‘ಗಣಿ’ ರೆಡ್ಡಿ ಶಿಕ್ಷೆಗೆ ತಡೆ, ಬೇಲ್‌ - ಓಬುಳಾಪುರಂ ಗಣಿ ಹಗರಣದಲ್ಲಿ 7 ವರ್ಷ ಶಿಕ್ಷೆ ಆಗಿತ್ತು

Published : Jun 12, 2025, 04:28 AM IST
Gali Janardhan Reddy

ಸಾರಾಂಶ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ವಿಧಿಸಿದ್ದ 7 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿರುವ ತೆಲಂಗಾಣ ಹೈಕೋರ್ಟ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

 ಹೈದರಾಬಾದ್‌/ಬೆಂಗಳೂರು : ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ವಿಧಿಸಿದ್ದ 7 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿರುವ ತೆಲಂಗಾಣ ಹೈಕೋರ್ಟ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರು ಗುರುವಾರ ಅಥವಾ ಶುಕ್ರವಾರ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಶಾಸಕತ್ವ ಸ್ಥಾನದಿಂದ ಅನರ್ಹತೆ ಭೀತಿ ಎದುರಿಸುತ್ತಿದ್ದ ಜರ್ನಾರ್ದನ ರೆಡ್ಡಿಗೆ ಕೊಂಚ ರಿಲೀಫ್‌ ಸಿಕ್ಕಂತೆ ಆಗಿದೆ.

ಮೇ 6ರಂದು ಸಿಬಿಐ ಕೋರ್ಟ್ ರೆಡ್ಡಿಗೆ 7 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇಬ್ಬರು ಜಾಮೀನುದಾರರಿಂದ ತಲಾ 10 ಲಕ್ಷ ರು. ಮೌಲ್ಯದ ಬಾಂಡ್ ಪಡೆದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೋರ್ಟ್‌ನ ಪೂರ್ವಾನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ ಎಂದು ಆದೇಶಿಸಿದ್ದು, ಪಾಸ್‌ಪೋರ್ಟ್ ಒಪ್ಪಿಸುವಂತೆ ತಿಳಿಸಿದೆ.

ಕರ್ನಾಟಕ-ಆಂಧ್ರಪ್ರದೇಶ ಗಡಿಯಲ್ಲಿರುವ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿ 2009ರ ಡಿ.8ರಂದು ರೆಡ್ಡಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಇಂದು ಅಥವಾ ನಾಳೆ ಬಿಡುಗಡೆ:

ಶಿಕ್ಷೆಗೆ ತಡೆ ಹಾಗೂ ಜಾಮೀನು ಹಿನ್ನೆಲೆಯಲ್ಲಿ, ಜನಾರ್ದನ ರೆಡ್ಡಿ ಗುರುವಾರ ಅಥವಾ ಶುಕ್ರವಾರ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನಾರ್ಧನ ರೆಡ್ಡಿ ವಿರುದ್ಧ ಕರ್ನಾಟಕದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ ಐದು ಪ್ರತ್ಯೇಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಹೀಗಾಗಿ ಇತ್ತೀಚೆಗೆ ಜನಾರ್ದನ ರೆಡ್ಡಿಯನ್ನು ಚಂಚಲಗುಡಾ ಕಾರಾಗೃಹದಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಕ್ಕೆ ಸ್ಥಳಾಂತರಿಸಲಾಗಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು