ಡಿ.1ರೊಳಗೆ ರೈತರ ಖಾತೆಗಳಿಗೆ ₹5000 ಬರ ಪರಿಹಾರ: ಪರಂ

Published : Nov 21, 2026, 06:41 AM IST
Deputy CM G Parameshwara

ಸಾರಾಂಶ

ಬರಪೀಡಿತ ಪ್ರದೇಶಗಳ ರೈತರಿಗೆ ತಲಾ 5 ಸಾವಿರ ರು. ಪರಿಹಾರದ ಎರಡೂ ಕಂತುಗಳನ್ನು ಡಿ.1ರೊಳಗೆ ರೈತರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ತಿಳಿಸಿದರು.

ಬೆಂಗಳೂರು : ಬರಪೀಡಿತ ಪ್ರದೇಶಗಳ ರೈತರಿಗೆ ತಲಾ 5 ಸಾವಿರ ರು. ಪರಿಹಾರದ ಎರಡೂ ಕಂತುಗಳನ್ನು ಡಿ.1ರೊಳಗೆ ರೈತರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ತಿಳಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು, ಡಿಡಿಎಲ್‌ಆರ್‌ (ಭೂದಾಖಲೆಗಳ ಉಪನಿರ್ದೇಶಕರು), ಉಪವಿಭಾಗಾಧಿಕಾರಿ ಮತ್ತು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಬರ ಪರಿಹಾರವನ್ನು ಎರಡು ಕಂತುಗಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. ಡಿ.1ರೊಳಗೆ ಎರಡೂ ಕಂತಿನ ಒಟ್ಟು 5 ಸಾವಿರ ರು. ಅನ್ನು ರೈತರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಕುರಿತು ಕೆಲ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದು, ಅದರಿಂದ ಗೊಂದಲ ಸೃಷ್ಟಿಯಾಗಿತ್ತು. ಈ ಸಭೆಯಲ್ಲಿ ಆ ಗೊಂದಲ ನಿವಾರಿಸಲಾಗಿದೆ ಎಂದರು.

ಅನುದಾನ ಬಗ್ಗೆ ಕೇಂದ್ರ ಪ್ರತಿಕ್ರಿಯಿಸಿಲ್ಲ:

ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ 22400.58 ಕೋಟಿ ರು. ಅನುದಾನ ಕೇಳಿದ್ದೇವೆ. ಅದಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಕೃಷಿ ಸಚಿವರು, ಗೃಹ ಸಚಿವ ಅಮಿತ್‌ ಶಾ, ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ಕೋರಿ ಪತ್ರ ಬರೆಯಲಾಗಿದ್ದರೂ ಉತ್ತರ ಬಂದಿಲ್ಲ. ಇದು ಒಕ್ಕೂಟ ಸರ್ಕಾರಕ್ಕೆ ಭೂಷಣವಲ್ಲ. ಆದರೆ, ನಾವು ಮಾತ್ರ ಅನುದಾನ ತರುವ ಸಂಬಂಧ ಪ್ರಯತ್ನಗಳನ್ನು ನಿಲ್ಲಿಸಿಲ್ಲ. ಹಾಗೆಯೇ, ರಾಜ್ಯದಲ್ಲಿ 57.93 ಲಕ್ಷ ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗಿದ್ದು, 62,481.88 ಕೋಟಿ ರು. ನಷ್ಟವುಂಟಾಗಿದೆ. ಕೇಂದ್ರದ ನೆರವು ಬಾರದಿದ್ದರೂ ನಾವು ಸುಮ್ಮನಿಲ್ಲ. ಈ ಕಾರಣದಿಂದಲೇ ರೈತರಿಗೆ ತಲಾ 5 ಸಾವಿರ ರು. ಪರಿಹಾರವನ್ನು ಡಿ.1ರೊಳಗೆ ಪಾವತಿಸಲಾಗುತ್ತಿದೆ ಎಂದು ಹೇಳಿದರು.

ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅಗತ್ಯವಿದ್ದರೆ ಇನ್ನೂ ಒಂದು ಕೋಟಿ ರು. ಹೆಚ್ಚುವರಿಯಾಗಿ ನೀಡಲು ಸರ್ಕಾರ ಸಿದ್ಧವಿದೆ. ಎಸ್‌ಡಿಆರ್‌ಎಫ್‌ನಲ್ಲಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 379 ಕೋಟಿ ರು. ಲಭ್ಯವಿದ್ದು, ಅದನ್ನೂ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಹೊಸ ಕೊಳವೆಬಾವಿ ಕೊರೆಯುವ ಜತೆಗೆ ಹಳೇ ಕೊಳವೆಬಾವಿ ದುರಸ್ತಿ ಮತ್ತು ಶುದ್ಧೀಕರಣಕ್ಕೆ ನಿರ್ದೇಶಿಸಲಾಗಿದೆ. ಹಾಗೆಯೇ, ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಈಗಾಗಲೇ 26 ಕೋಟಿ ರು. ವೆಚ್ಚದ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಈಗ ಹೆಚ್ಚುವರಿಯಾಗಿ 33 ಕೋಟಿ ರು. ಅನ್ನು ಮೇವಿನ ಕಿಟ್‌ ಮತ್ತು ಮೇವು ಖರೀದಿಗಾಗಿ ನೀಡಲಾಗುತ್ತಿದೆ ಎಂದರು.

ಡಿ.1ರೊಳಗೆ ಎಲ್ಲ ಅರ್ಹರಿಗೆ ಪಿಂಚಣಿ:

ರಾಜ್ಯದಲ್ಲಿ 83.14 ಲಕ್ಷ ಪಿಂಚಣಿದಾರರಿದ್ದು, ಅವರಲ್ಲಿ 73.47 ಲಕ್ಷ ಮಂದಿಗೆ ಪಿಂಚಣಿ ಸಂದಾಯವಾಗುತ್ತಿದೆ. ಪರಿಶೀಲನೆ ಸಂದರ್ಭದಲ್ಲಿ 6.59 ಲಕ್ಷ ಮಂದಿ ಅನರ್ಹರೆಂದು ಗುರುತಿಸಲಾಗಿದೆ. ಇನ್ನೂ 3.07 ಲಕ್ಷ ಪ್ರಕರಣಗಳ ಅರ್ಹತೆಯ ಕುರಿತು ತೀರ್ಮಾನವಾಗಬೇಕಿದೆ. ಅವುಗಳನ್ನು ಈ ತಿಂಗಳೊಳಗೆ ಪರಿಶೀಲಿಸಿ ಅಂತಿಮಗೊಳಿಸಲು ಸೂಚಿಸಲಾಗಿದೆ. ಡಿ.1ರೊಳಗೆ ಎಲ್ಲ ಅರ್ಹ ಪಿಂಚಣಿದಾರರಿಗೆ ಪಿಂಚಣಿ ತಲುಪುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಡಾ. ಪರಮೇಶ್ವರ್‌ ಹೇಳಿದರು.

5 ಲಕ್ಷ ನಿವೇಶನ ಹಂಚಿಕೆ:

ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ರಾಜ್ಯವ್ಯಾಪಿ 5 ಲಕ್ಷ ನಿವೇಶನ ವಿತರಿಸಲಾಗುತ್ತದೆ. ಗ್ರಾಮೀಣ ಪ್ರದೇಶದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಭೂಮಿ ಗುರುತಿಸಿ ಮತ್ತು ನಿವೇಶನ ನಿರ್ಮಾಣ ಪ್ರಕ್ರಿಯೆಯನ್ನು ಡಿಸೆಂಬರ್‌ ಅಂತ್ಯದೊಳಗೆ ಮುಗಿಸಲಾಗುವುದು. 2007ರ ಜನವರಿಯಲ್ಲಿ ನಿವೇಶನ ಹಂಚಿಕೆ ಆರಂಭಿಸಲಾಗುತ್ತದೆ ಎಂದು ಡಾ. ಪರಮೇಶ್ವರ್‌ ಮಾಹಿತಿ ನೀಡಿದರು.

ರೈತರಿಗೆ ಭೂಮಿಗೆ ಸಂಬಂಧಿಸಿ ಸಮಗ್ರ ದಾಖಲೆ ನೀಡುವ ಸಲುವಾಗಿ ನಮೂನೆ 16ಎ ಹೊಸ ಮಾದರಿಯ ಸಮಗ್ರ ಪಹಣಿ ನೀಡಲಾಗುತ್ತದೆ. ಅದರಲ್ಲಿ ರೈತರ ಫೋಟೋ, ನಕ್ಷೆ, ಇಸಿ, ಆಕಾರ್‌ ಬಂದ್‌ ವಿವರಗಳು ಸೇರಿ ಭೂಮಿಗೆ ಸಂಬಂಧಿಸಿದ ಎಲ್ಲ ಮಾಹಿತಿಯ ಕ್ಯೂಆರ್‌ ಕೋಡ್‌ ಒಂದೇ ದಾಖಲೆಯಲ್ಲಿ ಇರುತ್ತದೆ. ರಾಜ್ಯದ 2.1 ಕೋಟಿಗೂ ಅಧಿಕ ಪಹಣಿಗಳಿದ್ದು, ಸದ್ಯ 9.59 ಲಕ್ಷ 16ಎ ಪಹಣಿಗಳು ಸಿದ್ಧಗೊಂಡಿವೆ. ಮುಂದಿನ ಮೂರು ತಿಂಗಳಲ್ಲಿ ಕನಿಷ್ಠ 1 ಕೋಟಿ ಪಹಣಿಗಳು 16ಎ ವ್ಯಾಪ್ತಿಗೆ ತರುವ ಗುರಿ ನಿಗದಿ ಮಾಡಲಾಗಿದೆ ಎಂದರು.

ಡಿಸೆಂಬರ್‌ನಿಂದ ಭಾರತ್‌ ಜೋಡೋ ಯುವ ಸಂಘ ಕಾರ್ಯಾರಂಭ: ಪರಂ

ರಾಜ್ಯವ್ಯಾಪ್ತಿ 10 ಸಾವಿರ ಭಾರತ್‌ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ಅವುಗಳ ನೋಂದಣಿಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕು ಮತ್ತು ಡಿಸೆಂಬರ್‌ ಮೊದಲ ವಾರದಿಂದ ಸಂಘಗಳು ಅಧಿಕೃತವಾಗಿ ಕಾರ್ಯನಿರ್ವಹಿಸಲು ಆರಂಭಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದು ಡಾ. ಪರಮೇಶ್ವರ್‌ ಹೇಳಿದರು.

ಬರ ಪರಿಹಾರ ವಿತರಣೆಯಲ್ಲಿ ವಿಳಂಬ ಸಲ್ಲದು: ಪರಮೇಶ್ವರ್

ಇದಕ್ಕೂ ಮುನ್ನ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಡಾ.ಪರಮೇಶ್ವರ್‌, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳು ನಿಗದಿತ ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಅದರಲ್ಲೂ ಬರ ಪರಿಹಾರ ವಿತರಣೆ ಹಾಗೂ ರೈತರ ಸಂಕಷ್ಟಗಳಿಗೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸಬೇಕು. ಕೆಲ ಜಿಲ್ಲೆಗಳಲ್ಲಿ ಈವರೆಗೂ ರೈತರಿಗೆ ಬರ ಪರಿಹಾರ ವಿತರಣೆ ಪೂರ್ಣಗೊಂಡಿಲ್ಲ. ಪರಿಹಾರ ಘೋಷಿಸಿ ಎರಡು ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮೆಯಾಗದಿರುವುದು ಸರಿಯಲ್ಲ. ಅರ್ಹ ರೈತರಿಗೆ ಪರಿಹಾರದ ಹಣವನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ, ಕೃಷಿ ಇಲಾಖೆ ಕಾರ್ಯದರ್ಶಿ ತ್ರಿಲೋಕ್‌ಚಂದ್ರ, ಕಂದಾಯ ಇಲಾಖೆ ಆಯುಕ್ತೆ ಮೀನಾ ನಾಗರಾಜ್‌, ಭೂಮಾಪನ ಮತ್ತು ಭೂದಾಖಲೆಗಳ ಆಯುಕ್ತ ರಾಕೇಶ್‌ಕುಮಾರ್‌, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆಯುಕ್ತೆ ಹೊನ್ನಾಂಬ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್‌. ಅನುಚೇತ್‌ ಇತರರಿದ್ದರು.

ಡಿ.1ರೊಳಗೆ ಅರ್ಹರಿಗೆ ಸಾಮಾಜಿಕ ಪಿಂಚಣಿ

ರಾಜ್ಯದಲ್ಲಿ 83.14 ಲಕ್ಷ ಪಿಂಚಣಿದಾರರಿದ್ದು, ಅವರಲ್ಲಿ 73.47 ಲಕ್ಷ ಮಂದಿಗೆ ಪಿಂಚಣಿ ಸಂದಾಯವಾಗುತ್ತಿದೆ. ಪರಿಶೀಲನೆ ಸಂದರ್ಭದಲ್ಲಿ 6.59 ಲಕ್ಷ ಮಂದಿ ಅನರ್ಹರೆಂದು ಗುರುತಿಸಲಾಗಿದೆ. ಡಿ.1ರೊಳಗೆ ಎಲ್ಲ ಅರ್ಹ ಪಿಂಚಣಿದಾರರಿಗೆ ಪಿಂಚಣಿ ತಲುಪಲಿದೆ.

- ಡಾ। ಜಿ. ಪರಮೇಶ್ವರ್‌, ಗೃಹ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

₹16000 ಕೋಟಿಯ 2 ಗ್ರಾಮೀಣ ಯೋಜನೆಗೆ ಸಿಎಂ ಚಾಲನೆ
ಚುನಾವಣಾ ವ್ಯವಸ್ಥೆಯ ಲೋಪ ಜನರಿಗೆ ಅರ್ಥ ಆಗೋವರೆಗೂ ನಾವು ಸೋಲೋಕೆ ರೆಡಿ: ರಾಗಾ