ರಾಜ್ಯ ಸರ್ಕಾರದ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲು : ವಿಶ್ವ ಹಿಂದೂ ಪರಿಷದ್‌ ಖಂಡನೆ

KannadaprabhaNewsNetwork | Updated : Apr 09 2025, 04:23 AM IST

ಸಾರಾಂಶ

ರಾಜ್ಯ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ವಿಧೇಯಕ ಖಂಡಿಸಿ ಬೃಹತ್‌ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷದ್‌, ಈ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.  

ಬೆಂಗಳೂರು  : ರಾಜ್ಯ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ವಿಧೇಯಕ ಖಂಡಿಸಿ ಬೃಹತ್‌ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷದ್‌, ಈ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿದ ಸಂಘಟನೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಟಿಟಿಪಿ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ) ಕಾಯಿದೆಗೆ ತಿದ್ದುಪಡಿ ತಂದು ₹2 ಕೋಟಿವರೆಗಿನ ಸಿವಿಲ್ ಕಾಮಗಾರಿ ಗುತ್ತಿಗೆಗಳಲ್ಲಿ ಮತ್ತು ₹1 ಕೋಟಿ ವರೆಗಿನ ಸರಕು ಮತ್ತು ಸೇವಾ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4 ಮೀಸಲಾತಿ ನೀಡಿರುವುದು ಖಂಡನೀಯ. ಸಂವಿಧಾನ ನಿರ್ದಿಷ್ಟವಾಗಿ ರಾಜ್ಯವು ಧರ್ಮ, ಜಾತಿ ಆಧಾರದಲ್ಲಿ ನಾಗರಿಕರ ತಾರತಮ್ಯ ಮಾಡುವುದನ್ನು ನಿಷೇಧಿಸಿದೆ. ಸಂವಿಧಾನ ರಚಿಸುವಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದರು. ರಾಜ್ಯ ಕಾಂಗ್ರೆಸ್‌ನ ಈ ನಡೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.

ವಿವಿಧ ರಾಜ್ಯಗಳಲ್ಲಿ, ಧರ್ಮಾಧಾರಿತ ಮೀಸಲಾತಿಯನ್ನು ಒದಗಿಸಲು ಇದೇ ರೀತಿಯ ಪ್ರಯತ್ನಗಳು ನಡೆದಾಗ ನ್ಯಾಯಾಲಯಗಳು ತಿರಸ್ಕರಿಸಿವೆ. ಹೀಗಿದ್ದರೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಯಾವುದೇ ಕಲ್ಯಾಣ ಉದ್ದೇಶವಿಲ್ಲದ ಅಸಂವಿಧಾನಿಕ ಮಸೂದೆಗೆ ಒಪ್ಪಿಗೆ ನೀಡಬಾರದು. ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರದ ವೋಟ್ ಬ್ಯಾಂಕ್ ಆಗಿರುವ ಸಮುದಾಯವನ್ನು ಓಲೈಸಲು. ನಾಗರಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಒದಗಿಸುವ ಕಾರ್ಯ ರಾಷ್ಟ್ರೀಯ ಸಮಗ್ರತೆ, ಏಕತೆಗೆ ಅಪಾಯ ಉಂಟು ಮಾಡಲಿದೆ ಎಂದರು.ವಿಹಿಂಪ ರಾಜ್ಯಾಧ್ಯಕ್ಷ ದೀಪಕ್‌ ರಾಜ್‌ಗೋಪಾಲ್‌, ದೇವಸಂದ್ರದ ಚಂದ್ರೇಶಾನಂದ ಸ್ವಾಮೀಜಿ , ನಾರಾಯಣನಂದ ಸರಸ್ವತಿ, ಒಕ್ಕಲಿಗ ಮಹಾಸಂಸ್ಥಾನ ನೆಲಮಂಗಲದ ರಮಣಾನಂದ ಸ್ವಾಮೀಜಿ, ನಂದಿ ನರಸಿಂಹಮೂರ್ತಿ ಸ್ವಾಮೀಜಿ, ವಿಹಿಂಪ ವಿಶೇಷ ಸಂಪರ್ಕ ಪ್ರಮುಖರು ಮಂಜುನಾಥ ಸ್ವಾಮಿ, ಪ್ರಾಂತ ಸಹಕಾರ್ಯದರ್ಶಿ ಬಿ.ಇ.ಸುರೇಶ್‌ ಸೇರಿ ಹಲವರಿದ್ದರು.

Share this article