ಧರ್ಮಾಧರಿತ ರಾಜಕಾರಣ ಪ್ರಜಾತಂತ್ರಕ್ಕೆ ಮಾರಕ

KannadaprabhaNewsNetwork | Published : Feb 16, 2024 1:51 AM

ಸಾರಾಂಶ

ಪ್ರಪಂಚದ ಇತರ ದೇಶಗಳು ಧರ್ಮ ರಾಜಕಾರಣದಿಂದ ಹೊರತಾಗಿದ್ದು, ನಮ್ಮ ದೇಶದಲ್ಲಿ ಮಾತ್ರ ಧರ್ಮ ರಾಜಕಾರಣವೇ ಪ್ರಭುತ್ವ ಸಾಧಿಸಿದೆ. ಹೀಗಾದರೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆಯಾಗಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಶ್ವದಲ್ಲಿ ನಾಗರಿಕತೆಗಳು ಹುಟ್ಟುವುದಕ್ಕೆ ಮುಂಚೆ ಸಂಸ್ಕೃತಿ ಇತ್ತು. ಸಂಸ್ಕೃತಿಯ ಕಾರಣದಿಂದ ನಾಗರಿಕತೆ ಆರಂಭವಾಯಿತು ಎಂದು ಮಾಜಿ ಸಿಎಂ ಡಾ.ಎಂ. ವೀರಪ್ಪಮೊಯ್ಲಿ ತಿಳಿಸಿದರು.

ನಗರದ ಹೊರವಲಯದ ಯಲುವಹಳ್ಳಿ ಗ್ರಾಮದ ಖಾದಿ ಮಂಡಳಿ ಮಾಜಿ ಅಧ್ಯಕ್ಷ ಎನ್. ರಮೇಶ್‌ರ ಗೃಹದಲ್ಲಿ ಮಾಜಿ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ ವಿರಚಿತ ವಿಶ್ವ ಸಂಸ್ಕೃತಿಯ ಮಹಾಯಾನ ಗದ್ಯಕಾವ್ಯದ ಬಿಡುಗಡೆ ಸಮಾರಂಭದ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಚುಂಚಶ್ರೀಗಳಿಂದ ಪುಸ್ತಕ ಬಿಡುಗಡೆ

ಮಾರ್ಚ್ 2 ರಂದು ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಸಂಸ್ಕೃತಿ ಮಹಾಯಾನ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಗ್ರಂಥವನ್ನು ಬಿಡುಗಡೆ ಮಾಡುವರು. ಈ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು ಉಪಸ್ಥಿತಿ ಇರುವವರು ಎಂದು ತಿಳಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮೊಯ್ಲಿ, ಕಾಂಗ್ರೆಸ್ ಆಡಳಿತದ ಕಾಲದಲ್ಲಿ ದೇಶದ ಪ್ರಥಮ ಪ್ರಧಾನಮಂತ್ರಿ ಜವಹರ್ ಲಾಲ್ ನೆಹರು ಆಚರಣೆಗೆ ತಂದ ಪಂಚಶೀಲ ತತ್ವ ಈ ದೇಶದ ಅಭಿವೃದ್ಧಿಗೆ ಮೂಲ ಕಾರಣವಾಯಿತು. ಇಂದಿರಾಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದಾಗ ಜಾರಿಗೆ ತಂದ ಹಸಿರು ಕ್ರಾಂತಿಯಾಯಿತು. ಪ್ರಪಂಚದ ಇತರ ದೇಶಗಳು ಧರ್ಮ ರಾಜಕಾರಣದಿಂದ ಹೊರತಾಗಿದ್ದು, ನಮ್ಮ ದೇಶದಲ್ಲಿ ಮಾತ್ರ ಧರ್ಮ ರಾಜಕಾರಣವೇ ಪ್ರಭುತ್ವ ಸಾಧಿಸಿದೆ. ಹೀಗಾದರೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದರು.

ಹರಿಯಾಣ ಮತ್ತು ಪಂಜಾಬ್ ನಿಂದ ಸಾವಿರ ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ರಾಜಧಾನಿಗೆ ಆಗಮಿಸಿದ್ದಾರೆ ಅವರನ್ನು ದಮನ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ರೈತರಿಗೆ ಎನ್ ಡಿಎ ಸರ್ಕಾರ ಕೊಟ್ಟಿರುವ ಬಳುವಳಿ ಆಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಉತ್ತಮವಾದ ಗ್ಯಾರಂಟಿಗಳಾಗಿದ್ದು, ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಡಿವಿಆರ್ ರಾಜೇಶ್, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಪಕ್ಷದ ಮುಖಂಡರಾದ ಪುರದಗಡ್ಡೆ ಕೃಷ್ಣಪ್ಪ, ಹನುಮಂತಪ್ಪ, ಎಂ.ವಿ. ಕೃಷ್ಣಪ್ಪ, ಯಲುವಹಳ್ಳಿ ಆರ್. ಜನಾರ್ಧನ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಆವುಲರೆಡ್ಡಿ, ಕೆ.ವಿ.ಚಂದ್ರಣ್ಣ, ಮಾಜಿ ನಗರಸಭಾ ಸದಸ್ಯ ಲಕ್ಷ್ಮಣ್ ಮತ್ತಿತರರಿದ್ದರು.

Share this article