ಮಾಗಡಿ: ಮಾಜಿ ಶಾಸಕ ಎ.ಮಂಜುನಾಥ್, ಶಾಸಕ ಬಾಲಕೃಷ್ಣ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದರ ವಿರುದ್ಧ ಹಾಲಿ ಶಾಸಕರ ಸಹೋದರ,ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಏಕವಚನದಲ್ಲಿ ವಾಗ್ದಾಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮಾಗಡಿ: ಮಾಜಿ ಶಾಸಕ ಎ.ಮಂಜುನಾಥ್, ಶಾಸಕ ಬಾಲಕೃಷ್ಣ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದರ ವಿರುದ್ಧ ಹಾಲಿ ಶಾಸಕರ ಸಹೋದರ,ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಏಕವಚನದಲ್ಲಿ ವಾಗ್ದಾಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಕಾಮಗಾರಿ ಮೊದಲ ಹಂತ ಪೂರ್ಣವಾದ ಹಿನ್ನೆಲೆಯಲ್ಲಿ ಮಾಗಡಿ ತಾಲೂಕಿಗೆ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ. ಹೇಮಾವತಿ ಯೋಜನೆ ವಿಚಾರವಾಗಿ ಮಾಜಿ ಶಾಸಕ ಎ ಮಂಜುನಾಥ್ ಬಾಲಕೃಷ್ಣರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಉತ್ತರವಾಗಿ ತಿಕ್ಕಲುತನದಿಂದ ಮಾಜಿ ಶಾಸಕರು ಹೇಳಿಕೆ ಕೊಡುತ್ತಿದ್ದಾರೆ. ಕೊಳುಕು ಮಾತುಗಳಿಂದ ಮಿಸ್ಟರ್ ಬಾಲಕೃಷ್ಣ ಎಂದೆಲ್ಲಾ ಮಾತಾಡಿದ್ದಾರೆ. ಅವರು ಚುನಾವಣೆ ಸಂದರ್ಭದಲ್ಲಿ ಅಫಿಡೆವಿಟ್‌ನಲ್ಲಿ ಪೂರ್ವಜರು 300 ಎಕರೆ ಜಮೀನು ಹೊಂದಿದ್ದರು. ಅದನ್ನು ಚುನಾವಣೆ ಸಂದರ್ಭದಲ್ಲಿ ತಿಳಿಸಲಾಗಿದೆ. ಎಚ್.ಡಿ.ಕುಮಾರಸ್ವಾಮಿಯವರು ಶಾಸಕರಾಗುವ ಮೊದಲೇ ಬಾಲಕೃಷ್ಣ 1994ರಲ್ಲಿ ಶಾಸಕರಾಗಿ ಗೆದ್ದಿದ್ದರು. ಬಾಲಕೃಷ್ಣ ಗ್ಯಾಸ್ ಏಜೆನ್ಸಿ, ಬಂಕ್, ಬೆಂಗಳೂರಿನ ಮನೆ, ಬೆಂಗಳೂರಿನ ಅಕ್ಕ-ಪಕ್ಕ ಜಮೀನು ಹೇಗೆ ಮಾಡಿದ್ದಾರೆ ಎಂದು ಮಾಜಿ ಶಾಸಕರು ಪ್ರಶ್ನೆ ಮಾಡುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯಕರ ಮಾತುಗಳಾಡಬೇಕು. ಹಿಂದಿನ ತಹಸೀಲ್ದಾರ್ ಶ್ರೀನಿವಾಸ್ ಒಂದು ಸಭೆಗೆ ಬರುವಂತೆ ಮಾಜಿ ಶಾಸಕರು ಕರೆ ಮಾಡಿದರೆ ನನಗೆ ಬೇರೆ ಕೆಲಸ ಇದೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಒಬ್ಬ ತಹಸೀಲ್ದಾರರನ್ನು ನಿಯಂತ್ರಣ ಮಾಡಕ್ಕಾಗದ ನೀನು ಶಾಸಕನಾಗಿ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಿದ್ದೀಯೆಂದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಹೇಳಿದರು.ದೇವೇಗೌಡರ ಕುಟುಂಬದ ಬಗ್ಗೆ ನಮಗೆ ಗೌರವವಿದೆ. ಹೇಮಾವತಿ ಯೋಜನೆ ಆಯಾ ಮುಖ್ಯಮಂತ್ರಿಗಳ ಅವಧಿಯಲ್ಲಿ ಅದು ಅನುಷ್ಠಾನಕ್ಕೆ ಬಂದಿದ್ದು ಯಾರೇ ಮುಖ್ಯಮಂತ್ರಿಗಳಾದರೂ ಕೂಡ ಯೋಜನೆ ಮುಂದುವರಿಯಲೇಬೇಕು. ಹೇಮಾವತಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಶಾಸಕ ಬಾಲಕೃಷ್ಣ ಕಾರಣರೆಂದೂ ಕ್ಷೇತ್ರದ ಜನತೆಗೆ ತಿಳಿದಿದೆ. ತಾಲೂಕಿನ 63 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದು ಅಶೋಕ್ ಹೇಳಿದರು.
ಈ ವೇಳೆ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಕಾಂಗ್ರೆಸ್ ಮುಖಂಡರಾದ ಶಿವಪ್ರಸಾದ್, ಬಿ.ಎಸ್.ಕುಮಾರ್, ಶಿವರಾಜು ಶ್ರೀನಿವಾಸ್ ಮೂರ್ತಿ, ರವೀಶ್ ಇತರರಿದ್ದರು.