ರಾಜ್ಯ ಕಾಂಗ್ರೆಸ್‌ ಸರ್ಕಾರ ವಿಶೇಷ ಅಧಿವೇಶನದ ದಿನವನ್ನು ಕರಾಳ ದಿನ ಮಾಡಿ ರಾಜ್ಯಪಾಲರಿಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಮಾನಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರ ವಿಶೇಷ ಅಧಿವೇಶನದ ದಿನವನ್ನು ಕರಾಳ ದಿನ ಮಾಡಿ ರಾಜ್ಯಪಾಲರಿಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಮಾನಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸಾಂಕೇತಿಕವಾಗಿ ಭಾಷಣ ಮಂಡಿಸಿ ಧನ್ಯವಾದ ಹೇಳಿ ಹೋಗಿದ್ದಾರೆ. ಹಿಂದೆ ಹಂಸರಾಜ್‌ ಭಾರದ್ವಾಜ್‌ ಕೂಡ ಹಾಗೆಯೇ ಮಾಡಿದ್ದರು. ಇದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.

ಸಂವಿಧಾನದ ಪ್ರಕಾರ ಸದನಕ್ಕೆ ಬಂದು ಸಾಂಕೇತಿಕ ಭಾಷಣ ಮಂಡಿಸಿ ಧನ್ಯವಾದ ಹೇಳುವ ಅವಕಾಶ ಇದ್ದೇ ಇದೆ. ಆದರೆ ಕಾಂಗ್ರೆಸ್‌ ಶಾಸಕರು ಗೂಂಡಾಗಿರಿ ಮಾಡಿ ರಾಜ್ಯಪಾಲರನ್ನು ತಳ್ಳಿದ್ದಾರೆ ಹಾಗೂ ದಾಳಿ ಮಾಡಿದ್ದಾರೆ. ಸದನದ ಹಿರಿಯ ಸದಸ್ಯ ಹಾಗೂ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಅವರೇ ಸ್ವತಃ ಈ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಆ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವ ಅರ್ಹತೆ ಇಲ್ಲ ಎಂದು ಕಿಡಿಕಾರಿದರು.

ತಪ್ಪಿತಸ್ಥ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹ:

ಸದನದ ನಿಯಮಾವಳಿ ಪುಸ್ತಕದ 13 ನೇ ಪುಟದ 27 ನೇ ಕಲಂನಲ್ಲಿ ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಅವರು ಭಾಷಣ ಮಾಡುವಾಗ ಯಾವುದೇ ಸದಸ್ಯರು ಅಡ್ಡಿ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆ ರೀತಿ ಮಾಡಿದರೆ ಅದನ್ನು ತೀವ್ರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸ್ಪೀಕರ್‌ ಯು.ಟಿ.ಖಾದರ್‌ ಅವರು ತಪ್ಪಿತಸ್ಥ ಸದಸ್ಯರನ್ನು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಸದನದಿಂದ ಹೊರಗೆ ಹಾಕಬೇಕು ಎಂದು ಆಗ್ರಹಿಸಿದರು.

ಸಂವಿಧಾನಕ್ಕೆ ಅಪಮಾನ:

ರಾಜ್ಯಪಾಲರು ಅವರ ಘನತೆಯನ್ನು ಕಾಪಾಡಿಕೊಂಡಿದ್ದು, ಎಂದೂ ಸದನಕ್ಕೆ ಅಗೌರವ ತೋರಿಲ್ಲ. ಈ ಹಿಂದೆ ಎಲ್ಲ ಮಸೂದೆಗಳಿಗೆ ಅವರು ಸಹಿ ಹಾಕಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಾಜಭವನವನ್ನು ಪಕ್ಷದ ಕಚೇರಿ ಮಾಡಲು ಹೊರಟಿದೆ. ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಅಂತಹ ರಾಜ್ಯಪಾಲರಿಗೆ ಕಾಂಗ್ರೆಸ್‌ ನಾಯಕರು ಘೇರಾವ್‌ ಹಾಕಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಕಾಂಗ್ರೆಸ್‌ ಸದಸ್ಯರು ಈ ರೀತಿ ಮಾಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕಾಂಗ್ರೆಸಿಗರು ಈಗ ಇಡೀ ಸದನಕ್ಕೆ ಅಪಮಾನ ಮಾಡಿದ್ದಾರೆ. ರಾಜ್ಯಪಾಲರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಹೇಳಿದೆ ಎಂದು ಪ್ರಶ್ನೆಯೊಂದಕ್ಕೆ ಅಶೋಕ್‌ ಹೇಳಿದರು.

ರಾಜ್ಯಪಾಲರಿಗೆ ಅಗೌರವ: ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಅಶೋಕ್‌ ಪತ್ರ:

ರಾಜ್ಯಪಾಲರಿಗೆ ಅಗೌರವ ತೋರಿದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಗುರುವಾರ ವಿಧಾನಸಭೆ ಸ್ಪೀಕರ್‌ಗೆ ಪತ್ರ ಬರೆದಿರುವ ಅವರು, ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮುಗಿಸಿ ನಿರ್ಗಮಿಸುವಾಗ ಸದನದಲ್ಲಿ ಹಾಜರಿದ್ದ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಅವರನ್ನು ಅಡ್ಡಗಟ್ಟಿ, ತಳ್ಳಾಡಿ, ನೂಕುನುಗ್ಗಲು ಉಂಟು ಮಾಡಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 27ರಂತೆ ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಸಂವಿಧಾನದ 175 ಅಥವಾ 176ನೇ ಅನುಚ್ಛೇದದ ಮೇರೆಗೆ ವಿಧಾನಮಂಡಲದ ಉಭಯ ಸದನಗಳು ಸಭೆ ಸೇರುವಾಗ ಅಥವಾ 175ನೇ ಅನುಚ್ಛೇದದ ಮೇರೆಗೆ ವಿಧಾನಸಭಾ ಸದಸ್ಯರು ಮಾತ್ರ ಸಭೆ ಸೇರಿರುವಾಗ, ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಯಾವುದೇ ಸದಸ್ಯರು ಯಾವುದೇ ಭಾಷಣ ಮಾಡುವ ಮೂಲಕ ಅಥವಾ ಯಾವುದೇ ಕ್ರಿಯಾಲೋಪವೆತ್ತಿ ರಾಜ್ಯಪಾಲರ ಭಾಷಣಕ್ಕೆ ಮುಂಚೆ ಅಥವಾ ನಂತರ ಅಡ್ಡಿ ಅಥವಾ ವಿಘ್ನ ಉಂಟು ಮಾಡುವಂತಿಲ್ಲ. ಹಾಗೆ ಮಾಡಿದರೆ, ಸದನದ ಆದೇಶದ ಉಲ್ಲಂಘನೆಯೆಂದು ಪರಿಗಣಿಸಬೇಕು ಎಂದು ನಿಯಮ ಹೇಳುತ್ತದೆ. ಹೀಗಾಗಿ ರಾಜ್ಯಪಾಲರಿಗೆ ಅಗೌರವ ತೋರಿದ ಸದಸ್ಯರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಶೋಕ್‌ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ದ್ವೇಷಕ್ಕೆ ಸದನ ಬಳಕೆ; ವಿಜಯೇಂದ್ರ:

ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಸದನವನ್ನು ಬಳಸುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇವತ್ತು ಮಾತನಾಡಿದ್ದಾರೆ. ಆದರೆ, ಸದನದ ಒಳಗಡೆ ರಾಜ್ಯಪಾಲರಿಗೆ ಅಗೌರವ ಸೂಚಿಸುವ ಕೆಲಸವನ್ನು ಆಡಳಿತ ಪಕ್ಷದವರು ಮಾಡಿದ್ದು ಖಂಡನಾರ್ಹ ಎಂದರು.

ಈ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕೆಲಸ ಮಾಡಿದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ದಾರಿಯಲ್ಲಿ ಸಾಗುತ್ತಿದೆ. ಸದನದ ದುರ್ಬಳಕೆ ಮಾಡಲು ಹೊರಟಿರುವುದು ದುರ್ದೈವ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸರ್ಕಾರವು ಮನ್ ರೇಗಾದಲ್ಲಿ ವಿಬಿ ಜಿ ರಾಮ್ ಜಿ ಎಂದು ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ. ಸುಧಾರಣೆಗಳನ್ನು ತಂದಿದ್ದಾರೆ. ಅದರ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಪ್ರಾರಂಭಿಸಿದೆ ಎಂದು ಆರೋಪಿಸಿದರು.

ಕೇಂದ್ರದ ವಿರುದ್ಧ ರಾಜ್ಯದ ಜನರ ಎತ್ತಿಕಟ್ಟುವ ಕುತಂತ್ರ:

ಕಾಂಗ್ರೆಸ್ಸಿನವರು ಗೊಂದಲದಲ್ಲಿದ್ದಾರೆ. ಗ್ರಾಮೀಣ ಭಾಗದ ಬಡವರು, ಸಣ್ಣ ರೈತರು, ಕಾರ್ಮಿಕರಿಗೆ ಅನುಕೂಲ ಆಗಲೆಂದು ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿದೆ. ಕಾಂಗ್ರೆಸ್ ಪಕ್ಷವು ಉದ್ಯೋಗ ಖಾತ್ರಿ ಯೋಜನೆ ಇರುವುದು ಕಾಂಗ್ರೆಸ್ ಪುಡಾರಿಗಳಿಗಾಗಿ ಎಂದು ಭಾವಿಸಿದಂತಿದೆ. ನರೇಂದ್ರ ಮೋದಿ ಅವರು ಸಾಕಷ್ಟು ಸುಧಾರಣೆಗಳೊಂದಿಗೆ ಕಾಯ್ದೆ ತಂದಿದ್ದು, ಅದನ್ನು ವಿರೋಧಿಸಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಜನರನ್ನು ಎತ್ತಿಕಟ್ಟುವಂಥ ಕುತಂತ್ರ, ಷಡ್ಯಂತ್ರಕ್ಕೆ ಕೈ ಹಾಕಿದ್ದರು. ಅದಕ್ಕೆ ರಾಜ್ಯಪಾಲರು ಅವಕಾಶ ನೀಡಿಲ್ಲ ಎಂದು ಹೇಳಿದರು.

140 ಸ್ಥಾನದಿಂದ 40ಕ್ಕೆ ಇಳಿಕೆ:

ಕಾಂಗ್ರೆಸ್ ಸರ್ಕಾರಕ್ಕೆ 140 ಶಾಸಕರ ಬೆಂಬಲ ಇದೆ ಎಂಬ ಕಾರಣಕ್ಕೆ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈ ಸರ್ಕಾರವು ತಮ್ಮ ನಡವಳಿಕೆ ಸರಿ ಮಾಡಿಕೊಳ್ಳದೇ ಹೋದರೆ, ಒಕ್ಕೂಟದ ವ್ಯವಸ್ಥೆಗೆ ಕಲ್ಲು ಹಾಕುವ ಕೆಲಸವನ್ನು ಸುಧಾರಣೆ ಮಾಡಿಕೊಳ್ಳದೇ ಇದ್ದರೆ 140 ಶಾಸಕರಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ 40ಕ್ಕೆ ಇಳಿಸಬೇಕೆಂದು ಈಗಾಗಲೇ ರಾಜ್ಯದ ಜನರು ಕಾಯುತ್ತಿದ್ದಾರೆ. ಆ ದಿನಗಳೂ ದೂರ ಉಳಿದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.