ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಲು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಬಳಿಕ ಅದನ್ನು ಅನುಷ್ಠಾನಕ್ಕೆ ತರಲು ಹಣ ಕಾಸಿನ ಸಮಸ್ಯೆಯಿಂದ ದಲಿತ ಸಮುದಾಯ ಅಭಿವೃದ್ದಿಗೆಂದು ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತರನ್ನು ವಂಚಿಸಲಾಗುತ್ತಿದೆ
ಬಂಗಾರಪೇಟೆ : ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತರನ್ನು ಕಾಂಗ್ರೆಸ್ ಸರ್ಕಾರ ಶೋಷಣೆ ಮಾಡುತ್ತಿದ್ದು, ದಲಿತರ ಹಣವನ್ನು ದಲಿತರ ಕಲ್ಯಾಣ ಕಾರ್ಯಗಳಿಗೆ ಬಳಸಬೇಕೆಂದು ಒತ್ತಾಯಿಸಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮನೆ ಎದುರು ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.ಪಟ್ಟಣದ ವಿವೇಕಾನಂದ ನಗರದಲ್ಲಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮನೆ ಮುಂದೆ ದಲಿತ ಸಂಘಟನೆಗಳ ಕಾರ್ಯಕರ್ತರು ಬೆಳಗ್ಗೆಯಿಂದಲೇ ಧರಣಿ ಮಾಡಿದರೂ ಶಾಸಕರು ಮಾತ್ರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಸಂವಿಧಾನ ವಿರೋಧಿ
ದಲಿತರ ಮತಗಳಿಂದ ಆಯ್ಕೆಯಾದ ಶಾಸಕರು ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಶಾಸಕರ ವಿರುದ್ದ ಘೋಷಣೆಗಳನ್ನು ಕೂಗಿದರು. ಇದು ಆರಂಭ ಅಷ್ಟೇ ಇದೇ ರೀತಿ ದಲಿತ ವಿರೋಧಿ ನೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ೫ಸಾವಿರ ಕಾರ್ಯಕರ್ತರು ಬಂದು ನಿಮ್ಮ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಶಾಸಕರಿಗ ಎಚ್ಚರಿಕೆ ನೀಡಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಲು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಬಳಿಕ ಅದನ್ನು ಅನುಷ್ಠಾನಕ್ಕೆ ತರಲು ಹಣ ಕಾಸಿನ ಸಮಸ್ಯೆಯಿಂದ ದಲಿತರ ಸಮುದಾಯ ಅಭಿವೃದ್ದಿಗೆಂದು ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತರನ್ನು ವಂಚಿಸಲಾಗುತ್ತಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲೆಂದು ದಲಿತ ಶಾಸಕರ ಮನೆ ಮುಂದೆ ಧರಣಿ ನಡೆಸಿದ್ದಾಗಿ ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯ ಬಗ್ಗೆ ಶಾಸಕರಿಗೆ ಮೊದಲೇ ಮಾಹಿತಿ ನೀಡಿದ್ದರೂ ಸಹ ಅವರು ಧರಣಿ ಸ್ಥಳಕ್ಕೆ ಸೌಜನ್ಯಕ್ಕಾದರೂ ಬಾರದೆ ಅಸೆಡ್ಡೆ ತೋರಿ ದಲಿತ ವಿರೋಧಿ ಅನುಸರಿಸುತ್ತಿದ್ದಾರೆ. ಅಲ್ಲದೆ ನಾವು ಶಾಂತಿಯುತವಾಗಿ ಧರಣಿ ಮಾಡಲು ಬಂದಿದ್ದರೂ ಶಾಸಕರು ಪೊಲೀಸರನ್ನು ಮನೆ ಸುತ್ತಲೂ ಸರ್ವಕಾವಲು ಹಾಕಿಸಿದ್ದಾರೆ ಎಂದು ಟೀಕಿಸಿದರು.ಸದನದಲ್ಲಿ ಧ್ವನಿ ಎತ್ತಲಿ
ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಶಾಸಕರು ಇದೇ ರೀತಿ ದಲಿತ ವಿರೋಧಿ ಅನುಸರಿಸಿದರೆ ಮುಂದೆ ೫ ಸಾವಿರ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲಾಗುವುದು. ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮೀಯರಲ್ಲವೆ ತಾಕತ್ತಿದ್ದರೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅನ್ಯ ಕಾರ್ಯಗಳಿಗೆ ಬಳಸುವ ದಲಿತರ ಹಣವನ್ನು ಹಿಂಪಡೆಯಲು ಆಗ್ರಹಿಸಲಿ. ಇಲ್ಲ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಲಿ. ಅದು ಬಿಟ್ಟು ದಲಿತರನ್ನು ದಮನ ಮಾಡಲು ಹೋದರೆ ಅದು ಅವರಿಗೇ ತಿರುಗು ಬಾಣವಾಗಿ ಮುಂದಿನ ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆ ಎಂದು ಎಚ್ಚರಿಕೆ ನೀಡಿದರು.
ದುರ್ಬಳಕೆ ಮಾಡಿಕೊಂಡಿರುವ ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಕ್ರೋಡಿಕರಿಸಿ ಈ ಹಿಂದೆ ನೀವೇ ಹೇಳಿದಂತೆ ೩ಲಕ್ಷ ಕೋಟಿ ಆಂತರಿಕ ವಿಶೇಷ ದಲಿತರ ಬಜೆಟ್ ಮಂಡನೆ ಮಾಡಬೇಕು, ನಮಗೆ ಯಾವುದೇ ಅಭಿವೃದ್ದಿಯಾಗದಿದ್ದರೂ ಪರವಾಗಿಲ್ಲ. ದಲಿತ ಮಕ್ಕಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ದೆಹಲಿಯಲ್ಲಿ ಅಮ್ ಆದ್ಮಿ ಪಾರ್ಟಿ ಮಾಡಿರುವಂತೆ ಗ್ರಾಮಾಂತರ ಮಟ್ಟದಲ್ಲಿ ಸ್ಮಾರ್ಟ್ ಶಾಲೆಗಳನ್ನು ಆರಂಭಿಸಬೇಕು. ಇದು ಜಾರಿಯಾಗದಿದ್ದರೆ ರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ಮಾವಹಳ್ಳಿ ಶಂಕರ್,ಸೂಲಿಕುಮಟೆ ರಮೇಶ್,ಕಲಾವಿದ ಯಲ್ಲಪ್ಪ,ಹುಣಸನಹಳ್ಳಿ ವೆಂಕಟೇಶ್, ಮದಿವಣ್ಣನ್, ರವಿ, ನೇತ್ರ, ಸಿ.ಜೆ.ನಾಗರಾಜ್, ರಮೇಶ್, ಶ್ರೀರಂಗ, ರಘು, ನವೀನ್, ಮುನಿರಾಜು ಇತರರು ಇದ್ದರು.