಉತ್ತರಪ್ರದೇಶದ ಹತ್ರಾಸ್‌ನಲ್ಲಿ 121, ತಿರುಮಲ ಬೆಟ್ಟದಲ್ಲಿ 6, ಪ್ರಯಾಗರಾಜ್ ಕುಂಭಮೇಳದಲ್ಲಿ 39 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಡಾ.ರಾಜ್ ಕುಮಾರ್ ನಿಧನದ ಸಂದರ್ಭದಲ್ಲಿ 7, ಕಾರ್ಲ್‌ಟನ್ ಅಗ್ನಿ ಅವಘಡದಲ್ಲಿ 9, ವೀನಸ್ ಸರ್ಕಸ್ ಅವಘಡದಲ್ಲಿ 92, ಗಂಗಾರಾಮ್ ಕಟ್ಟಡ ಕುಸಿತದ ವೇಳೆ 123 ಮಂದಿ ಕಾಲ್ತುಳಿತದಿಂ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.ಗುಜರಾತ್‌ನಲ್ಲಿ ಮೋದಿ ಸಹ ಕಪ್ ಹಿಡಿದಿದ್ದರು:
ಐಪಿಎಲ್‌ನ ಗುಜರಾತ್ ತಂಡ ಕಪ್ ಗೆದ್ದಾಗ ಅಲ್ಲಿನ ಸರ್ಕಾರ ಆಟಗಾರರಿಗೆ ಸನ್ಮಾನ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕಪ್ ಹಿಡಿದುಕೊಂಡಿದ್ದರು. ಕೋಲ್ಕತಾದ ಕೆಕೆಆರ್, ತಮಿಳುನಾಡಿನ ಸಿಎಸ್‌ಕೆ ತಂಡ ಕಪ್ ಗೆದ್ದಾಗ ಅಲ್ಲಿನ ಸರ್ಕಾರಗಳು ಸನ್ಮಾನ ಮಾಡಿವೆ. ಮುಖ್ಯಮಂತ್ರಿಗಳು ಕಪ್ ಹಿಡಿದು ಸಂಭ್ರಮಿಸಿದ್ದಾರೆ ಎನ್ನುವ ಮುಖಾಂತರ ಆರ್‌ಸಿಬಿ ಆಟಗಾರರ ಸನ್ಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದನ್ನು ಪರೋಕ್ಷವಾಗಿ ಸಮರ್ಥಿಸಿದರು.