ಮಧುರೈನಿಂದ ಚುನಾವಣಾ ಕಣಕ್ಕೆ : ನಟ ವಿಜಯ್‌

KannadaprabhaNewsNetwork |  
Published : Aug 22, 2025, 01:00 AM IST
ವಿಜಯ್ | Kannada Prabha

ಸಾರಾಂಶ

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮೈತ್ರಿಯಿಲ್ಲದೆ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಇತಿಹಾಸ ಸೃಷ್ಟಿಸಲಿದೆ ಎಂದು ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಘೋಷಿಸಿದ್ದಾರೆ. ಜತೆಗೆ ಆಡಳಿತಾರೂಢ ಡಿಎಂಕೆಗೂ ನೇರ ಸವಾಲೆಸೆದಿದ್ದಾರೆ.

ಮದುರೈ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಮೈತ್ರಿಯಿಲ್ಲದೆ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಇತಿಹಾಸ ಸೃಷ್ಟಿಸಲಿದೆ ಎಂದು ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಘೋಷಿಸಿದ್ದಾರೆ. ಜತೆಗೆ ಆಡಳಿತಾರೂಢ ಡಿಎಂಕೆಗೂ ನೇರ ಸವಾಲೆಸೆದಿದ್ದಾರೆ.

ಮದುರೈನಲ್ಲಿ ‘ಮತದಾರರ ಇತಿಹಾಸ ಮರಳುವಿಕೆ’ ಥೀಮ್‌ನಡಿ ನಡೆದ ಪಕ್ಷದ ಎರಡನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ವಿಜಯ್‌, ‘ಟಿವಿಕೆಯ ರಾಜಕೀಯ ನಿಜವಾದ, ಭಾವನಾತ್ಮಕ, ಜನರ ಒಳಿತಿಗಾಗಿ ಮತ್ತು ಅವರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ಮಾತ್ರ ಇದೆ. 1967 ಮತ್ತು 1977ರಲ್ಲಿ ಆದಂತೆ, 2026ರಲ್ಲಿ ರಾಜ್ಯ ಬಹುದೊಡ್ಡ ರಾಜಕೀಯ ಬದಲಾವಣೆಯನ್ನು ಕಾಣಲಿದೆ. ಇತಿಹಾಸ ಪುನರಾವರ್ತನೆಯಾಗುತ್ತದೆ’ ಎಂದು ಹೇಳಿದ್ದಾರೆ.

ಈ ಮೂಲಕ, 1967ರಲ್ಲಿ ಡಿಎಂಕೆ ಮತ್ತು 1977ರಲ್ಲಿ ಎಐಎಡಿಎಂಕೆ ಮೊದಲ ಬಾರಿ ಜಯಗಳಿಸಿದ್ದನ್ನು ನೆನಪಿಸಿ, ಕಳೆದ ವರ್ಷ ಸ್ಥಾಪನೆಯಾದ ತಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಮೊದಲ ಗೆಲುವು ಕಾಣಲಿದೆ ಎಂದು ವಿಶ್ವಾಸದ ಮಾತನ್ನಾಡಿದ್ದಾರೆ. ಜತೆಗೆ, ಶ್ರೀಲಂಕಾದಿಂದ ಕಚ್ಚತೀವು ದ್ವೀಪವನ್ನು ಸ್ವತಂತ್ರಗೊಳಿಸುವ ಭರವಸೆ ನೀಡಿದ್ದಾರೆ.

ಡಿಎಂಕೆ ಮೇಲೆ ವಾಗ್ದಾಳಿ:

‘ನಮ್ಮನ್ನು ತುಚ್ಛವಾಗಿ ಕಾಣಬೇಡಿ, ಈ ಸಮ್ಮೇಳನಕ್ಕೆ ಬಂದವರು, ಮುಂದಿನ ಚುನಾವಣೆಯಲ್ಲಿ ಜನವಿರೋಧಿ ಸರ್ಕಾರಕ್ಕೆ ಭಾರೀ ಪೆಟ್ಟು ಕೊಡುತ್ತಾರೆ. ಕಾಡಲ್ಲಿ ತೋಳದಂತಹ ಕೆಲ ಪ್ರಾಣಿಗಳಿದ್ದರೂ, ಸಿಂಹವೇ ಎಂದಿದ್ದರೂ ವನರಾಜ. ಅದು ತನ್ನ ಪ್ರದೇಶವನ್ನು ತಾನೇ ಗುರುತಿಸಿಕೊಳ್ಳುತ್ತದೆ. ಅದಕ್ಕೆ ಗುಂಪಿನಲ್ಲಿರಲೂ ಗೊತ್ತು, ಒಬ್ಬಂಟಿಯಾಗಿರಲೂ ಗೊತ್ತು. ಸಿಂಹ ಯಾವತ್ತಿದ್ದರೂ ಬೇಟೆಗಷ್ಟೇ ಹೊರಗೆ ಬರುವುದು’ ಎಂದ ವಿಜಯ್‌, ‘ಬಿಜೆಪಿ ನಮ್ಮ ಸೈದ್ಧಾಂತಿಕ ವಿರೋಧಿಯಾದರೆ, ಡಿಎಂಕೆ ರಾಜಕೀಯ ವೈರಿ’ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದೇ ವೇಳೆ, ಸಿಎಂ ಸ್ಟಾಲಿನ್‌ರನ್ನು ಅಂಕಲ್‌ ಎಂದು ಕರೆದು ಕಾಲೆಳೆದಿದ್ದಾರೆ.

ಈ ನಡುವೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಪೈಕಿ ಒಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

PREV
Read more Articles on

Recommended Stories

ನೈಸ್ ಭೂಸ್ವಾಧೀನ ರದ್ದುಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ
ಧರ್ಮಸ್ಥಳ ಪರವಾಗಿ ರಾಜ್ಯಾದ್ಯಂತ ಹಿಂದೂಗಳು ಪ್ರತಿಭಟನೆ