ಶುದ್ಧ ಹಸ್ತರಾಗಿದ್ದರೆ ಸಿಬಿಐಗೆ ಯಾಕೆ ಹೆದರುತ್ತೀರಾ? : ಪ್ರತಿಪಕ್ಷ ನಾಯಕ ಆರ್.ಅಶೋಕ್

KannadaprabhaNewsNetwork | Updated : Aug 10 2024, 04:22 AM IST

ಸಾರಾಂಶ

ಹೇಳಿದ್ದೆ ಹೇಳೋ ಕಿಸಬಾಯಿ ದಾಸ ಎಂಬಂತೆ ಸಿದ್ದರಾಮಯ್ಯ ಹೇಳಿದ್ದನ್ನೇ ಹೇಳಿದ್ದಾರೆ. ನೀವು ಅಷ್ಟು ಶುದ್ಧಹಸ್ತರಾಗಿದ್ದರೆ ಸಿಬಿಐಗೆ ಯಾಕೆ ಹೆದರುತ್ತೀರಾ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದರು.

 ಮೈಸೂರು :  ಹೇಳಿದ್ದೆ ಹೇಳೋ ಕಿಸಬಾಯಿ ದಾಸ ಎಂಬಂತೆ ಸಿದ್ದರಾಮಯ್ಯ ಹೇಳಿದ್ದನ್ನೇ ಹೇಳಿದ್ದಾರೆ. ನೀವು ಅಷ್ಟು ಶುದ್ಧಹಸ್ತರಾಗಿದ್ದರೆ ಸಿಬಿಐಗೆ ಯಾಕೆ ಹೆದರುತ್ತೀರಾ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ನಲವತ್ತು ವರ್ಷದ ರಾಜಕೀಯದಲ್ಲಿ ಶುದ್ಧವಾಗಿದ್ದೇನೆ ಎಂದು ಸಿದ್ದರಾಮಯ್ಯ ನೂರು ಸಲ ಹೇಳಿದ್ದಾರೆ. ಅಂದ ಮೇಲೆ ಯಾಕೆ ಸಿಬಿಐಗೆ ಹೆದರಬೇಕು. ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡಮಟ್ಟದ ಭಾಷಣ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಹಾಡಿದ್ದನ್ನೇ ಹಾಡು ಕಿಸುಬಾಯಿ ದಾಸಯ್ಯ ಎಂಬಂತೆ ಹೇಳಿದ್ದನ್ನೇ ಹೇಳಿದ್ದಾರೆ ಎಂದರು.

ಶಾಸಕರಿಗೆ ಜನರನ್ನು ಕರೆತರುವಂತೆ ಹೇಳಿದ್ದರು. ಕಾಸು ಕೊಟ್ಟು ಕರೆದುಕೊಂಡು ಬಂದಿದ್ದಾರೆ. ನನ್ನ ನಲವತ್ತು ವರ್ಷದ ರಾಜಕೀಯದಲ್ಲಿ ಶುದ್ಧವಾಗಿದ್ದೇನೆ ಎಂದು ನೂರು ಸಲ ಹೇಳಿದ್ದಾರೆ. ಎಂಡಿಎ ಹಗರಣದಲ್ಲಿ ಹೇಳಿದಂತೆ ವಾಲ್ಮೀಕಿ ಹಗರಣದಲ್ಲಿಯೂ ಏನೂ ಆಗಿಯೇ ಇಲ್ಲ ಎಂದರು. ಪ್ರಕರಣದಲ್ಲಿ ಇ.ಡಿ ಪ್ರವೇಶವಾದ ಮೇಲೆ ಹಗರಣ ನಡೆದಿದೆ ಎಂದು ಒಪ್ಪಿಕೊಂಡು, ಹಗರಣ ನಡೆದಿದೆ. ಆದರೆ ನಮ್ಮ ತಪ್ಪಿಲ್ಲ ಎಂದಿದ್ದಾಗಿ ಹೇಳಿದರು.

ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧೆಡೆಯಿಂದ ತೆಲಂಗಾಣ ಚುನಾವಣೆಗೆ ನಮ್ಮ ರಾಜ್ಯದ ಹಣ ಹೋಗಿದೆ. ಆದರೂ ಕೂಡ ಸಿಎಂ ನಮ್ಮ ಪಾತ್ರ ಏನಿಲ್ಲ ಎಂದು ಹೇಳುತ್ತಿದ್ದಾರೆ. ವಾಲ್ಮೀಕಿ ಹಗರಣ ತನಿಖೆ ಒಂದು ಹಂತಕ್ಕೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ಕೂಡ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ ಎಂದರು.

ಪ್ರತಿ ತಿಂಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಸಿಎಂ ಮಾಡುತ್ತಾರೆ. ಆಗ ನಿಮಗೆ ಹಗರಣ ಬಗ್ಗೆ ಮಾಹಿತಿ ಬರಲಿಲ್ಲವೇ? ಮುಖ್ಯ ಕಾರ್ಯದರ್ಶಿಗಳು ನಿಮ್ಮ ಗಮನಕ್ಕೆ ಈ ವಿಷಯ ತರಲಿಲ್ಲವೇ? ಬಜೆಟ್ ಮಂಡನೆ ವೇಳೆಯೂ ಇದನ್ನು ಕೇಳಿದ್ದರೆ ಗೊತ್ತಾಗುತ್ತಿತ್ತು. ನೀವು ಅದನ್ನು ಮಾಡಲಿಲ್ಲ. ಏಕೆಂದರೆ ಈ ಹಗರಣದಲ್ಲಿ ನೀವೆಲ್ಲ ಭಾಗಿಯಾಗಿದ್ದೀರಾ ಎಂದರು.

ನಾವು ಕೂಡ ಈ ಹಗರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೋಯುತ್ತೇವೆ. ಈ ಹಗರಣ ಕುರಿತು ಸಾಕಷ್ಟು ಮಾಹಿತಿಯನ್ನು ಸಿಎಂಗೆ ನೀಡಿದ್ದೇನೆ. ಸಿಎಂ ನಾನು ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ತೆರೆದ ಪುಸ್ತಕ ಬಿಡಿ, ಕೆಂಪಣ್ಣ ಆಯೋಗ ವರದಿ ನೋಡಿ:

ಎಂಡಿಎ ಹಗರಣ ವಿಷಯದಲ್ಲಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಇದರಲ್ಲಿ ನಿಮ್ಮ ಪಾತ್ರ ಏನಿಲ್ಲ ಎಂದು ಹೇಳಿದ ಮೇಲೂ, ನಮಗಿಂತ ಮುಂಚೆ ನೀವೇಕೆ ಬಾಯಿ ಬಡಿದುಕೊಂಡು ಹೋಗುತ್ತಿದ್ದೀರಾ ಎಂಡಿಎ ಹಗರಣದಂತೆ ರೀಡೂ ಹಗರಣ ಕೂಡ. ನೀವು ಕ್ಲಿನ್, ತೆರೆದ ಪುಸ್ತಕ ಅಂದ್ರೆ ಕೆಂಪಣ್ಣ ಆಯೋಗದ ವರದಿಯನ್ನು ಒಮ್ಮೆ ತೆರೆದು ಬಿಡಿ. ಕೆಂಪಣ್ಣ ಆಯೋಗದ ವರದಿಯ ಮೇಲೆ ಏನೂ ಕ್ರಮ ಕೈಗೊಂಡಿಲ್ಲ. ಈಗ ದೇಸಾಯಿ ಆಯೋಗ ಬೇರೆ. ಇದಕ್ಕೆ ಇನ್ನೆಷ್ಟು ವರ್ಷ ತೆಗೆದುಕೊಳ್ಳುತ್ತೀರಾ ಹೇಳಿ ಎಂದು ಅವರು ಪ್ರಶ್ನಿಸಿದರು.

ನಿಮ್ಮ ಪಕ್ಷದ ನಾಯಕರ ಹೇಳಿಕೆ ಸುಳ್ಳೇ?:

ಎಂಡಿಎ ಹಗರಣದ ವಿರುದ್ಧ ನಾವು ಪಾದಯಾತ್ರೆ ಮಾಡುತ್ತಿದ್ದರೆ ನಿಮ್ಮದೇ ಪಕ್ಷದ ಮರಿಗೌಡರು ಎಂಡಿಎ ಹಗರಣದ ಬಗ್ಗೆ ಇ.ಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಂದರೆ ನಿಮ್ಮ ನಾಯಕರೇ ಸುಳ್ಳು ಹೇಳುತ್ತಾರಾ? ಸದನದಲ್ಲಿ ಏಕೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಿಸಿಕೊಂಡು ಹೋದಿರಿ. ಹೊರಗೆ ಬಂದು ಸುದ್ದಿಗೋಷ್ಠಿ ನಡೆಸುತ್ತೀರಿ. ಸದನದಲ್ಲಿಯೇ ಮಾತನಾಡಿದ್ದರೆ ಏಟಿಗೆ ಎದುರೇಟು ನೀಡುತ್ತಿದ್ದೇವೆ ಎಂದು ಅವರು ಚಾಟಿ ಬೀಸಿದರು.

ಬಿಜೆಪಿ ವಿರುದ್ಧ ಅಬ್ರಹಾಂ ಆರೋಪ ಮಾಡಿದರೆ ಸರಿ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದರೆ ಆತ ಬ್ಲಾಕ್ ಮೇಲರ್ ಅಂತೀರಾ? ಜಂತಕಲ್ ಮೈನಿಂಗ್ ಕೇಸ್ ಹಾಕಿದಾಗ ಅಬ್ರಹಾಂ ಹಾಕಿರುವ ಕೇಸ್ ಸರಿ ಇದೆ ಎಂದು ಹೇಳಿದ್ದಿರಿ. ಆಗಿದ್ರೆ ಸುಪ್ರೀಂ ಕೋರ್ಟ್ ನಲ್ಲಿ ಯಡಿಯೂರಪ್ಪ ಕೇಸ್ ಇದಿಯಲ್ಲ ಅದನ್ನು ಹಿಂದಕ್ಕೆ ಪಡೆಯುತ್ತೀರಾ? ಎಂದು ಅವರು ಪ್ರಶ್ನಿಸಿದರು.

Share this article