ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಆರೆಸ್ಸೆಸ್‌ ಯಾವತ್ತೂ ಹಸ್ತಕ್ಷೇಪ ಮಾಡಲ್ಲ

ಸಾರಾಂಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ಸ್ವತಂತ್ರ ಪಕ್ಷವಾಗಿದ್ದು, ಅಧ್ಯಕ್ಷರ ಆಯ್ಕೆ ವಿಚಾರ ಆ ಪಕ್ಷದ ಆಂತರಿಕ ವಿಚಾರವಾಗಿದೆ. ಪಕ್ಷದಲ್ಲಿ ಎಲ್ಲದ್ದಕ್ಕೂ ಒಂದು ವ್ಯವಸ್ಥಿತ ಪ್ರಕ್ರಿಯೆ ಇರುತ್ತದೆ. ಆ ಪ್ರಕಾರ ಸೂಕ್ತ ಸಮಯದಲ್ಲಿ ಪಕ್ಷ ನಿರ್ಣಯ ಕೈಗೊಳ್ಳಲಿದೆ. ಪಕ್ಷವು ಸಂಘದ ಸಲಹೆ ಕೇಳಿದರೆ, ಸಲಹೆ ನೀಡುವುದಾಗಿ ಹೇಳಿದರು.

ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಸಂಬಂಧ ಕೇಂದ್ರದಿಂದ ನಿರ್ದಿಷ್ಟ ಅಧಿಸೂಚನೆ ಅಥವಾ ಮಾರ್ಗಸೂಚಿ ಹೊರಬಿದ್ದಿಲ್ಲ. ಆದರೂ ಚರ್ಚೆಗಳು ನಡೆಯುತ್ತಿವೆ. ಇದೊಂದು ರಾಜಕೀಯ ಅಜೆಂಡಾದಂತೆ ಕಾಣುತ್ತಿದೆ. ಈ ವಿಚಾರದಲ್ಲಿ ಸಂಘವು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.

ರಾಜ್ಯಗಳ ಗಡಿ ಪ್ರದೇಶದ ಭಾಷಾ ಸಮಸ್ಯೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಲ್ಲಿ ದೇಶ ಮೊದಲು. ಸಂವಿಧಾನದ ಪೀಠಿಕೆಯಲ್ಲಿ ಸಹ ನಾವು ಭಾರತೀಯರು ಎಂದಿದೆ. ಹೀಗಾಗಿ ದೇಶದಲ್ಲಿರುವ ನಾವೆಲ್ಲ ಒಂದು ಎಂಬ ಭಾವನೆ ಇರಬೇಕು. ಭಾರತವು ವಿವಿಧ ಧರ್ಮ, ಭಾಷೆ, ಮತ, ಪಂಥ, ಸಂಸ್ಕೃತಿ ಸೇರಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಿವಿಧತೆಯಲ್ಲಿ ಏಕತೆ ಇರುವ ದೇಶ ಭಾರತ. ಇದನ್ನು ಅರ್ಥ ಮಾಡಿಕೊಂಡರೆ, ಗಡಿ-ಭಾಷೆ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಿದರು.

Share this article