;Resize=(412,232))
ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳನ್ನು ಮಂಗಳವಾರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಟೀಕಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಶಿಕಾಗೋ ವಿವಿಯ ವಿದ್ಯಾರ್ಥಿಗಳೆದುರು, ‘ಭಾರತದ ಪ್ರಜಾಪ್ರಭುತ್ವ ಪವಿತ್ರವಾಗಿದೆ. ಆದರೆ ಚುನಾವಣಾ ವ್ಯವಸ್ಥೆಯಲ್ಲಿ ಲೋಪವಿದೆ. ಹಾಗಂತ ನಾವು ಚುನಾವಣೆಗಳನ್ನು ಬಹಿಷ್ಕರಿಸಲ್ಲ. ಲೋಪ ಇದೆ ಎಂದು ಜನರಿಗೆ ಅರಿವಾಗುವವರೆಗೂ ನಾವು ಸೋಲು ಎದುಸಿಸಲು ಸಿದ್ಧ’ ಎಂದಿದ್ದಾರೆ
ಇದು ಪುನಃ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದ್ದು, ‘ರಾಹುಲ್ ದೇಶ ವಿರೋಧಿ ಪ್ರಚಾರಕ’ ಎಂದು ಕಿಡಿಕಾರಿದೆ.
ಶಿಕಾಗೋ ವಿವಿ ವಿದ್ಯಾರ್ಥಿಗಳ ಜತೆ ಮಾತನಾಡಿದ ಅವರು, ‘ಭಾರತೀಯ ಪ್ರಜಾಪ್ರಭುತ್ವ ಪವಿತ್ರವಾದುದು. ಚುನಾವಣಾ ವ್ಯವಸ್ಥೆಯಲ್ಲಿ ಲೋಪಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಚುನಾವಣೆಯನ್ನೇ ಬಹಿಷ್ಕರಿಸಿದರೆ ದೇಶದ ಪ್ರಜಾಪ್ರಭುತ್ವವೇ ಅಂತ್ಯಗೊಳ್ಳುವುದು. ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸೋಲುಗಳನ್ನು ಎದುರಿಸಲು ಸಿದ್ಧವಿದೆಯೇ ಹೊರತು, ಚುನಾವಣೆಯಿಂದ ದೂರ ಉಳಿಯುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಂತ್ಯಗೊಳಿಸಲು ಬಯಸುವುದಿಲ್ಲ.‘ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಲೋಪವಿದೆ ಎಂದು ಜನರಿಗೆ ಅರಿವು ಆಗುವವರೆಗೆ ಚುನಾವಣೆಗಳಲ್ಲಿ ನಾವು ಸೋಲನ್ನು ಅನುಭವಿಸಲು ಸಿದ್ಧ’ ಎಂದು ಹೇಳಿದರು.
‘ದೇಶದ ಪ್ರಜಾಪ್ರಭುತ್ವದಲ್ಲಿ ಸಮಸ್ಯೆಗಳಿವೆ ಎಂದು ಹೇಳಲು ನನಗೆ ಶೇ.100, 200 ಅಥವಾ 300ರಷ್ಟು ಪುರಾವೆಗಳು ಬೇಕಾಗುತ್ತವೆ. ಹಾಗೆಂದು ಚುನಾವಣೆಯಲ್ಲಿ ಭಾಗವಹಿಸದಂತೆ ಪ್ರತಿಪಕ್ಷಗಳಿಗೆ ಹೇಳಿದರೆ ಪ್ರಜಾಪ್ರಭುತ್ವ ಅಂತ್ಯಗೊಂಡಂತೆ. ಹೀಗಾಗಿ ಚುನಾವಣಾ ಅಕ್ರಮಗಳು ಮತ್ತು ವ್ಯವಸ್ಥೆಯಲ್ಲಿನ ಲೋಪಗಳನ್ನು ಜನರ ಮುಂದೆ ಬಹಿರಂಗಪಡಿಸುವುದು ಕಾಂಗ್ರೆಸ್‌ನ ಕಾರ್ಯತಂತ್ರವಾಗಿದೆ. ದೇಶದ ಜನರಿಗೆ ವ್ಯವಸ್ಥೆಯ ಸ್ಥಿತಿಗತಿ ಅರ್ಥವಾಗುವ ವರೆಗೂ ಚುನಾವಣಾ ಸೋಲುಗಳನ್ನು ಎದುರಿಸಲು ಪಕ್ಷ ಸಿದ್ಧವಿದೆ’ ಎಂದು ತಿಳಿಸಿದರು.
2 ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಕೊಲಂಬಿಯಾ ವಿವಿಯ ವಿದ್ಯಾರ್ಥಿಗಳೆದುರು, ‘ಭಾರತ ತೀವ್ರ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ’ ಎಂದು ಆರೋಪಿಸಿದ್ದರು.
ಇದಕ್ಕೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದ್ದು, ‘ರಾಹುಲ್ ಭಾರತ ವಿರೋಧಿ ಪ್ರಚಾರ ಮಾಡುವ ನಾಯಕ. ಭಾರತದ ಪ್ರಜಾಪ್ರಭುತ್ವ ರೋಗಪೀಡಿತವಾಗಿದೆ. ತಾನು ಪರಿವಾರವನ್ನು ಪ್ರೀತಿಸುತ್ತೇನೆ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತೇನೆ ಎಂಬುದನ್ನು ರಾಹುಲ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕಿಡಿಕಾರಿದ್ದಾರೆ.
ಇನ್ನೋರ್ವ ವಕ್ತಾರ ಸಿ.ಆರ್. ಕೇಶವನ್ ಮಾತನಾಡಿ, ‘ಚುನಾವಣಾ ಪ್ರಕ್ರಿಯೆಯ ಕುರಿತಾದ ತಮ್ಮ ಆರೋಪಗಳನ್ನು ಸಾಬೀತುಪಡಿಸಲು ರಾಹುಲ್ ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ ಎಂದು ಟೀಕಿಸಿದ್ದಾರೆ. ಜತೆಗೆ, ‘2014ರ ಚುನಾವಣೆಗಳ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ತರ್ಕಹೀನ ಮತ್ತು ಭ್ರಮಾತ್ಮಕವಾದ ಪ್ರಲಾಪಗಳಾಗಿವೆ. ಏಕೆಂದರೆ, ಆ ವೇಳೆ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ’ ಎಂದು ನೆನಪಿಸಿದ್ದಾರೆ.
ರಾಹುಲ್ ಹೇಳಿದ್ದೇನು?
ನಿನ್ನೆ ಶಿಕಾಗೋ ವಿವಿಯಲ್ಲಿ ವಿದ್ಯಾರ್ಥಿಗಳ ಜತೆಗೆ ರಾಹುಲ್‌ಗಾಂಧಿ ಸಂವಾದ
ಈ ವೇಳೆ ಭಾರತದಲ್ಲಿನ ಚುನಾವಣಾ ವ್ಯವಸ್ಥೆಯಲ್ಲಿ ದೋಷ ಎಂದು ಆರೋಪದೋಷವಿದ್ದರೂ ನಾವು ಚುನಾವಣೆ ಬಹಿಷ್ಕಾರ ಮಾಡಲ್ಲ ಎಂದ ರಾಗಾ
ಚುನಾವಣಾ ಲೋಪಗಳನ್ನು ಜನರ ಮುಂದೆ ಬಹಿರಂಗ ಮಾಡೋದು ಕಾರ್‍ಯತಂತ್ರ
ಬಿಜೆಪಿ ಆಕ್ರೋಶ
ರಾಹುಲ್ ಭಾರತ ವಿರೋಧಿ ಪ್ರಚಾರ ಮಾಡುವ ನಾಯಕ. ಭಾರತದ ಪ್ರಜಾಪ್ರಭುತ್ವ ರೋಗಪೀಡಿತವಾಗಿದೆ. ತಾನು ಪರಿವಾರವನ್ನು ಪ್ರೀತಿಸುತ್ತೇನೆ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತೇನೆ ಎಂಬುದನ್ನು ರಾಹುಲ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಪ್ರದೀಪ್ ಭಂಡಾರಿ, ಬಿಜೆಪಿ ವಕ್ತಾರ