ಪಾಂಡವಪುರ : ಜಿಲ್ಲೆಯ ಜನರು ಜೆಡಿಎಸ್‌ಗೆ ಪುನರ್ಜನ್ಮ ನೀಡುವ ಮೂಲಕ ಜೆಡಿಎಸ್ ಕಥೆ ಮುಗಿದೇ ಹೋಯಿತು ಎಂದುಕೊಂಡಿದ್ದವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದ ಎದುರು ನಡೆದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಅತಿ ಹೆಚ್ಚು ಮತಗಳ ಅಂತರದಿಂದ ಕುಮಾರಸ್ವಾಮಿ ಅವರನ್ನು ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಕೇಂದ್ರ ಸಚಿವರಾಗುವುದಕ್ಕೂ ಜಿಲ್ಲೆಯ ತಂದೆ-ತಾಯಂದಿರೇ ಕಾರಣ. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಅವರ ಹೃದಯ ಇಲ್ಲಿನ ಜನರು ಮತ್ತು ರೈತರಿಗಾಗಿ ಸದಾ ಮಿಡಿಯುತ್ತಿರುತ್ತದೆ ಎಂದರು.
ಕುಮಾರಸ್ವಾಮಿ ಅವರ ಜನತಾದರ್ಶನಕ್ಕೆ ರಾಜ್ಯ ಸರ್ಕಾರ ತಡೆವೊಡ್ಡುವ ಪ್ರಯತ್ನ ಮಾಡಿತು. ಅಧಿಕಾರಿಗಳನ್ನ ಕಳುಹಿಸದೆ ಅಸಡ್ಡೆ ತೋರಿತು. ಮಂಡ್ಯದ ಅಭಿವೃದ್ಧಿ ಹಲವು ವರ್ಷಗಳಿಂದ ಕುಂಠಿತಗೊಂಡಿದೆ. ಅಭಿವೃದ್ಧಿಗೆ ಈಗ ಕುಮಾರಸ್ವಾಮಿ ಅವರು ತೀರ್ಮಾನ ಮಾಡಿದ್ದಾರೆ. ಮಳೆರಾಯ ಆಶೀರ್ವಾದ ಮಾಡಿದ್ದಾನೆ. ಇದು ನಮಗೆ ಶುಭ ಸೂಚನೆ ಎಂದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಮಂಡ್ಯ ಎಂದರೆ ಇಂಡಿಯಾ ಎಂಬುದನ್ನು ಸಾಬಿತು ಮಾಡಿದ್ದೇವೆ. ಇಡೀ ರಾಜ್ಯ ಈ ಕೃತಜ್ಞತಾ ಕಾರ್ಯಕ್ರಮವನ್ನು ನೋಡುತ್ತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಂತಹ ಕಾರ್ಯಕ್ರಮ ಇನ್ನೂ ಜನರ ಮನಸ್ಸಿನಲ್ಲಿರುವುದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದರು.
ಈಗ ನಿಖಿಲ್ ಅವರ ಜವಾಬ್ದಾರಿ ಹೆಚ್ಚಿದೆ. ಪಕ್ಷ ಕಟ್ಟುವುದಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಪಕ್ಷ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದರಿಂದಲೇ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸುವುದರೊಂದಿಗೆ ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕಿದೆ ಎಂದರು.
ಕುಮಾರಸ್ವಾಮಿ ನಡೆಸಿದ ಜನತಾ ದರ್ಶನಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ಕಳುಹಿಸದೇ ದುರಹಂಕಾರ ಪ್ರದರ್ಶಿಸಿದೆ. ರಾಜ್ಯದ ಅಭಿವೃದ್ಧಿಗೆ ಮೋದಿ ಅವರ ಸಹಕಾರ ಬೇಕು. ಆದರೆ, ಕಾಂಗ್ರೆಸ್‌ಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ದೇವೇಗೌಡರ ಕುಟುಂಬವನ್ನು ಮುಗಿಸಲು ಹೊರಟಿದ್ದಾರೆ. ಬಿಜೆಪಿ ಸರ್ಕಾರವನ್ನು ೪೦ ಪರ್ಸೆಂಟ್ ಎನ್ನುತ್ತಿದ್ದರು. ಆದರೆ, ಕಾಂಗ್ರೆಸ್ ೧೦೦ ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದರು.
ಮಾಜಿ ಶಾಸಕ ಡಾ.ಕೆ. ಅನ್ನದಾನಿ ಮಾತನಾಡಿ, ದಲಿತರಿಗೆ ಮೀಸಲಿಟ್ಟಿದ್ದ ೪೨ ಸಾವಿರ ಕೋಟಿ ರು. ಹಣವನ್ನು ಕಾಂಗ್ರೆಸ್ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರು. ಹಣವನ್ನು ಲೂಟಿ ಹೊಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಹಿಂದ ನಾಯಕ ಎನ್ನಿಸಿಕೊಳ್ಳಲು ನೈತಿಕತೆಯೇ ಇಲ್ಲ. ನೈತಿಕತೆ ಇದ್ದಿದ್ದರೆ ಇಷ್ಟೊತ್ತಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು ಎಂದರು.
ಮಂಡ್ಯದಲ್ಲಿ ಕುಮಾರಸ್ವಾಮಿಗೆ ದಲಿತರು ಓಟು ಹಾಕಬೇಡಿ ಎಂದಿದ್ದರು. ಎಲ್ಲಿದ್ದೀರಪ್ಪ ಜಿಲ್ಲೆಯ ದಲಿತ ನಾಯಕರೇ?. ಕೈ ಸರ್ಕಾರ ದಲಿತರ ಹಣವನ್ನು ಲೂಟಿ ಮಾಡಿದ್ದಾರೆ. ಇವತ್ತು ಎಲ್ಲಿದ್ದೀರಪ್ಪ, ಬನ್ನಿ ಇವತ್ತು ಹೋರಾಟ ಮಾಡಿ ಎಂದು ಶಾಸಕ ನರೇಂದ್ರಸ್ವಾಮಿಗೆ ಸವಾಲು ಹಾಕಿದರು.
ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಕುಮಾರಣ್ಣ ನಮ್ಮ ಜಿಲ್ಲೆಗೆ ದೊಡ್ಡ ಶಕ್ತಿ. ಜೆಡಿಎಸ್-ಬಿಜೆಪಿ ಸೇರಿ ಕಾಂಗ್ರೆಸ್ ಸರ್ಕಾರ ತೆಗೆಯುವ ಕೆಲಸ ಶೀಘ್ರವಾಗಿ ಆಗಲಿದೆ ಎಂದು ನಿಶ್ಚಿತವಾಗಿ ಹೇಳಿದರು.
ಸಿಎಂ ನಾನು ಸತ್ಯ ಹರಿಶ್ಚಂದ್ರ ಎಂದು ಹೇಳಿಕೊಳ್ಳುತ್ತಾರೆ. ಮೈಸೂರು ಮುಡಾದ ೧೫ ಸೈಟ್ ಯಾರದ್ದು ಸ್ವಾಮಿ. ನಿಮ್ಮ ಸರ್ಕಾರದ ಹಗರಣಗಳು ಬಹಳಷ್ಟಿದೆ. ಪರಿಶಿಷ್ಟ ಜಾತಿ, ಪಂಗಡದವರ ೧೮೭ ಕೋಟಿ ರು. ಹಣವನ್ನು ಲೂಟಿ ಮಾಡಿದ್ದೀರಲ್ಲ. ಹಣಕಾಸು ಮಂತ್ರಿಯಾಗಿ ಕಣ್ಣು ಮುಚ್ಚಿ ಕುಳಿತಿದ್ದೀರಾ ಸ್ವಾಮಿ. ಸಿಎಂಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸುತ್ತಲೇ ಕೆಲವೇ ದಿನದಲ್ಲಿ ಸರ್ಕಾರ ಉರುಳಲಿದೆ ಎಂದು ಭವಿಷ್ಯ ನುಡಿದರು.
ಎಚ್‌ಡಿಕೆ ಬಂದಾಗಲೆಲ್ಲಾ ಮಳೆ: ಪುಟ್ಟರಾಜು
ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬಂದಾಗಲೆಲ್ಲಾ ಮಳೆ ಬರುತ್ತೆ. ಕುಮಾರಸ್ವಾಮಿ ಬಂದ್ರು ಅಂದ್ರೆ ಮಳೆನೂ ಅವರ ಜೊತೆಯಲ್ಲೇ ಬರುತ್ತೆ. ಅವರು ಮಂಡ್ಯಕ್ಕೆ ಬರುತ್ತಿದ್ದಂತೆ ಕೆಆರ್‌ಎಸ್ ಅಣೆಕಟ್ಟೆ ಅರ್ಧ ತುಂಬಿತು. ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದಾರೆ ಭರ್ಜರಿ ಮಳೆ ಸುರಿಯುತ್ತಿದೆ. ಇದು ಶುಭ ಸಂಕೇತದ ಸೂಚನೆಯಾಗಿದೆ. ಕಬಿನಿ ಜಲಾಶಯ ಭರ್ತಿಯಾಗಿ ೨೦ ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಟ್ಟಿದ್ದಾರೆ. ಅದರಂತೆ ಕೆಆರ್‌ಎಸ್ ಜಲಾಶಯವೂ ಭರ್ತಿಯಾಗಲಿ ಎಂದರು.