ವಿಜಯೇಂದ್ರ ಬದಲಿಸಿ, ಹೊಸ ಅಧ್ಯಕ್ಷರ ನೇಮಿಸಿ - ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಹಕಾರ ನೀಡಿ : ರಮೇಶ್

Published : Jan 16, 2025, 07:28 AM IST
Ramesh jarkiholi

ಸಾರಾಂಶ

‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ’ ಎಂದು ಒಂದೆಡೆ ಹೇಳಿದ್ದಾರೆ.

ಬೆಳಗಾವಿ : ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಒತ್ತಾಯ ನಿಲ್ಲುವಂತೆ ಕಾಣುತ್ತಿಲ್ಲ. ಈ ಬಗ್ಗೆ ಬುಧವಾರ ಮತ್ತೆ ಮಾತನಾಡಿರುವ ಪಕ್ಷದ ಭಿನ್ನ ಬಣದ ನಾಯಕ ಹಾಗೂ ಶಾಸಕ ರಮೇಶ ಜಾರಕಿಹೊಳಿ, ‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ’ ಎಂದು ಒಂದೆಡೆ ಹೇಳಿದ್ದಾರೆ. ಆದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿರುವ ಅವರು, ‘ನಿಮ್ಮ ಮಗನನ್ನು ವಿಫಲ ಅಧ್ಯಕ್ಷ ಎಂದು ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕಕ್ಕೆ ಸಹಕಾರ ಕೊಡಿ’ ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಬಗ್ಗೆ ನಮಗೆ ಅಪಾರ ಗೌರವ ಇದೆ. ಅವರು ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ. ಪ್ರವಾಸ ಮಗನ ಸ್ಥಾನ ಭದ್ರ ಮಾಡೋದಕ್ಕಾ? ಅಥವಾ ಪಕ್ಷ ಭದ್ರ ಮಾಡೋದಕ್ಕೋ ಎಂಬ ಕಾರಣ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಯಡಿಯೂರಪ್ಪರವರೇ ನಿಮಗೆ ವಯಸ್ಸಾಗಿದೆ. ಪಕ್ಷ ಎಲ್ಲವನ್ನೂ ನಿಮಗೆ ಕೊಟ್ಟಿದೆ‌. ದಯವಿಟ್ಟು ಪಕ್ಷ ಬ್ಲ್ಯಾಕ್‌ಮೇಲ್ ಮಾಡಬೇಡಿ. ವಿಜಯೇಂದ್ರ ಬೆನ್ನು ಹತ್ತಿದರೆ ನೀವೂ ಹಾಳಾಗುತ್ತೀರಿ. ಮಗನಾಗಿ ನೋಡಬೇಡಿ, ವಿಫಲಗೊಂಡ ಅಧ್ಯಕ್ಷ ಅಂತಾ ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕಕ್ಕೆ ಸಹಕಾರ ಕೊಡಿ’ ಎಂದು ಅವರು ಒತ್ತಾಯಿಸಿದರು.

ಸರ್ಕಾರ ಕ್ಲೈಮಾಕ್ಸ್‌ ಹಂತಕ್ಕೆ ಬಂದಿದೆ!:

ಬೆಳಗಾವಿ ರಾಜಕಾರಣದಿಂದ ಸರ್ಕಾರ ಪತನವಾಗುತ್ತದೆ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಆ ಕ್ಲೈಮ್ಯಾಕ್ಸ್ ಹಂತ ಈಗ ಬಂದಿದ್ದು, ಅದೀಗ ಸ್ಟಾರ್ಟ್‌ ಆಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವರಾದ ಎಂ.ಬಿ‌.ಪಾಟೀಲ್, ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಬೆಳಗಾವಿಯಿಂದ ಸ್ಟಾರ್ಟ್ ಆಗಿದೆ ನೋಡಿ ಎಂದು ಅನೇಕ ನಾಯಕರು ಹೇಳಿದ್ದಾರೆ. ಈಗಲೂ ಎಚ್ಚರಿಕೆ ವಹಿಸದಿದ್ದರೆ ಸರ್ಕಾರ ಪತನಕ್ಕೆ ಮುಖ್ಯಮಂತ್ರಿ ಕಾರಣರಾಗಲಿದ್ದಾರೆ. ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿರಬಾರದು. ಉಗ್ರವಾದರೆ ಉಳಿಗಾಲವಿದೆ. ಇಲ್ಲವಾದರೆ ಅವರನ್ನು ಅಲ್ಲಿ ಮುಗಿಸುತ್ತಾರೆ’ ಎಂದು ಹೇಳಿದರು.

ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರಕ್ಕೆ ಯತ್ನ:

ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ’ವಕ್ಫ್ ವಿರುದ್ಧ ಹೋರಾಟ ಈಗ ಮೂರು ಹಂತ ಮುಗಿದಿದೆ. ನಾಲ್ಕನೇ ಹಂತದ ಹೋರಾಟದ ಬಗ್ಗೆ ಬೆಂಗಳೂರಲ್ಲಿ ಸೇರುತ್ತೇವೆ. ಮುಂದಿನ ಹಂತದ ಹೋರಾಟ ಬಗ್ಗೆ ಚರ್ಚೆ ಮಾಡುತ್ತೇವೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬಹುಶಃ ವಕ್ಫ್ ಕಾನೂನು ರಚನೆ ಆಗುತ್ತದೆ. ಬೇರೆ ಜಿಲ್ಲೆಗಳಿಗೂ ಬರಲು ಆಹ್ವಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೋಗುತ್ತೇವೆ. ನಾವು ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಸರ್ಕಾರ ತರಲು ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ